Slapgate : 2008ರಲ್ಲಿ ನಡೆದ ಸ್ಲ್ಯಾಪ್ ಗೇಟ್ ವಿಡಿಯೋ ವೈರಲ್ ಆಗಿದೆ. ಲಲಿತ್ ಮೋದಿ ಇದನ್ನು ಬಿಡುಗಡೆ ಮಾಡಿದ್ದು, ವಿಡಿಯೋ ನೋಡ್ತಿದ್ದಂತೆ ಶ್ರೀಶಾಂತ್ ಪತ್ನಿ ಕೋಪ ನೆತ್ತಿಗೇರಿದೆ.
ಐಪಿಎಲ್ (IPL) ಇತಿಹಾಸದ ಅತ್ಯಂತ ವಿವಾದಾತ್ಮಕ ಘಟನೆಗಳಲ್ಲಿ ಸ್ಲ್ಯಾಪ್ಗೇಟ್ (Slapgate) ಒಂದು. ಇದು ನಡೆದು 18 ವರ್ಷಗಳು ಕಳೆದಿವೆ. ಕಿಂಗ್ಸ್ ಇಲೆವೆನ್ ಪಂಜಾಬ್ನ ಶ್ರೀಶಾಂತ್ ಅವರಿಗೆ ಮುಂಬೈ ಇಂಡಿಯನ್ಸ್ನ ಹರ್ಭಜನ್ ಸಿಂಗ್ ಹೊಡೆದ ಘಟನೆ ಭಾರೀ ಸುದ್ದಿ ಮಾಡಿತ್ತು. ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್ ಈ ಘಟನೆಯನ್ನು ಮರೆತು, ತಮ್ಮ ಜೀವನ ಮುಂದುವರೆಸಿದ್ದಾರೆ. 18 ವರ್ಷಗಳ ಹಿಂದೆ ಏನಾಗಿತ್ತು ಎನ್ನುವ ಬಗ್ಗೆ ಈವರೆಗೆ ಯಾರಿಗೂ ಸರಿಯಾಗಿ ತಿಳಿದಿರಲಿಲ್ಲ. ಇದ್ರ ವಿಡಿಯೋ ಯಾರ ಕೈಗೂ ಸಿಕ್ಕಿರಲಿಲ್ಲ. ಈಗ ವಿಡಿಯೋ ವೈರಲ್ ಆಗಿದೆ. ಲಲಿತ್ ಮೋದಿ ಇದ್ರ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಆಸ್ಟ್ರೇಲಿಯಾದ ದಂತಕಥೆ ಮೈಕೆಲ್ ಕ್ಲಾರ್ಕ್ ಜೊತೆ ಪಾಡ್ಕ್ಯಾಸ್ಟ್ ಬಿಯಾಂಡ್ 23 ಕ್ರಿಕೆಟ್ನಲ್ಲಿ ಪಾಲ್ಗೊಂಡಿದ್ದ ಲಲಿತ್ ಮೋದಿ, ವಿಡಿಯೋ ಹಂಚಿಕೊಂಡಿದ್ದಾರೆ. ಲಲಿತ್ ಮೋದಿ ವಿಡಿಯೋ ರಿಲೀಸ್ ಮಾಡ್ತಿದ್ದಂತೆ ಶ್ರೀಶಾಂತ್ ಪತ್ನಿ ಲಲಿತ್ ಮೋದಿ ವಿರುದ್ಧ ಆಕೋಶ ವ್ಯಕ್ತಪಡಿಸಿದ್ದಾರೆ.
