ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ನ್ಯೂಜಿಲೆಂಡ್ನ ಗ್ಲೆನ್ ಫಿಲಿಫ್ಸ್ ಅವರನ್ನು ಕೈಬಿಡುವ ಚಿಂತನೆಯಲ್ಲಿತ್ತು. ಆದರೆ ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಫಿಲಿಫ್ಸ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇದರಿಂದಾಗಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೇ ಅಥವಾ ಬಿಡಬೇಕೇ ಎಂಬ ದೊಡ್ಡ ಗೊಂದಲಕ್ಕೆ ಗುಜರಾತ್ ಟೈಟಾನ್ಸ್ ಸಿಲುಕಿದೆ.
ಬೆಂಗಳೂರು: ಬಹುನಿರೀಕ್ಷಿತ 2027ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿಗೆ ಎಲ್ಲಾ ಫ್ರಾಂಚೈಸಿಗಳು ಸಿದ್ದತೆ ಮಾಡಿಕೊಳ್ಳುತ್ತಿವೆ. ಡಿಸೆಂಬರ್ ಮಧ್ಯ ಭಾಗದಲ್ಲಿ 20ನೇ ಸೀಸನ್ ಐಪಿಎಲ್ ಮಿನಿ ಹರಾಜು ನಡೆಯಲಿದೆ. ಇದಕ್ಕೂ ಒಂದು ತಿಂಗಳು ಮುಂಚಿತವಾಗಿ ಎಲ್ಲಾ ಫ್ರಾಂಚೈಸಿಗಳು ನವೆಂಬರ್ ಮಧ್ಯಭಾಗದ ಒಳಗಾಗಿ ತಮ್ಮ ರೀಟೈನ್ ಹಾಗೂ ರಿಲೀಸ್ ಮಾಡಲಿರುವ ಆಟಗಾರರ ಹೆಸರನ್ನು ಅಂತಿಮಗೊಳಿಸಬೇಕಿದೆ. ಹೀಗಿರುವಾಗಲೇ ಕಳೆದ ಸೀಸನ್ ರನ್ನರ್ ಅಪ್ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಇದೀಗ ದೊಡ್ಡ ಗೊಂದಲಕ್ಕೆ ಸಿಲುಕಿದೆ. ಇದಕ್ಕೆ ಕಾರಣವಾಗಿದ್ದು ನ್ಯೂಜಿಲೆಂಡ್ನ ಸ್ಪೋಟಕ ಬ್ಯಾಟರ್ನ ಮಿಂಚಿನ ಆಟ.
ಹೌದು, ಕೆಲದಿನಗಳ ಹಿಂದಷ್ಟೇ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಕೇವಲ ಇಬ್ಬರು ಆಟಗಾರರನ್ನು ಮಿನಿ ಹರಾಜಿಗೂ ಮುನ್ನ ರಿಲೀಸ್ ಮಾಡಲು ತೀರ್ಮಾನ ಮಾಡಿದೆ ಎಂದು ವರದಿಯಾಗಿತ್ತು. ಈ ಪೈಕಿ ಒಬ್ಬರು ಭಾರತದ ಯುವ ಪ್ರತಿಭಾನ್ವಿತ ಬ್ಯಾಟರ್ ಶಾರುಕ್ ಖಾನ್, ಇನ್ನೊಬ್ಬರು ನ್ಯೂಜಿಲೆಂಡ್ನ ಬಿಗ್ ಹಿಟ್ಟರ್ ಗ್ಲೆನ್ ಫಿಲಿಫ್ಸ್. ಯಾಕೆಂದರೆ ಈ ಇಬ್ಬರು ಕಳೆದೆರಡು ಸೀಸನ್ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು 2025ರ ಐಪಿಎಲ್ ಮೆಗಾ ಹರಾಜಿನಲ್ಲಿ 2 ಕೋಟಿ ರುಪಾಯಿ ನೀಡಿ ಗ್ಲೆನ್ ಫಿಲಿಫ್ಸ್ ಅವರನ್ನು ಖರೀದಿಸಿತ್ತು. ಆದರೆ 2025ರಲ್ಲಿ ಸಂಪೂರ್ಣ ಬೆಂಚ್ ಕಾಯಿಸಿದ್ದ ಫಿಲಿಫ್ಸ್ಗೆ 2026ರ ಐಪಿಎಲ್ನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿತ್ತು. ಆದರೆ ಕಳೆದ ಸೀಸನ್ನಲ್ಲಿ ಫಿಲಿಫ್ಸ್ 6 ಪಂದ್ಯಗಳನ್ನಾಡಿ ಕೇವಲ 67 ರನ್ ಗಳಿಸಿದ್ದರು. ಹೀಗಾಗಿ ಮುಂಬರುವ ಮಿನಿ ಹರಾಜಿಗೂ ಮುನ್ನ ಫಿಲಿಫ್ಸ್ಗೆ ಗೇಟ್ಪಾಸ್ ನೀಡುವ ಆಲೋಚನೆಯಲ್ಲಿತ್ತು ಗುಜರಾತ್ ಟೈಟಾನ್ಸ್ ಫ್ರಾಂಚೈಸಿ.
