* ಆರ್‌ಸಿಬಿ ಎದುರು ಭರ್ಜರಿ ಗೆಲುವು ಸಾಧಿಸಿದ ಗುಜರಾತ್ ಟೈಟಾನ್ಸ್* ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡ ಹಾರ್ದಿಕ್ ಪಾಂಡ್ಯ ಪಡೆ* ಪಂದ್ಯವನ್ನು ಫಿನಿಶ್ ಮಾಡಿದ ತೆವಾಟಿಯಾ-ಮಿಲ್ಲರ್ ಜೋಡಿ

ನವಿ ಮುಂಬೈ(ಏ.30): ರಾಹುಲ್ ತೆವಾಟಿಯಾ-ಡೇವಿಡ್ ಮಿಲ್ಲರ್ ಆಕರ್ಷಕ ಜತೆಯಾಟ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಗುಜರಾತ್ ಟೈಟಾನ್ಸ್ ತಂಡವು 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಗುಜರಾತ್ ಟೈಟಾನ್ಸ್ ತಂಡವು 9 ಪಂದ್ಯಗಳಲ್ಲಿ 8 ಗೆಲುವು ಸಾಧಿಸುವ ಮೂಲಕ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು ತನ್ನ ಪ್ಲೇ ಆಫ್ ಹಾದಿಯನ್ನು ಸುಗಮಗೊಳಿಸಿಕೊಂಡರೆ, ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.

ಇಲ್ಲಿನ ಬ್ರೆಬೋರ್ನ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನೀಡಿದ್ದ 171 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಮೊದಲ ವಿಕೆಟ್‌ಗೆ ಶುಭ್‌ಮನ್ ಗಿಲ್ ಹಾಗೂ ವೃದ್ದಿಮಾನ್ ಸಾಹ ಉತ್ತಮ ಆರಂಭವನ್ನೇ ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 51 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ಬುನಾದಿ ಹಾಕಿಕೊಟ್ಟರು. 22 ಎಸೆತಗಳಲ್ಲಿ 29 ರನ್ ಬಾರಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ವೃದ್ದಿಮಾನ್ ಸಾಹರನ್ನು ಪೆವಿಲಿಯನ್ನಿಗಟ್ಟುವಲ್ಲಿ ವನಿಂದು ಹಸರಂಗ ಯಶಸ್ವಿಯಾದರು. ಇದರ ಬೆನ್ನಲ್ಲೇ ಮತ್ತೋರ್ವ ಆರಂಭಿಕ ಬ್ಯಾಟರ್ ಶುಭ್‌ಮನ್‌ ಗಿಲ್‌ಗೆ ಶಾಬಾಜ್ ಅಹಮ್ಮದ್ ಪೆವಿಲಿಯನ್ ಹಾದಿ ತೋರಿಸಿದರು. ಶುಭ್‌ಮನ್ ಗಿಲ್‌ 28 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 31 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ನಾಯಕ ಹಾರ್ದಿಕ್ ಪಾಂಡ್ಯ(03) ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲು ಶಾಬಾಜ್ ಅವಕಾಶ ನೀಡಲಿಲ್ಲ. ಅಭಿನವ್ ಮನೋಹರ್ ಬದಲಿಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಸಾಯಿ ಸುದರ್ಶನ್ ಚುರುಕಿನ 20 ರನ್ ಬಾರಿಸಿ ಹಸರಂಗಗೆ ಎರಡನೇ ಬಲಿಯಾದರು.

