ಟೀಂ ಇಂಡಿಯಾ ಹಾಗೂ ಆರ್ಸಿಬಿ ತಂಡದ ಆಟಗಾರ್ತಿ ಎಸ್ ಮೇಘನಾ ತಮ್ಮ 30ನೇ ವಯಸ್ಸಿನಲ್ಲಿಯೇ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತದ ಪರ ಏಕದಿನ ಹಾಗೂ ಟಿ20 ಪಂದ್ಯಗಳನ್ನು ಆಡಿರುವ ಇವರು, ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಮತ್ತು ಬೆಂಗಳೂರು ತಂಡಗಳನ್ನು ಪ್ರತಿನಿಧಿಸಿದ್ದರು. ಆಟಗಾರ್ತಿಯಾಗಿ ನಿವೃತ್ತಿಯಾದರೂ ಕ್ರಿಕೆಟ್ ಜೊತೆಗಿನ ಬಾಂಧವ್ಯ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.
ಟೀಂ ಇಂಡಿಯಾ ಆಟಗಾರ್ತಿ ಎಸ್ ಮೇಘನಾ ತಮ್ಮ 30ನೇ ವಯಸ್ಸಿನಲ್ಲಿಯೇ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಟೀಂ ಇಂಡಿಯಾ ಪರ ಮೂರು ಏಕದಿನ ಪಂದ್ಯ ಹಾಗೂ 17 ಟಿ20 ಪಂದ್ಯಗಳನ್ನು ಆಡಿರುವ ಮೇಘನಾ, ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು 2022ರಲ್ಲಿ ಆಡಿದ್ದರು. ಮಹಿಳಾ ಐಪಿಎಲ್ನಲ್ಲಿ ಮೂರು ಆವೃತ್ತಿಗಳಲ್ಲಿ ಆಡಿದ್ದ ಮೇಘಾನಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ತಂಡಗಳನ್ನು ಪ್ರತಿನಿಧಿಸಿದ್ದರು.
ಕ್ರೀಡಾಂಗಣ ನನಗೆ ಎರಡನೇ ಮನೆ!
ಇನ್ಸ್ಟಾದಲ್ಲಿ ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಮೇಘನಾ, ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ನನ್ನ ಹೃದಯ ಕೃತಜ್ಞತೆಯಿಂದ ತುಂಬಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಕ್ರೀಡಾಂಗಣ ನನಗೆ ಎರಡನೇ ಮನೆ ಇದ್ದಂತೆ, ಹಲವು ನೆನಪುಗಳು ಹಾಗೂ ಸ್ನೇಹಿತರನ್ನು ನೀಡಿದೆ. ಜೀವನವನ್ನು ಎದುರಿಸಲು ಹಾಗು ವಿನಯದಿಂದ ನಡೆದುಕೊಳ್ಳುವ ಪಾಠಗಳನ್ನು ಕಲಿಸಿದೆ ಎಂದು ಹೇಳಿದ್ದಾರೆ.
2016ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ಮೇಘನಾ, ವಿಜಯವಾಡದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಪಂದ್ಯ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಏಕದಿನ ಕ್ರಿಕೆಟ್ ಮಾದರಿಯಲ್ಲಿ 114 ರನ್ ಗಳಿಸಿದೆ, 17 ಟಿ20 ಪಂದ್ಯಗಳಿಂದ 258 ರನ್ ಕಲೆಹಾಕಿದ್ದಾರೆ. ಟಿ20 ಮತ್ತು ಏಕದಿನ ಮಾದರಿಯಲ್ಲಿ ಅರ್ಧಶತಕವನ್ನು ಸಿಡಿಸಿದ್ದಾರೆ.
ನಿವೃತ್ತಿ ಹೇಳಿದ್ರು ಕ್ರಿಕೆಟ್ ಜೊತೆಗಿನ ಬಾಂಧವ್ಯ ಮುಂದುವರಿಯಲಿದೆ
ಇನ್ನು, ದೇಶೀಯ ಕ್ರಿಕೆಟ್ ಟೂರ್ನಿ ಐಪಿಎಲ್ನಲ್ಲಿ ಮೂರು ಆವೃತ್ತಿಗಳಲ್ಲಿ ಆಡಿರುವ ಮೇಘನಾ, 2023ರಲ್ಲಿ ಗುಜರಾತ್ ಜೈಂಟ್ಸ್ ಪರ ತಮ್ಮ ಡಬ್ಲೂಪಿಎಲ್ ವೃತ್ತಿ ಜೀವನ ಆರಂಭಿಸಿದ್ದರು. ಆ ಬಳಿಕ 2024 ಮತ್ತು 2025ರ ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. ಒಟ್ಟು 15 ಐಪಿಎಲ್ ಪಂದ್ಯಗಳನ್ನು ಆಡಿರುವ ಮೇಘನಾ, ಒಂದು ಅರ್ಧ ಶತಕ ಸೇರಿದಂತೆ 302 ರನ್ ಗಳಿಸಿದ್ದಾರೆ. 2025ನೇ ಆವೃತ್ತಿಯಲ್ಲಿ ಆರ್ಸಿಬಿ ಪರ ಕೊನೆಯ ಐಪಿಎಲ್ ಪಂದ್ಯವನ್ನು ಆಡಿದ್ದರು.
ನಾನು ಆಟಗಾರ್ತಿಯಾಗಿ ನಿವೃತ್ತಿಯಾಗುತ್ತಿದ್ದೇನೆ, ಆದರೆ ಕ್ರಿಕೆಟ್ ಜೊತೆಗಿನ ನನ್ನ ಬಾಂಧವ್ಯ ಮುಂದುವರಿಯಲಿದೆ ಎಂದು ಇದೇ ಸಂದರ್ಭದಲ್ಲಿ ಮೇಘನಾ ಹೇಳಿದ್ದಾರೆ. ಆಟಗಾರ್ತಿಯಾಗಿ ನನ್ನ ಕ್ರಿಕೆಟ್ ದಿನಗಳು ಕೊನೆಗೊಳ್ಳುತ್ತಿದೆ, ಆದರೆ ಕ್ರಿಕೆಟ್ ಜೊತೆಗಿನ ಪ್ರಯಾಣ ಎಂದಿಗೂ ಕೊನೆಗೊಳ್ಳುವುದಿಲ್ಲ ಎಂದು ಮೇಘನಾ ಬರೆದುಕೊಂಡಿದ್ದಾರೆ. ಅಲ್ಲದೇ ಕ್ರಿಕೆಟ್ನಲ್ಲಿ ತಮಗೆ ಬೆಂಬಲಿಸಿ, ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.







