ಐಪಿಎಲ್ ಫೈನಲ್ ಪಂದ್ಯಕ್ಕೆ ಕೆಲವೇ ಕ್ಷಣಗಳು ಬಾಕಿ. ಈಗಾಗಲೇ ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಆತಂಕ ಎದುರಾಗಿದೆ. 

ಅಹಮ್ಮದಾಬಾದ್ (ಮೇ.31) ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿದೆ. ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಈ ನಿರ್ಧಾರಗಳ ಕುರಿತು ಚರ್ಚೆಗಳು ನಡೆಯುತ್ತಿದೆ. ಆದರೆ ಪಂದ್ಯದ ನಡುವೆ ಮಳೆ ಆತಂಕ ಎದುರಾಗಿದೆ. ಹವಾಮಾನ ಇಲಾಖೆ ಅಹಮ್ಮದಾಬಾದ್ ಹಾಗೂ ಸುತ್ತ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಹೀಗಾಗಿ ಪಂದ್ಯದ ನಡುವೆ ಮಳೆ ಬಂದರೂ ಅಚ್ಚರಿಯಿಲ್ಲ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಮಳೆ ಅಡ್ಡಿಯಾದರೆ ಇಡೀ ಲೆಕ್ಕಾಚಾರವೇ ಉಲ್ಟಾ ಆಗಲಿದೆ.

ಹವಾಮಾನದಲ್ಲಿ ಭಾರಿ ಬದಲಾವಣೆ

ಇಂದು ಮಧ್ಯಾಹ್ನದ ವೇಳೆ ಅಹಮ್ಮದಾಬಾದ್‌ನಲ್ಲಿ ತಾಪಮಾನ 39ಕ್ಕೆ ಏರಿಕೆಯಾಗಿತ್ತು. ಇದರ ಬೆನ್ನಲ್ಲೇ ಹವಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿತ್ತು. ಅಹಮ್ಮದಾಬಾದ್‌ನಲ್ಲಿ ಇಂದು ರಾತ್ರಿ ಮಳೆ ಸಾಧ್ಯತೆಯನ್ನು ಹವಾಮಾನ ಇಲಾಖೆ ಸೂಚಿಸಿದೆ. ಸದ್ಯ ಮೋಡ ಕವಿಡ ವಾತಾವರವಿದೆ. ಆದರೆ ಮಳೆ ಸಾದ್ಯತೆಗಳು ಕಾಣುತ್ತಿಲ್ಲ. ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ.

ಫೈನಲ್ ಪಂದ್ಯಕ್ಕಿದೆ ಮೀಸಲು ದಿನ

ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇಂದು ರಾತ್ರಿ ಮಳೆಯಿಂದ ಕೆಲ ಕಾಲ ಪಂದ್ಯ ಅಡ್ಡಿಯಾದರೆ ಪಂದ್ಯದ ಓವರ್ ಕಡಿತಗೊಳ್ಳಲಿದೆ. ಬಾರಿ ಮಳೆಯಿಂದ ಪಂದ್ಯ ಮುಂದುವರಿಸಲು ಸಾಧ್ಯವಾಗದಿದ್ದರೆ, ಪಂದ್ಯ ಮೀಸಲ ದಿನಕ್ಕೆ ಮುಂದೂಡಲಾಗುತ್ತದೆ. ಹೀಗಾದಲ್ಲಿ ಜೂನ್ 1 ರಂದು ಫೈನಲ್ ಪಂದ್ಯ ಮತ್ತೆ ನಡೆಯಲಿದೆ.

ಗೆಲುವಿನ ಕುತೂಹಲ

ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ರೋಚಕ ಹೋರಾಟಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈಗಾಗಲೇ ಆರ್‌ಸಿಬಿ ಅಭಿಮಾನಿಗಳು ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕುಳಿತಿದ್ದಾರೆ. ಸಂಭ್ರಮ ಜೋರಾಗಿದೆ. ಗೆಲುವು ಯಾರಿಗೆ ಅನ್ನೋ ಕುತೂಹಲ ಹೆಚ್ಚಾಗಿದೆ. ಎರಡು ತಂಡಗಳು ಬಲಿಷ್ಠವಾಗಿದ್ದು, ರೋಚಕ ಹೋರಾಟ ನಡೆಯುವುದರಲ್ಲಿ ಅನುಮಾನವಿಲ್ಲ.

2025ರಲ್ಲಿ ಇದೇ ಮೈದಾನದಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿತ್ತು. ಅಂದು ಕೂಡ ಪಿಚ್ ನಂಬರ್ 6ರಲ್ಲಿ ಪಂದ್ಯ ಆಡಲಾಗಿತ್ತು. ಇದೀಗ 2026ರ ಫೈನಲ್ ಪಂದ್ಯ ಕೂಡ ಪಿಚ್ ನಂ.6ರಲ್ಲೇ ಆಡಲಾಗುತ್ತಿದೆ. ಗುಜರಾತ್ ಟೈಟಾನ್ಸ್‌ಗೆ ತವರಾಗಿದ್ದರೆ, ಆರ್‌ಸಿಬಿ ಇತಿಹಾಸ ರಚಿಸಿದ ಮೈದಾನ ಇದು. ಹೀಗಾಗಿ ಹೋರಾಟದ ತೀವ್ರತೆ ಹೆಚ್ಚಾಗಲಿದೆ. ಉಭಯ ತಂಡದ ಅಭಿಮಾನಿಗಳು ತಮ್ಮ ತಂಡ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.