ತೆವಾಟಿಯಾ-ಮಿಲ್ಲರ್ ಜುಗಲ್ಬಂದಿ: ಸುದರ್ಶನ್ ವಿಕೆಟ್ ಪತನವಾದಾಗ ಗುಜರಾತ್ ಟೈಟಾನ್ಸ್ ತಂಡವು 4 ವಿಕೆಟ್ ಕಳೆದುಕೊಂಡು 95 ರನ್ ಗಳಿಸಿತ್ತು. ಕೊನೆಯ 43 ಎಸೆತಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವು ಗೆಲ್ಲಲು ಇನ್ನೂ 76 ರನ್‌ಗಳ ಅಗತ್ಯವಿತ್ತು. 5ನೇ ವಿಕೆಟ್‌ಗೆ ಈ ಜೋಡಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಯಿತು. 5ನೇ ವಿಕೆಟ್‌ಗೆ 79 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ರಾಹುಲ್ ತೆವಾಟಿಯಾ ಅಜೇಯ 43 ರನ್ ಸಿಡಿಸಿದರೆ, ಡೇವಿಡ್ ಮಿಲ್ಲರ್ ಅಜೇಯ 39 ರನ್ ಚಚ್ಚಿದರು.

IPL 2022: ಕೊಹ್ಲಿ, ರಜತ್ ಸ್ಪೋಟಕ ಫಿಫ್ಟಿ, ಗುಜರಾತ್‌ ಟೈಟಾನ್ಸ್‌ಗೆ ಸವಾಲಿನ ಗುರಿ

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಆರಂಭವನ್ನು ಪಡೆಯಲು ವಿಫಲವಾಯಿತು. ನಾಯಕ ಫಾಫ್ ಡು ಪ್ಲೆಸಿಸ್ ಖಾತೆ ತೆರೆಯುವ ಮುನ್ನವೇ ಪ್ರದೀಪ್ ಸಂಗ್ವಾನ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ಎರಡನೇ ವಿಕೆಟ್‌ಗೆ ರಜತ್ ಪಾಟೀದರ್ ಹಾಗೂ ವಿರಾಟ್ ಕೊಹ್ಲಿ 99 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 58 ರನ್ ಬಾರಿಸಿ ಶಮಿಗೆ ವಿಕೆಟ್ ಒಪ್ಪಿಸಿದರೆ, ರಜತ್ ಪಾಟೀದರ್ 32 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 52 ರನ್ ಬಾರಿಸಿ ಸಂಗ್ವಾನ್‌ಗೆ ಎರಡನೇ ಬಲಿಯಾದರು. ಈ ಜೋಡಿ ಬೇರ್ಪಡುತ್ತಿದ್ದಂತೆಯೇ ಆರ್‌ಸಿಬಿ ರನ್‌ ವೇಗಕ್ಕೆ ಕಡಿವಾಣ ಬಿದ್ದಿತು. 

ಆರ್‌ಸಿಬಿ ಪರ ಫಿನಿಶರ್ ಪಾತ್ರ ನಿಭಾಯಿಸುತ್ತಿದ್ದ ದಿನೇಶ್ ಕಾರ್ತಿಕ್ ಹಾಗೂ ಶಾಬಾಜ್ ಅಹಮ್ಮದ್ ತಲಾ 2 ರನ್‌ ಬಾರಿಸಿದರು. ಆಲ್ರೌಂಡರ್‌ ಗ್ಲೆನ್ ಮ್ಯಾಕ್ಸ್‌ವೆಲ್‌ 18 ಎಸೆತಗಳನ್ನು ಎದುರಿಸಿ 33 ರನ್ ಬಾರಿಸಿದರೆ, ಕೊನೆಯಲ್ಲಿ ಮಹಿಪಾಲ್ ಲೋಮ್ರಾರ್ 8 ಎಸೆತಗಳಲ್ಲಿ 16 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 170ರ ಗಡಿ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್

ರಾಯಲ್ ಚಾಲೆಂಜರ್ಸ್‌ ಬೆಂಗಳೂರು: 170/6
ವಿರಾಟ್ ಕೊಹ್ಲಿ: 58
ಪ್ರದೀಪ್ ಸಂಗ್ವಾನ್: 19/2

ಗುಜರಾತ್ ಟೈಟಾನ್ಸ್: