ಮುಂಬರುವ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಹರಾಜಿನಲ್ಲಿ ಆರ್‌ಸಿಬಿ ತಂಡದಿಂದ ಹೊರಬಿದ್ದಿರುವ ಗ್ರೇಸ್ ಹ್ಯಾರಿಸ್ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಲಿದ್ದಾರೆ ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಅತಿ ಹೆಚ್ಚು ಹಣ ಹೊಂದಿರುವ ಯುಪಿ ವಾರಿಯರ್ಸ್ ತಂಡ ಇವರನ್ನು ಖರೀದಿಸಲು ತೀವ್ರ ಪೈಪೋಟಿ ನಡೆಸುವ ಸಾಧ್ಯತೆಯಿದೆ.

ಬೆಂಗಳೂರು: ಐದನೇ ಸೀಸನ್‌ ವುಮೆನ್ಸ್ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜಿಗೆ ದಿನಗಣನೆ ಶುರವಾಗಿದೆ. ಹೀಗಿರುವಾಗಲೇ ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರ್ತಿಯರನ್ನು ರೀಟೈನ್ ಮಾಡಿಕೊಂಡು, ಕೆಲವು ಆಟಗಾರ್ತಿಯರನ್ನು ರಿಲೀಸ್ ಮಾಡಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ, ಆರ್‌ಸಿಬಿ ಫ್ರಾಂಚೈಸಿಯ ಒಂದು ನಿರ್ಧಾರದ ಬಗ್ಗೆ ಅಚ್ಚರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ತಂಡದಿಂದ ಹೊರಬಿದ್ದಿರುವ ಆಸ್ಟ್ರೇಲಿಯಾ ಮೂಲದ ಆಲ್ರೌಂಡರ್ ಗ್ರೇಸ್ ಹ್ಯಾರಿಸ್, ಮುಂಬರುವ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗಬಹುದು ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ.

30 ಲಕ್ಷ ರುಪಾಯಿಗೆ ಹರಾಜಿಗೆ ಹೆಸರು ನೋಂದಾಯಿಸಿರುವ ಗ್ರೇಸ್ ಹ್ಯಾರಿಸ್

2027ರ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಗ್ರೇಸ್ ಹ್ಯಾರಿಸ್ 30 ಲಕ್ಷ ರುಪಾಯಿ ಮೂಲ ಬೆಲೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. 33 ವರ್ಷದ ಗ್ರೇಸ್ ಹ್ಯಾರಿಸ್‌ 31 ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನಾಡಿದ್ದು, 149.54ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಇದೀಗ ಮುಂಬರುವ ಮಿನಿ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ಗ್ರೇಸ್ ಹ್ಯಾರಿಸ್ ಖರೀದಿಸಲು ಪೈಪೋಟಿ ನಡೆಸಲಿವೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

'ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನನ್ನ ಪ್ರಕಾರ ಗ್ರೇಸ್ ಹ್ಯಾರಿಸ್ ಅತ್ಯಂತ ದುಬಾರಿ ಆಟಗಾರ್ತಿಯಾಗಿ ಹೊರಹೊಮ್ಮಲಿದ್ದಾರೆ. ಇದು ಮಿನಿ ಹರಾಜಾಗಿರಬಹುದು. ಆದರೆ ಈ ಮಿನಿ ಹರಾಜಿನಲ್ಲಿ ಆಟಗಾರ್ತಿಯರ ಲಭ್ಯತೆಯೂ ಕಡಿಮೆಯಿದೆ. ಅದೇ ರೀತಿ ಡಿಮ್ಯಾಂಡ್ ಕೂಡಾ ಹೆಚ್ಚಿರುವುದಿಲ್ಲ. ಯಾಕೆಂದರೆ ಎಲ್ಲಾ ತಂಡಗಳು ಬಹುತೇಕ ತಮ್ಮ ಕೋರ್ ಆಟಗಾರ್ತಿಯರನ್ನು ಉಳಿಸಿಕೊಂಡಿವೆ. ಆದರೆ ಗ್ರೇಸ್ ಹ್ಯಾರಿಸ್ ಅವರಂತಹ ಆಟಗಾರ್ತಿ ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗಬಲ್ಲರು. ಹೀಗಾಗಿ ಆಕೆ ದೊಡ್ಡ ಮೊತ್ತಕ್ಕೆ ಬಿಡ್ ಆಗಬಹುದು ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಆರ್‌ಸಿಬಿ ಫ್ರಾಂಚೈಸಿ, ಗ್ರೇಸ್ ಹ್ಯಾರಿಸ್ ಅವರನ್ನು ತಂಡದಿಂದ ರಿಲೀಸ್ ಮಾಡಿ ತಪ್ಪು ಮಾಡಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

ಯುಪಿ ವಾರಿಯರ್ಸ್ ಟಾರ್ಗೆಟ್ ಮಾಡಬಹುದು:

ಇನ್ನು ಮುಂಬರುವ WPL ಮಿನಿ ಹರಾಜಿನಲ್ಲಿ ಯುಪಿ ವಾರಿಯರ್ಸ್ ತಂಡವು ಈ ಆಸೀಸ್ ಆಲ್ರೌಂಡರ್ ಗ್ರೇಸ್ ಹ್ಯಾರಿಸ್ ಖರೀದಿಸಲು ಪೈಪೋಟಿ ನಡೆಸಬಹುದು ಎಂದು ಹೇಳಿದ್ದಾರೆ. ಸದ್ಯ ಈ ಬಾರಿಯ ಮಿನಿ ಹರಾಜಿಗೆ ಅತಿಹೆಚ್ಚು ಪರ್ಸ್ ಹೊಂದಿರುವ ತಂಡವೆಂದರೆ ಅದು ಯುಪಿ ವಾರಿಯರ್ಸ್. ಈ ತಂಡದ ಬಳಿ ಅತಿಹೆಚ್ಚು ಅಂದರೆ 3.75 ಕೋಟಿ ರುಪಾಯಿ ಹಣವಿದೆ. ಹೀಗಾಗಿ ಹ್ಯಾರಿಸ್‌ಗೆ ಯುಪಿ ತಂಡ ಬಿಡ್ ಮಾಡುವ ಸಾಧ್ಯತೆಯಿದೆ. ಇನ್ನು ಆರ್‌ಸಿಬಿ ತಂಡವು ಮತ್ತೆ ಗ್ರೇಸ್ ಹ್ಯಾರಿಸ್‌ಗೆ ಬಿಡ್‌ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಕಾದು ನೋಡಬೇಕಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಸದ್ಯ ಮುಂಬರುವ ವುಮೆನ್ಸ್ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜಿಗೆ ಡೆಲ್ಲಿ ಕ್ಯಾಪಿಟಲ್ಸ್ ಬಳಿಕ 1.1 ಕೋಟಿ ರುಪಾಯಿ, ಗುಜರಾತ್ ಟೈಟಾನ್ಸ್ ಬಳಿ 1.25 ಕೋಟಿ, ಮುಂಬೈ ಇಂಡಿಯನ್ಸ್ ಬಳಿ 90 ಲಕ್ಷ ಹಾಗೂ 1.15 ಕೋಟಿ ರುಪಾಯಿ ಇದೆ. 2027ರ ವುಮೆನ್ಸ್ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜು ಇದೇ ಅಕ್ಟೋಬರ್ 28ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ.