18ನೇ ಐಪಿಎಲ್‌ನ 24ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ ಮುಖಾಮುಖಿಯಾಗಲಿವೆ. ಡೆಲ್ಲಿ ಮೂರು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿದೆ. ಆರ್‌ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿದ್ದು, ತವರಿನಲ್ಲಿ ಮೊದಲ ಜಯಕ್ಕಾಗಿ ಕಾಯುತ್ತಿದೆ. ಡೆಲ್ಲಿ ತಂಡದಲ್ಲಿ ಫಾಫ್ ಡು ಪ್ಲೆಸಿಸ್ ಮರಳುವ ಸಾಧ್ಯತೆ ಇದ್ದು, ಟಿ. ನಟರಾಜನ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 24ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಇಂದು ಸಂಜೆ 7.30ರಿಂದ ಈ ಪಂದ್ಯಕ್ಕೆ ಅಧಿಕೃತ ಚಾಲನೆ ಸಿಗಲಿದೆ.

ಟೂರ್ನಿಯಲ್ಲಿ ಉಭಯ ತಂಡಗಳ ಪ್ರದರ್ಶನ ಅತ್ಯದ್ಭುತವಾಗಿದೆ. ಅದರಲ್ಲೂ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತಾನಾಡಿದ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಎದುರು ಭರ್ಜರಿ ಗೆಲುವು ಸಾಧಿಸಿದೆ. ಇನ್ನೊಂದೆಡೆ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಒಂದು ದಶಕದ ಬಳಿಕ ವಾಂಖೆಡೆ ಮೈದಾನದಲ್ಲಿ ಮಣಿಸಿದೆ. ಇದೀಗ ಆರ್‌ಸಿಬಿ ತಂಡವು ತವರಿನಲ್ಲಿ ಮೊದಲ ಗೆಲುವಿಗಾಗಿ ಹಾತೊರೆಯುತ್ತಿದೆ. ಇನ್ನು ಆರ್‌ಸಿಬಿ ಎದುರಿನ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಸುದರ್ಶನ್‌ ಅಬ್ಬರಿಸಿದ್ರೆ ಉಳಿಗಾಲವಿಲ್ಲ; ಟೀಂ ಇಂಡಿಯಾ ಬಾಗಿಲು ಬಡಿಯುತ್ತಿರುವ ಚೆನ್ನೈ ಕ್ರಿಕೆಟಿಗ!

ಡೆಲ್ಲಿಯಲ್ಲಿನ ಎರಡು ಬದಲಾವಣೆಗಳೇನು?

ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟರ್ ಫಾಫ್ ಡು ಪ್ಲೆಸಿಸ್, ಫಿಟ್ನೆಸ್ ಸಮಸ್ಯೆಯಿಂದಾಗಿ ಆಡುವ ಹನ್ನೊಂದರ ಬಳಗದಿಂದ ಹೊರಗುಳಿದಿದ್ದರು. ಹೀಗಾಗಿ ಫಾಫ್ ಬದಲಿಗೆ ಸಮೀರ್ ರಿಜ್ವಿ ಡೆಲ್ಲಿ ತಂಡ ಕೂಡಿಕೊಂಡಿದ್ದರು. ಇನ್ನು ಕನ್ನಡಿಗ ಕೆ ಎಲ್ ರಾಹುಲ್, ಫಾಫ್ ಅನುಪಸ್ಥಿತಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಇದೀಗ ಫಾಫ್ ಡು ಪ್ಲೆಸಿಸ್ ಸಂಪೂರ್ಣ ಫಿಟ್ ಆಗಿದ್ದು, ಆರ್‌ಸಿಬಿ ಎದುರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಹೀಗಾದಲ್ಲಿ ಸಮೀರ್ ರಿಜ್ವಿ ಆಡುವ ಹನ್ನೊಂದರ ಬಳಗದಿಂದ ಹೊರಗುಳಿಯುವ ಸಾಧ್ಯತೆಯಿದೆ. ಫಾಫ್ ತಂಡ ಕೂಡಿಕೊಂಡರೆ ಮತ್ತೆ ಕೆ ಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿಯುವ ಸಾಧ್ಯತೆಯಿದೆ. 

ಇನ್ನೊಂದೆಡೆ ಚೆನ್ನೈ ಮೂಲದ ಎಡಗೈ ವೇಗಿ ಟಿ ನಟರಾಜನ್ ಕೂಡಾ ಇಂದು ಡೆಲ್ಲಿ ಕ್ಯಾಪಿಟಲ್ಸ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆರ್‌ಸಿಬಿ ಎದುರಿನ ಪಂದ್ಯಕ್ಕೂ ಮುನ್ನ ಟಿ ನಟರಾಜನ್, ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ನೆಟ್ಸ್‌ನಲ್ಲಿ ಭರ್ಜರಿಯಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಅಂದಹಾಗೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಟರಾಜನ್ ಇದುವರೆಗೂ ಒಂದೇ ಒಂದು ಪಂದ್ಯವನ್ನಾಡಿಲ್ಲ. ಹೀಗಾದಲ್ಲಿ ಮೋಹಿತ್ ಶರ್ಮಾ ತಂಡದಿಂದ ಹೊರಬೀಳುವ ಸಾಧ್ಯತೆಯಿದೆ. ಮೋಹಿತ್ ಶರ್ಮಾ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಇಂಪ್ಯಾಕ್ಟ್ ಮಾಡಲು ವಿಫಲವಾಗಿದ್ದಾರೆ. ಆಡಿದ ಮೂರು ಪಂದ್ಯಗಳಿಂದ ಒಂದು ವಿಕೆಟ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿನ ಪಂದ್ಯಕ್ಕೆ ಅನುಭವಿ ವೇಗಿ ಮೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಇಂದಾದ್ರೂ ತವರಲ್ಲಿ ಆರ್‌ಸಿಬಿಗೆ ಸಿಗುತ್ತಾ ಜಯ? ಡೆಲ್ಲಿ ವಿರುದ್ಧ ಪೈಪೋಟಿ!

ಆರ್‌ಸಿಬಿ ಎದುರಿನ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ ಹೀಗಿದೆ

ಫಾಫ್ ಡು ಪ್ಲೆಸಿಸ್, ಜೇಕ್ ಫ್ರೆಸರ್ ಮೆಕ್‌ಗರ್ಕ್, ಅಭಿಷೇಕ್ ಪೊರೆಲ್, ಕೆ ಎಲ್ ರಾಹುಲ್, ಟ್ರಿಸ್ಟಿನ್ ಸ್ಟಬ್ಸ್, ಅಕ್ಷರ್ ಪಟೇಲ್(ನಾಯಕ), ವಿಪ್ರಾಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮುಕೇಶ್ ಕುಮಾರ್, ಮೋಹಿತ್ ಶರ್ಮಾ/ಟಿ ನಟರಾಜನ್, ಅಶುತೋಷ್ ಶರ್ಮಾ.

ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್