ಐಪಿಎಲ್ ೨೦೨೫ಕ್ಕೆ ಸಜ್ಜಾಗಿರುವ ಆರ್‌ಸಿಬಿ, ಹೊಸ ಹುರುಪಿನೊಂದಿಗೆ ಕಣಕ್ಕಿಳಿಯುತ್ತಿದೆ. ಸ್ವಪ್ನಿಲ್ ಸಿಂಗ್, ಮನೋಜ್ ಭಾಂಡಗೆ ಮತ್ತು ರಸಿಖ್ ಧಾರ್ ತಂಡದ ಪ್ರಮುಖ ಆಕರ್ಷಣೆ. ಸ್ವಪ್ನಿಲ್ ಸ್ಪಿನ್‌ನಲ್ಲಿ, ಭಾಂಡಗೆ ಆಲ್‌ರೌಂಡರ್ ಆಗಿ, ರಸಿಖ್ ವೇಗದಲ್ಲಿ ಮಿಂಚಿನ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಈ ಮೂವರ ಸಾಮರ್ಥ್ಯ ಚೊಚ್ಚಲ ಐಪಿಎಲ್ ಗೆಲುವಿನ ಕನಸಿಗೆ ಬಲ ತುಂಬಲಿದೆ.

ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 21ರಿಂದ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಕಳೆದ 17 ಐಪಿಎಲ್ ಆವೃತ್ತಿಯಲ್ಲಿ ಪಾಲ್ಗೊಂಡಿದ್ದರು ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ ಹೊಸ ಹುರುಪಿನೊಂದಿಗೆ ಸಜ್ಜಾಗಿದೆ. ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಸಾಕಷ್ಟು ಅಳೆದುತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. 

ಆರ್‌ಸಿಬಿ ಫ್ರಾಂಚೈಸಿಯು ಮೊಹಮ್ಮದ್ ಸಿರಾಜ್, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್ ಹಾಗೂ ವಿಲ್ ಜ್ಯಾಕ್ಸ್ ಅವರಂತಹ ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. ಆದರೆ ತಂಡದಲ್ಲಿರುವ ಈ ಮೂವರು ಆಟಗಾರರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿದರೆ, ಖಂಡಿತ ಈ ಮೂವರು ಪಂದ್ಯದ ದಿಕ್ಕನ್ನೇ ಬದಲಿಸುವ ಕ್ಷಮತೆ ಹೊಂದಿದ್ದಾರೆ. ಅಷ್ಟಕ್ಕೂ ಆರ್‌ಸಿಬಿ ಬಳಿ ಇರುವ ಆ ಮೂರು ವೆಪನ್‌ಗಳು ಯಾವುವು ನೋಡೋಣ ಬನ್ನಿ.

ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಇಲ್ಲದೇ ಇದ್ರೂ ಪಂದ್ಯ ಗೆಲ್ಲಿಸಿದ ರಾಣಾ!

1. ಸ್ವಪ್ನಿಲ್ ಸಿಂಗ್:

ಬೌಲಿಂಗ್ ಆಲ್ರೌಂಡರ್ ಸ್ವಪ್ನಿಲ್ ಸಿಂಗ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ರೈಟ್‌ ಟು ಮ್ಯಾಚ್ ಕಾರ್ಡ್ ಬಳಸಿ ತನ್ನಲ್ಲಿಯೇ ಉಳಿಸಿಕೊಂಡಿದೆ. ಇದು ಫ್ರಾಂಚೈಸಿಯು ಸ್ವಪ್ನಿಲ್ ಸಿಂಗ್ ಮೇಲೆ ಇಟ್ಟ ವಿಶ್ವಾಸವನ್ನು ತೋರಿಸುತ್ತದೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಸ್ವಪ್ನಿಲ್ ಸಿಂಗ್ ಪವರ್‌ ಪ್ಲೇನಲ್ಲಿ 15ರ ಸ್ಟ್ರೈಕ್‌ರೇಟ್‌ನಲ್ಲಿ 6 ವಿಕೆಟ್ ಕಬಳಿಸಿದ್ದರು. 

ಆರ್‌ಸಿಬಿ ಫ್ರಾಂಚೈಸಿಯು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸ್ವಪ್ನಿಲ್ ಸಿಂಗ್ ಅವರನ್ನು ಕೃನಾಲ್ ಪಾಂಡ್ಯ ಅವರ ಜತೆಗೂಡಿ ಪ್ರಮುಖ ಸ್ಪಿನ್ನರ್ ಆಗಿ ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ. ಹೀಗಾದಲ್ಲಿ ಆರ್‌ಸಿಬಿಗೆ ಕಪ್ ಗೆಲ್ಲುವ ಅವಕಾಶ ಹೆಚ್ಚಿದೆ.

