2026ರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ತನ್ನ ತವರು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ಥಳಾಂತರಿಸುವ ಸಾಧ್ಯತೆ ದಟ್ಟವಾಗಿದೆ. ಛತ್ತೀಸ್‌ಗಢದಲ್ಲಿ 2 ಪಂದ್ಯಗಳನ್ನು ಆಡಲು ನಿರ್ಧರಿಸಿದ್ದು, ಕಳೆದ ವರ್ಷದ ಕಾಲ್ತುಳಿತ ಈ ನಿರ್ಧಾರದ ಹಿಂದೆ ಇರಬಹುದೆಂದು ವಿಶ್ಲೇಷಿಸಲಾಗಿದೆ.
ಬೆಂಗಳೂರು: ಬೆಂಗಳೂರಿನಿಂದ ಐಪಿಎಲ್ ಪಂದ್ಯಗಳು ಎತ್ತಂಗಡಿಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪುನಾರಂಭಿಸಲು ಕರ್ನಾಟಕ ಸರ್ಕಾರ ಸದ್ಯದಲ್ಲೇ ಅನುಮತಿ ನೀಡಿದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ, ಚಿನ್ನಸ್ವಾಮಿ ಕ್ರೀಡಾಂಗಣವನ್ನು 2026ರ ಐಪಿಎಲ್‌ನಲ್ಲಿ ತನ್ನ ತವರು ಮೈದಾನವನ್ನಾಗಿ ಆಯ್ಕೆ ಮಾಡಿಕೊಳ್ಳದಿರಲು ನಿರ್ಧರಿಸಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಇದಕ್ಕೆ ಪುಷ್ಠಿ ನೀಡುವಂತೆ, ಬುಧವಾರ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಈ ವರ್ಷ ಆರ್‌ಸಿಬಿ ರಾಯ್ಪುರದಲ್ಲಿ 2 ಐಪಿಎಲ್ ಪಂದ್ಯಗಳನ್ನು ಆಡಲಿದೆ ಎಂದು ಘೋಷಿಸಿದ್ದಾರೆ. ಜೊತೆಗೆ ಆರ್‌ಸಿಬಿ ಸಿಇಒ ರಾಜೇಶ್ ಮೆನನ್, ಸಿಎಂ ವಿಷ್ಣು ದೇವ್‌ರನ್ನು ಭೇಟಿಯಾಗಿ ಚರ್ಚೆ ನಡೆಸುತ್ತಿರುವ, ಅವರಿಗೆ ಆರ್‌ಸಿಬಿ ಜೆರ್ಸಿಯನ್ನು ಹಸ್ತಾಂತರಿಸುವ ಫೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ. ಹೀಗಾಗಿ, ಆರ್‌ಸಿಬಿ ರಾಯ್ಪುರದಲ್ಲಿ 2 ಪಂದ್ಯಗಳನ್ನು ಆಡುವುದು ಖಚಿತ ಎನ್ನಲಾಗಿದೆ. ಇನ್ನುಳಿದ 5 ಪಂದ್ಯಗಳಿಗೆ ನವಿ ಮುಂಬೈನ ಡಿ.ವಿ.ಪಾಟೀಲ್ ಕ್ರೀಡಾಂಗಣವನ್ನು ಆಯ್ಕೆ ಮಾಡಿಕೊಳ್ಳಲಿದ್ದು, ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಘೋಷಣೆಯೂ ಆಗಲಿದೆ ಎಂದು ಹೇಳಲಾಗುತ್ತಿದೆ.
ಚಿನ್ನಸ್ವಾಮಿಗೆ ಬೆಂಗ್ಳೂರು ಆಯುಕ್ತ ಭೇಟಿ:
ಒಂದೆಡೆ ಆರ್‌ಸಿಬಿ ಬೆಂಗಳೂರಿನಿಂದ ದೂರವಾಗಲು ಸಿದ್ಧತೆ ನಡೆಸುತ್ತಿದ್ದರೆ, ಐಪಿಎಲ್ ಅನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಯೋಜಿಸಲು ಕೆಎಸ್‌ಸಿಎ ಕೂಡ ಪ್ರಯತ್ನ ಮುಂದುವರಿಸಿದೆ. ಬುಧವಾರ, ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿರುವ ಕೆಎಸ್‌ಸಿಎ ಕಚೇರಿಗೆ ಭೇಟಿ ನೀಡಿ ಪದಾಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ಸಭೆ ಬಳಿಕ ಸರ್ಕಾರ ಕೆಲ ಷರತ್ತುಗಳನ್ನು ವಿಧಿಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪುನಾರಂಭಿಸಲು ಅವಕಾಶ ನೀಡಬಹುದು ಎನ್ನಲಾಗಿದೆ.
ಸಭೆ ಬಳಿಕ ಮಾತನಾಡಿದ ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ, ‘ಆರ್‌ಸಿಬಿ ಜೊತೆ ನಾವು ಸಂಪರ್ಕದಲ್ಲಿದ್ದೇವೆ. ಅನುಮತಿ ಸಿಕ್ಕ ಬಳಿಕ ಈ ಬಗ್ಗೆ ಮಾತನಾಡೋಣ’ ಎಂದರು.
ಆರ್‌ಸಿಬಿ ಬೆಂಗಳೂರಿನಿಂದ ಹೊರ ಹೋಗಲು ನಿರ್ಧರಿಸಿದರೆ ಅದಕ್ಕೆ ಕಾರಣಗಳೇನಿರಬಹುದು?
* ಕಳೆದ ವರ್ಷ ಜೂ.4ರಂದು ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಜನ ಮೃತಪಟ್ಟಿದ್ದರು. ಈ ಘಟನೆ ಆರ್‌ಸಿಬಿಯನ್ನು ಪ್ರಮುಖ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ. ಹೀಗಾಗಿ, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವಾಪಸಾಗಲು ಹಿಂದೇಟು ಹಾಕುತ್ತಿರಬಹುದು.
* ಕಾಲ್ತುಳಿತ ಪ್ರಕರಣ ಇನ್ನೂ ಕೋರ್ಟ್‌ನಲ್ಲಿದೆ. ಸಿಐಡಿ ಪೊಲೀಸರು ಈ ಪ್ರಕರಣದಲ್ಲಿ ಆರ್‌ಸಿಬಿಯೇ ಪ್ರಮುಖ ಆರೋಪಿ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ವಾದ-ಪತ್ರಿವಾದ ವೇಳೆ ಆರ್‌ಸಿಬಿ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಲಾಗಿದೆ. ಇದರಿಂದ ಆರ್‌ಸಿಬಿಗೆ ಬೆಂಗಳೂರಿನ ಸಹವಾಸವೇ ಬೇಡ ಎನಿಸಿರಬಹುದು.
* ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಲಿಸಿದರೆ, ರಾಯ್ಪುರ ಹಾಗೂ ತಾನು ಆಯ್ಕೆ ಮಾಡಿಕೊಳ್ಳಲಿರುವ ಮತ್ತೊಂದು ಕ್ರೀಡಾಂಗಣದ ಬಾಡಿಗೆ ಮೊತ್ತ ಕಡಿಮೆ ಇರಬಹುದು. ಹಣಕಾಸು ಉಳಿತಾಯ ದೃಷ್ಟಿಯಿಂದ ಬೆಂಗಳೂರು ಬೇಡ ಎನಿಸಿರಬಹುದು.
* ಕಾಲ್ತುಳಿತ ಘಟನೆ ತಂಡದ ಆಟಗಾರರನ್ನೂ ಮಾನಸಿಕವಾಗಿ ಕುಗ್ಗಿಸಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಐಪಿಎಲ್ ಪಂದ್ಯಗಳನ್ನು ಆಡಲು ಆಟಗಾರರು ಹಿಂಜರಿಕೆ ಪಡುತ್ತಿರಬಹುದು.
* ಚಿನ್ನಸ್ವಾಮಿಯಲ್ಲಿ ಮತ್ತೆ ಆಡಲು ಮುಂದಾದರೆ ಸಾರ್ವಜನಿಕರಿಂದ ಟೀಕೆ ಎದುರಾಗಬಹುದು ಎನ್ನುವ ಆತಂಕವೂ ಫ್ರಾಂಚೈಸಿಗೆ ಇರಬಹುದು. ಜೊತೆಗೆ ಆರ್‌ಸಿಬಿ ವಿಚಾರ ರಾಜಕೀಯ ಜಟಾಪಟಿಗೆ ತಿರುಗಿದರೆ, ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ. ಹೀಗಾಗಿ, ಸ್ಥಳಾಂತರವೇ ಸೂಕ್ತ ಆಯ್ಕೆ ಎನ್ನುವ ಮುಂದಾಲೋಚನೆಯೂ ಇರಬಹುದು.