ಭಾರತೀಯ ಬೌಲರ್ಗಳನ್ನು ಚೆಂಡಾಡಿದ ಫಿಲಿಫ್ಸ್:
ಹೀಗಿರುವಾಗಲೇ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲೆರಡು ಟಿ20 ಪಂದ್ಯಗಳಲ್ಲೂ ಗ್ಲೆನ್ ಫಿಲಿಫ್ಸ್ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಭಾರತೀಯ ಬೌಲರ್ಗಳನ್ನು ಕೊಂಡಾಡಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ಫಿಲಿಫ್ಸ್ ಕೇವಲ 40 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 82 ರನ್ ಸಿಡಿಸಿದ್ದರು. ಇದೀಗ ಎರಡನೇ ಟಿ20 ಪಂದ್ಯದಲ್ಲೂ ಗ್ಲೆನ್ ಫಿಲಿಫ್ಸ್ ಆರ್ಭಟ ಮುಂದುವರೆದಿದೆ. ಭಾರತ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಫಿಲಿಫ್ಸ್ ಕೇವಲ 43 ಎಸೆತಗಳಲ್ಲಿ ತಲಾ 4 ಬೌಂಡರಿ ಹಾಗೂ ಸಿಕ್ಸರ್ ಸಹಿತ ಚುರುಕಿನ 70 ರನ್ ಬಾರಿಸಿ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾಗಿದ್ದಾರೆ. ಈ ಮೂಲಕ ತಾವಿನ್ನೂ ಭರ್ಜರಿ ಲಯದಲ್ಲಿಯೇ ಇದ್ದೇನೆ ಎನ್ನುವ ಸ್ಪಷ್ಟ ಸಂದೇಶವನ್ನು ಫಿಲಿಫ್ಸ್ ರವಾನಿಸಿದ್ದಾರೆ.
ಗೊಂದಲಕ್ಕೆ ಬಿದ್ದ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ:
ಇದೀಗ ಬಹುತೇಕ ಗ್ಲೆನ್ ಫಿಲಿಫ್ಸ್ ಅವರನ್ನು ರಿಲೀಸ್ ಮಾಡಬೇಕು ಎನ್ನುವ ಚಿಂತನೆಯಲ್ಲಿದ್ದ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಇದೀಗ ಮಿನಿ ಹರಾಜಿಗೂ ಮುನ್ನ ಕಿವೀಸ್ ಆಟಗಾರರನ್ನು ರಿಲೀಸ್ ಮಾಡಬೇಕೇ ಅಥವಾ ರೀಟೈನ್ ಮಾಡಬೇಕೇ ಎನ್ನುವ ಗೊಂದಲಕ್ಕೆ ಸಿಲುಕಿದೆ. ಅಂದಹಾಗೆ ಫಿಲಿಫ್ಸ್ ಕೇವಲ ಬ್ಯಾಟರ್ ಮಾತ್ರವಲ್ಲದೇ ಪಾರ್ಟ್ ಟೈಮ್ ಬೌಲರ್ ಹಾಗೂ ಗನ್ ಫೀಲ್ಡರ್ ಆಗಿ ತಂಡಕ್ಕೆ ಆಸರೆಯಾಗಬಲ್ಲ ಆಟಗಾರರಾಗಿದ್ದಾರೆ.







