ಕ್ವಾಲಿಫೈಯರ್ 2 ಪಂದ್ಯದಲ್ಲಿ ಒಂದಲ್ಲ ಎರಡು ಬಾರಿ ಟಾಸ್ ಹಾಕಲಾಗಿದೆ. ಮೊದಲ ಬಾರಿಗೆ ಗುಜರಾತ್ ಪರ ಟಾಸ್ ಬಿದ್ದರೆ, ಎರಡನೇ ಬಾರಿಗೆ ರಾಜಸ್ಥಾನ ರಾಯಲ್ಸ್ ಪರವಾಗಿತ್ತು. ಅಷ್ಟಕ್ಕೂ 2 ಬಾರಿ ಟಾಸ್ ಹಾಕಿ ಟೈಟಾನ್ಸ್‌ಗೆ ಅನ್ಯಾಯ ಮಾಡಿದ್ರಾ?
ಚಂಡೀಘಡ (ಮೇ.29) ಐಪಿಎಲ್ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಐಪಿಎಲ್ 2026 ಟೂರ್ನಿಯ ಫೈನಲ್ ಪ್ರವೇಶದ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಹೋರಾಟ ನಡೆಸುತ್ತಿದೆ. ಈ ಪಂದ್ಯದ ಟಾಸ್ ಅತ್ಯಂತ ಮುಖ್ಯವಾಗಿತ್ತು. ಆದರೆ ಟಾಸ್ ಪ್ರಕ್ರಿಯೆ ಎರಡು ಬಾರಿ ಮಾಡಲಾಗಿದೆ. ಮೊದಲ ಬಾರಿ ಟಾಸ್ ಹಾಕಿದಾಗ ಗುಜರಾತ್ ಟೈಟಾನ್ಸ್ ಪರವಾಗಿದ್ದರೆ, ಎರಡನೇ ಬಾರಿ ಟಾಸ್ ಹಾಕಿದಾಗ ರಾಜಸ್ಥಾನ ರಾಯಲ್ಸ್ ಪರವಾಗಿ ಬಿದ್ದಿದೆ. ರಾಜಸ್ಥಾನ ರಾಯಲ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಎರಡು ಬಾರಿ ಟಾಸ್ ಹಾಕಿ ಇದೀಗ ವಿವಾದ ಸೃಷ್ಟಿಯಾಗಿದೆ.
ಎರಡನೇ ಬಾರಿ ಟಾಸ್ ಹಾಕಲು ಸೂಚಿಸಿದ ಮ್ಯಾಚ್ ರೆಫ್ರಿ
2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಾಯಕ ಶುಬಮನ್ ಗಿಲ್ ಕಾಯಿನ್ ಹಿಡಿದು ನಿಂತಿದ್ದರು. ಇತ್ತ ರಾಜಸ್ಥಾನ ರಾಯಲ್ಸ್ ನಾಯಕ ರಿಯಾನ್ ಪರಾಗ್ ಕಾಲ್ ನೀಡಬೇಕಿತ್ತು. ರವಿ ಶಾಸ್ತ್ರಿ ನಿರೂಪಣೆ ಮಾಡುತ್ತಿದ್ದರೆ, ಇತ್ತ ಮ್ಯಾಚ್ ರೆಫ್ರಿ ಪ್ರಕಾಶ್ ಭಟ್ ಅಧಿಕೃತವಾಗಿ ಘೋಷಣೆ ಮಾಡಲು ನಿಂತಿದ್ದರು. ಗಿಲ್ ಕಾಯಿನ್ ಟಾಸ್ ಮಾಡಿದರೆ ರಿಯಾನ್ ಪರಾಗ್ ತಮ್ಮ ಕಾಲ್ ಹೇಳಿದ್ದಾರೆ. ಆದರೆ ರಿಯಾನ್ ಪರಾಗ್ ಹೇಳಿದ ನಿರ್ಧಾರ ಮ್ಯಾಚ್ ರೆಫ್ರಿಗೆ ಕೇಳಿಸಲೇ ಇಲ್ಲ. ಹೀಗಾಗಿ ತಕ್ಷಣವೇ ಮ್ಯಾಚ್ ರೆಫ್ರಿ ಟಾಸ್ ಮತ್ತೊಮ್ಮೆ ಹಾಕಲು ಸೂಚಿಸಿದ್ದಾರೆ.
ರಿಯಾನ್ ಪರಾಗ್ ಹೇಳಿದ ನಿರ್ಧಾರ ಕೇಳಿಸದ ಕಾರಣ ಮ್ಯಾಚ್ ರೆಫ್ರಿ ಕಾಯಿನ್ ನೆಲಕ್ಕೆ ಬೀಳುವ ಮೊದಲೇ ಟಾಸ್ ಪ್ರಕ್ರಿಯೆ ಮತ್ತೊಮ್ಮೆ ಮಾಡಲು ಸೂಚಿಸಿದ್ದಾರೆ. ಬಳಿಕ ಕಾಯಿನ್ ಹೆಕ್ಕಿ ತಂದು ಗಿಲ್‌ಗೆ ನೀಡಿದ್ದಾರೆ. ಆದರೆ ಮೊದಲ ಬಾರಿ ಟಾಸ್ ಹಾಕಿದಾಗ ರಿಯಾನ್ ಪರಾಗ್ ನಿರ್ಧಾರದ ಬದಲು ಗುಜರಾತ್ ಪರ ಬಿದ್ದಿತ್ತು. ಎರಡನೇ ಬಾರಿ ಟಾಸ್ ಹಾಕಿದಾಗ ರಾಜಸ್ಥಾನ ರಾಯಲ್ಸ್ ಪರ ಬಿದ್ದಿತ್ತು. ರಾಜಸ್ಥಾನ ರಾಯಲ್ಸ್ ತನ್ನ ಬ್ಯಾಟಿಂಗ್ ಸ್ಟ್ರೆಂಥ್ ಹಾಗೂ ಪಿಚ್ ಅನುಗುಣವಾಗಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಆಕ್ರೋಶ ಹೊರಹಾಕಿದ ಶುಬಮನ್ ಗಿಲ್
ಮೊದಲ ಟಾಸ್ ಹಾಕಿದಾಗ ಗುಜರಾತ್ ಪರ ಟಾಸ್ ಬಿದ್ದಿತ್ತು. ತಾವು ಕೂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದೇವು. ಈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ಸ್ಕೋರ್ ಮಾಡುವ ಲೆಕ್ಕಾಚಾರದಲ್ಲಿದ್ದೇವು.ಪಿಚ್ ಕೂಡ ಇದಕ್ಕೆ ಸಹಾಕಾರಿಯಾಗಿತ್ತು. ಆದರೆ ಅನಿರೀಕ್ಷಿತ ಬೆಳವಣಿಗೆ ಕಾರಣ ಟಾಸ್‌ನಲ್ಲಿ ಸೋಲಾಗಿದೆ ಎಂದು ಗಿಲ್ ಹೇಳಿದ್ದಾರೆ.