ಲಲಿತ್ ಮೋದಿ – ಮೈಕೆಲ್ ಕ್ಲಾರ್ಕ್ ವಿರುದ್ಧ ಶ್ರೀಶಾಂತ್ ಪತ್ನಿ ಆಕ್ರೋಶ : ವಿಡಿಯೋ ವೈರಲ್ ಆದ್ಮೇಲೆ ಶ್ರೀಶಾಂತ್ ಪತ್ನಿ ಭುವನೇಶ್ವರಿ ಕೋಪಗೊಂಡಿದ್ದಾರೆ. ಲಲಿತ್ ಮೋದಿ ಮತ್ತು ಕ್ಲಾರ್ಕ್ ಕ್ರಮವನ್ನು ಟೀಕಿಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಲಲಿತ್ ಮೋದಿ ಮತ್ತು ಮೈಕೆಲ್ ಕ್ಲಾರ್ಕ್, ನೀವು ನಾಚಿಕೆಯಾಗ್ಬೇಕು. ನೀವು ಕೇವಲ ಅಗ್ಗದ ಜನಪ್ರಿಯತೆ ಮತ್ತು ಹೆಚ್ಚಿನ ವೀವ್ಸ್ ಆಗಿ 2008 ರ ಘಟನೆಯನ್ನು ಮತ್ತೆ ಎತ್ತಿದ್ದೀರಿ. ಶ್ರೀಶಾಂತ್ ಮತ್ತು ಹರ್ಭಜನ್ ಇಬ್ಬರೂ ಈಗ ತಮ್ಮ ಜೀವನದಲ್ಲಿ ಮುನ್ನಡೆದಿದ್ದಾರೆ. ಈಗ ಅವರು ಮಕ್ಕಳ ತಂದೆ. ಇಂತಹ ಪರಿಸ್ಥಿತಿಯಲ್ಲಿ, ಹಳೆಯ ಗಾಯಗಳನ್ನು ಅಗೆಯುವುದು ಅತ್ಯಂತ ಅಮಾನವೀಯ ಮತ್ತು ಅಸಹ್ಯಕರ ಕೃತ್ಯವಾಗಿದೆ ಎಂದು ಭುವನೇಶ್ವರಿ ಬರೆದಿದ್ದಾರೆ.
ಶ್ರೀಶಾಂತ್ ಲೈಫ್ ಚಾಲೆಂಜ್ ಗಳನ್ನು ಗೆದ್ದು, ಘನತೆಯಿಂದ ಹೊಸ ಜೀವನ ಶುರು ಮಾಡಿದ್ದಾರೆ. ಆದ್ರೆ ಇಂತಹ ಕೆಲ್ಸದಿಂದಾಗಿ ಕುಟುಂಬಕ್ಕೆ ಹಳೆ ನೋವು ಮತ್ತೆ ಕಾಡ್ತಿದೆ. ಇದು ಪ್ಲೇಯರ್ಸ್ ಗೆ ಮಾತ್ರವಲ್ಲ ಮುಗ್ಧ ಮಕ್ಕಳಿಗೂ ನೋವುಂಟು ಮಾಡುತ್ತಿದೆ. ಅವರು ಯಾವುದೇ ತಪ್ಪಿಲ್ಲದೆ ಮುಜುಗರ ಎದುರಿಸ್ತಿದ್ದಾರೆ. ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ ಎಂದು ಭುವನೇಶ್ವರಿ ಬರೆದಿದ್ದಾರೆ.
ಇಷ್ಟೇ ಅಲ್ಲ, ಕಾನೂನು ಕ್ರಮದ ಬಗ್ಗೆಯೂ ಭುವನೇಶ್ವರಿ ಹೇಳಿದ್ದಾರೆ. ಅಗ್ಗದ ಮತ್ತು ಅಮಾನವೀಯ ಕೃತ್ಯ ಎಸಗಿದ್ದಕ್ಕಾಗಿ ನಿಮ್ಮಿಬ್ಬರ ಮೇಲೂ ಕಾನೂನು ಕ್ರಮ ಜರುಗಿಸಬೇಕು. ಯಾವುದೇ ವೀಡಿಯೊ ಶ್ರೀಶಾಂತ್ ಘನತೆಗೆ ಧಕ್ಕೆ ತರೋದಿಲ್ಲ. ಫ್ಯಾಮಿಲಿ ಮತ್ತು ಮಕ್ಕಳನ್ನು ನೋಯಿಸುವ ಮೊದಲು ದೇವರಿಗೆ ಭಯಪಡಬೇಕು ಎಂದು ನೇರಾನೇರವಾಗಿ ಭುವನೇಶ್ವರಿ ದಾಳಿ ನಡೆಸಿದ್ದಾರೆ. ಹಳೆಯ ಘಟನೆ ಇನ್ನೂ ಕುಟುಂಬದಲ್ಲಿ ಆಳವಾದ ನೋವು ನೀಡ್ತಿದೆ ಎಂದ ಭುವನೇಶ್ವರಿ, ಕೆಲ ದಿನಗಳ ಹಿಂದೆ ಪಾಡ್ಕ್ಯಾಸ್ಟ್ ನಲ್ಲಿ ಹರ್ಭಜನ್ ಭೇಟಿಯಾದಾಗ ಮಗಳು ಹಾಯ್ ಎನ್ನಲು ನಿರಾಕರಿಸಿದ್ಲು ಎಂದಿದ್ದಾರೆ.
2008ರಲ್ಲಿ ಏನಾಗಿತ್ತು ? : ಮುಂಬೈ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲವೆನ್ ಗೆಲುವು ಸಾಧಿಸಿತ್ತು. ಘಟನೆ ನಡೆದ ಸಂದರ್ಭದಲ್ಲಿ ಫೀಲ್ಡ್ ಕ್ಯಾಮರಾ ಆಫ್ ಆಗಿತ್ತು. ಸೆಕ್ಯೂರಿಟಿ ಕ್ಯಾಮರಾ ಮಾತ್ರ ಆನ್ ಇತ್ತು. ಅದ್ರಲ್ಲಿ ಘಟನೆ ರೆಕಾರ್ಡ್ ಆಗಿದ್ರೂ, ಈವರೆಗೆ ಅದನ್ನು ಬಿಡುಗಡೆ ಮಾಡಿರಲಿಲ್ಲ. ಶ್ರೀಶಾಂತ್ ಅಳುವ ವಿಡಿಯೋವನ್ನು ಮಾತ್ರ ಜನರು ನೋಡಿದ್ರು. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಕೈ ಕುಲುಕಲು ಬಂದ ಶ್ರೀಶಾಂತ್ ಗೆ ಬಜ್ಜಿ ಹೊಡೆದಿದ್ದಾರೆ. ಶ್ರೀಶಾಂತ್ ಗೆ ಏನಾಯ್ತು ಅನ್ನೋದು ತಿಳಿಯಲಿಲ್ಲ. ಗಲಾಟೆ ದೊಡ್ಡದಾಗ್ಬಹುದು ಎಂಬ ಆತಂಕದಲ್ಲಿ ಉಳಿದ ಆಟಗಾರರು ಇವರಿಬ್ಬರನ್ನು ತಡೆದಿದ್ದಾರೆ. ಕೈಕುಲುಕುವ ವೇಳೆ ದುರಾದೃಷ್ಟ ಅಂತ ಶ್ರೀಶಾಂತ್ ಹೇಳಿದ್ದೇ ಕಾರಣ ಎನ್ನಲಾಗ್ತಿದೆ. ಘಟನೆ ನಂತ್ರ ಹರ್ಭಜನ್ ಅವರನ್ನು 11 ಪಂದ್ಯಗಳಿಂದ ಹೊರಗಿಡಲಾಗಿತ್ತು. ಕೊನೆಗೆ ಹರ್ಭಜನ್, ಕ್ಷಮೆ ಕೇಳಿದ್ದು, ಶ್ರೀಶಾಂತ್ ಹಾಗೂ ಹರ್ಭಜನ್ ಸ್ನೇಹಿತರಾಗಿ ಜೀವನ ನಡೆಸ್ತಿದ್ದಾರೆ.
