ಚೆನ್ನೈ ನಾಯಕತ್ವವನ್ನು ಮರಳಿ ಎಂಎಸ್ ಧೋನಿಗೆ ನೀಡಿದ ರವೀಂದ್ರ ಜಡೇಜಾ!
2022ರ ಐಪಿಎಲ್ ಋತುವಿನ ಆರಂಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದಿದ್ದ ಎಂಎಸ್ ಧೋನಿ ಈ ಜವಾಬ್ದಾರಿಯನ್ನು ಆಲ್ರೌಂಡರ್ ರವೀಂದ್ರ ಜಡೇಜಾಗೆ ನೀಡಿದ್ದರು. ಆದರೆ, ಲೀಗ್ ನಲ್ಲಿ ತಂಡದ ಹೀನಾಯ ಪ್ರದರ್ಶನದ ಬಳಿಕ ರವೀಂದ್ರ ಜಡೇಜಾ ನಾಯಕತ್ವವನ್ನು ಎಂಎಸ್ ಧೋನಿಗೆ ಮರಳಿಸಿದ್ದಾರೆ.
ಬೆಂಗಳೂರು (ಏ. 30): ಕಳಪೆ ಫಾರ್ಮ್ ನಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ (Chennai super kings) ತಂಡದಲ್ಲಿ ಐಪಿಎಲ್ (IPL) ಸೀಸನ್ ನ ಮಧ್ಯದಲ್ಲಿಯೇ ದೊಡ್ಡ ಬದಲಾವಣೆಯಾಗಿದೆ. 2022ರ ಐಪಿಎಲ್ ಋತುವಿನ ಆರಂಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ ಸ್ಥಾನದಿಂದ ಕೆಳಗಿಳಿದಿದ್ದ ಎಂಎಸ್ ಧೋನಿ (MS Dhoni) ಈ ಜವಾಬ್ದಾರಿಯನ್ನು ಆಲ್ರೌಂಡರ್ ರವೀಂದ್ರ ಜಡೇಜಾಗೆ (Ravindra Jadeja) ನೀಡಿದ್ದರು. ಆದರೆ, ಲೀಗ್ ನಲ್ಲಿ ತಂಡದ ಹೀನಾಯ ಪ್ರದರ್ಶನದ ಬಳಿಕ ರವೀಂದ್ರ ಜಡೇಜಾ ನಾಯಕತ್ವವನ್ನು ಎಂಎಸ್ ಧೋನಿಗೆ ಮರಳಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಲಿ ಋತುವಿನಲ್ಲಿ ಆಡಿದ 8 ಪಂದ್ಯಗಳ ಪೈಕಿ ಎರಡರಲ್ಲಿ ಮಾತ್ರವೇ ಗೆಲುವು ಸಾಧಿಸಿದೆ. ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪ್ಲೇ ಆಫ್ ಹಂತಕ್ಕೇರುವ ಆಸೆ ಬಹುತೇಕ ಭಗ್ನವಾಗಿದೆ.
ರವೀಂದ್ರ ಜಡೇಜಾ ಅವರು ತಮ್ಮ ಆಟದ ಮೇಲೆ ಹೆಚ್ಚು ಗಮನಹರಿಸಲು ನಾಯಕತ್ವವನ್ನು ತ್ಯಜಿಸಲು ನಿರ್ಧರಿಸಿದ್ದಾರೆ ಮತ್ತು ಎಂಎಸ್ ಧೋನಿ ಅವರೇ ತಂಡವನ್ನು ಮುನ್ನಡೆಸಬೇಕು ಎಂದು ವಿನಂತಿಸಿದ್ದಾರೆ. ಎಂಎಸ್ ಧೋನಿ ಅವರು ಹೆಚ್ಚಿನ ಆಸಕ್ತಿಯಿಂದ ಮತ್ತು ಜಡೇಜಾ ಅವರ ಆಟದ ಮೇಲೆ ಕೇಂದ್ರೀಕರಿಸುವ ಸಲುವಾಗಿ ಚೆನ್ನೈ ತಂಡವನ್ನು ಮುನ್ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
2012 ರಿಂದಲೂ ಚನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿರುವ ರವೀಂದ್ರ ಜಡೇಜಾ ಐಪಿಎಲ್ ನ ಯಶಸ್ವಿ ತಂಡಗಳ ಪೈಕಿ ಒಂದಾಗಿರುವ ತಂಡವನ್ನು ಮುನ್ನಡೆಸಿದ ಮೂರನೇ ನಾಯಕ ಎನಿಸಿದ್ದರು. ಧೋನಿ ಅಲ್ಲದೆ, ಸುರೇಶ್ ರೈನಾ ಕೂಡ ಚೆನ್ನೈ ತಂಡಕ್ಕೆ ನಾಯಕರಾಗಿದ್ದರು. ಈ ವರ್ಷದ ಆರಂಭದಲ್ಲಿ 40 ವರ್ಷದ ಎಂಎಸ್ ಧೋನಿ ನಾಯಕತ್ವವನ್ನು ರವೀಂದ್ರ ಜಡೇಜಾ ಹೆಗಲಿಗೆ ಹಸ್ತಾಂತರಿಸಿದ್ದರು.
ಐಪಿಎಲ್ ಹಾಗೂ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿ ಸೇರಿ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 213 ಪಂದ್ಯಗಳಲ್ಲಿ ಮುನ್ನಡೆಸಿದ್ದ ಎಂಎಸ್ ಧೋನಿ, 130 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, 81 ಪಂದ್ಯಗಳಲ್ಲಿ ಸೋಲು ಕಂಡಿದ್ದರು. ಐಪಿಎಲ್ ನಲ್ಲಿ ನಾಲ್ಕು ಹಾಗೂ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ಎರಡು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
IPL 2022: ಆರ್‌ಸಿಬಿಗೆ ಹ್ಯಾಟ್ರಿಕ್, ಟೈಟಾನ್ಸ್ ಪ್ಲೇ ಆಫ್ ಹಾದಿ ಸುಗಮ
ಚೆನ್ನೈ ತಂಡ ಮಾತ್ರವಲ್ಲದೆ, ರವೀಂದ್ರ ಜಡೇಜಾ ಕೂಡ ಕಳಪೆ ಫಾರ್ಮ್ ನಲ್ಲಿದ್ದಾರೆ. ಈವರೆಗೂ ಆಡಿರುವ 8 ಪಂದ್ಯಗಳಿಮದ ಜಡೇಜಾ 22.40ರ ಸರಾಸರಿಯಲ್ಲಿ ಕೇವಲ 112 ರನ್ ಬಾರಿಸಿದ್ದರೆ, ಬೌಲಿಂಗ್ ನಿಂದ 5 ವಿಕೆಟ್ ಉರುಳಿಸಿದ್ದಾರೆ. ಪ್ರತಿ ಓವರ್ ಗೆ 8.19ರಂತೆ ರನ್ ನೀಡಿದ್ದಾರೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, 2022ರ ಐಪಿಎಲ್ ನಲ್ಲಿ ಮೊದಲ ನಾಲ್ಕು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಹಿನ್ನಡೆ ಕಂಡಿತ್ತು. ಏಪ್ರಿಲ್ 12 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸುವ ಮೂಲಕ ಮೊದಲ ಜಯ ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್, ಆ ನಂತರ ಮತ್ತೆ ಎರಡು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಏಪ್ರಿಲ್ 21 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಲೀಗ್ ನ 2ನೇ ಸೋಲು ಕಂಡಿತ್ತು. ಮೊದಲ ನಾಲ್ಕು ಪಂದ್ಯಗಳಲ್ಲಿ ಕ್ರಮವಾಗಿ ಕೆಕೆಆರ್, ಲಕ್ನೋ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಕಂಡಿತ್ತು.
ಮಿಥಾಲಿ ರಾಜ್ ಜೀವನಾಧಾರಿತ ಸಿನಿಮಾ ರಿಲೀಸ್‌ಗೆ ಡೇಟ್ ಫಿಕ್ಸ್..!
ಭಾನುವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಚೆನ್ನೈ ತಂಡ, ಕೇನ್ ವಿಲಿಯಮ್ಸನ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಮರಳಿ ಧೋನಿ ನಾಯಕತ್ವದಲ್ಲಿ ಇದು ಚೆನ್ನೈ ತಂಡದ ಹಾಲಿ ಋತುವಿನ ಮೊದಲ ಪಂದ್ಯವಾಗಿರಲಿದೆ.