2. ಮನೋಜ್ ಭಾಂಡಗೆ:

ಕರ್ನಾಟಕದ ಪ್ರತಿಭಾನ್ವಿತ ಆಲ್ರೌಂಡರ್ ಮನೋಜ್ ಭಾಂಡಗೆ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದಲ್ಲಿದ್ದರೂ, ಆಡುವ ಹನ್ನೊಂದರ ಬಳಗದಲ್ಲಿ ಒಮ್ಮೆಯೂ ಅವಕಾಶ ಸಿಕ್ಕಿರಲಿಲ್ಲ. ಆದರೆ ಮಹಾರಾಜ ಟಿ20 ಟ್ರೋಫಿ ಟೂರ್ನಿಯಲ್ಲಿ ಭಾಂಡಗೆ ಅದ್ಭುತ ಪ್ರದರ್ಶನದ ಮೂಲಕ ಮಿಂಚಿದ್ದರು.

ಆಂಗ್ಲರನ್ನು ಬಗ್ಗುಬಡಿದ ಟೀಂ ಇಂಡಿಯಾ: ತವರಿನಲ್ಲಿ ಭಾರತಕ್ಕೆ ಮತ್ತೊಂದು ಟಿ20 ಸರಣಿ!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿ ಬೆಳೆದಿರುವ ಮನೋಜ್ ಭಾಂಡಗೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಉಪಯುಕ್ತ ಆಸರೆಯಾಗಬಲ್ಲ ಆಟಗಾರನಾಗಿದ್ದಾನೆ. ಆರ್‌ಸಿಬಿ ಅಗ್ರಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್ ಅವರಂತಹ ಬಲಾಢ್ಯ ಆಟಗಾರರಿದ್ದಾರೆ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಮನೋಹ್‌ ಭಾಂಡಗೆ ಅವರಿಗೆ ಅವಕಾಶ ಸಿಕ್ಕರೇ ಎರಡೂ ಕೈಗಳಿಂದ ಬಾಚಿಕೊಳ್ಳಲು ಕನ್ನಡಿಗ ಸಜ್ಜಾಗಿದ್ದಾನೆ.

3. ರಸಿಖ್ ಧಾರ್:

ಜಮ್ಮುಕಾಶ್ಮೀರ ಮೂಲದ ಮಾರಕ ವೇಗಿ ರಸಿಖ್ ಧಾರ್ ಈಗಾಗಲೇ ದೇಶಿ ಕ್ರಿಕೆಟ್‌ನಲ್ಲಿ ತಮ್ಮ ಮಾರಕ ದಾಳಿ ಮೂಲಕ ಗಮನ ಸೆಳೆದಿದ್ದಾರೆ. ಇನ್ನಿಂಗ್ಸ್‌ನ ಮಧ್ಯದಲ್ಲಿ ಹಾಗೂ ಡೆತ್ ಓವರ್‌ನಲ್ಲಿ ರಸಿಖ್ ಧಾರ್ ಮಾರಕ ದಾಳಿ ನಡೆಸುವ ಕ್ಷಮತೆ ಹೊಂದಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಪರ ರಸಿಖ್ 16.33ರ ಸ್ಟ್ರೈಕ್‌ರೇಟ್‌ನಲ್ಲಿ 8 ವಿಕೆಟ್ ಕಬಳಿಸಿದ್ದರು.

ಸದ್ಯ ಆರ್‌ಸಿಬಿ ತಂಡದಲ್ಲಿ ಜೋಶ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್ ಅವರಂತಹ ಅನುಭವಿ ವೇಗಿಗಳಿದ್ದಾರೆ. ಇವರ ಜತೆ ರಸಿಖ್ ಧಾರ್ ಸೇರ್ಪಡೆ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ತಂದುಕೊಡುವುದರಲ್ಲಿ ಅಚ್ಚರಿಯಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನ ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ರಸಿಖ್ ಧಾರ್ ಪರಿಣಾಮಕಾರಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ.

ಒಟ್ಟಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನಲ್ಲಿರುವ ಎಲ್ಲಾ ಟ್ಯಾಲೆಂಟೆಡ್ ಆಟಗಾರರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಲಿ ಎನ್ನುವುದು ಆರ್‌ಸಿಬಿ ಅಭಿಮಾನಿಗಳ ಹಾರೈಕೆಯಾಗಿದೆ.