ಟಿ20 ವಿಶ್ವಕಪ್‌ನಲ್ಲಿ ನಿರೀಕ್ಷಿಸಲಾಗುತ್ತಿದ್ದ ಭಾರತ-ಪಾಕಿಸ್ತಾನ ಸೆಮಿಫೈನಲ್ ಪಂದ್ಯವು ನಡೆಯುವುದಿಲ್ಲ. ಸೂಪರ್ 8 ಹಂತದ ಸದ್ಯದ ಸ್ಥಿತಿಗತಿ ಮತ್ತು ಐಸಿಸಿ ನಿಯಮಗಳ ಪ್ರಕಾರ, ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವ ಗಣಿತದ ಸಾಧ್ಯತೆಗಳು ಮುಗಿದುಹೋಗಿವೆ.  

ಕೊಲಂಬೊ: ಟಿ20 ವಿಶ್ವಕಪ್‌ನಲ್ಲಿ ಇಡೀ ಕ್ರಿಕೆಟ್ ಜಗತ್ತು ಎದುರು ನೋಡುತ್ತಿದ್ದ ಭಾರತ-ಪಾಕಿಸ್ತಾನ ನಡುವಿನ ಸೆಮಿಫೈನಲ್ ಪಂದ್ಯ ನಡೆಯುವುದು ಅನುಮಾನವಲ್ಲ, ಖಂಡಿತ ಇಲ್ಲ. ಸೂಪರ್ 8 ಹಂತದ ಪಂದ್ಯಗಳ ಫಲಿತಾಂಶ ಮತ್ತು ಗ್ರೂಪ್‌ಗಳ ಸದ್ಯದ ಸ್ಥಿತಿಗತಿ, ಅಭಿಮಾನಿಗಳ ಈ ಕನಸಿಗೆ ತಣ್ಣೀರೆರಚಿದೆ. ಗಣಿತದ ಲೆಕ್ಕಾಚಾರಗಳ ಪ್ರಕಾರ, ಈ ಎರಡು ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವ ಎಲ್ಲಾ ಸಾಧ್ಯತೆಗಳು ಈಗ ಮುಗಿದುಹೋಗಿವೆ. ಐಸಿಸಿ ಸೆಮಿಫೈನಲ್ ನಿಯಮಗಳ ಪ್ರಕಾರ, ಮೊದಲ ಸೆಮಿಫೈನಲ್‌ನಲ್ಲಿ ಗ್ರೂಪ್ 1ರ ಟಾಪರ್ ತಂಡ, ಗ್ರೂಪ್ 2ರ ಎರಡನೇ ಸ್ಥಾನಿ ತಂಡವನ್ನು ಎದುರಿಸಲಿದೆ. ಹಾಗೆಯೇ, ಎರಡನೇ ಸೆಮಿಫೈನಲ್‌ನಲ್ಲಿ ಗ್ರೂಪ್ 2ರ ಟಾಪರ್, ಗ್ರೂಪ್ 1ರ ಎರಡನೇ ಸ್ಥಾನಿ ತಂಡದ ವಿರುದ್ಧ ಆಡಲಿದೆ.

Add Asianetnews Kannada as a Preferred SourcegooglePreferred

ತಲೆಕೆಳಗಾದ ಸೆಮಿಫೈನಲ್ ಲೆಕ್ಕಾಚಾರ

ನಿನ್ನೆ ನಡೆದ ಸೂಪರ್ 8 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನವನ್ನು ಸೋಲಿಸಿದೆ. ಇದರಿಂದಾಗಿ ಇಂಗ್ಲೆಂಡ್ ಗ್ರೂಪ್ 2ರಲ್ಲಿ ಅಗ್ರಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ, ಪಾಕಿಸ್ತಾನಕ್ಕೆ ಸೆಮಿಫೈನಲ್ ತಲುಪಲು ಸಾಧ್ಯವಾದರೂ, ಅದು ಕೇವಲ ಎರಡನೇ ಸ್ಥಾನಿಯಾಗಿ ಮಾತ್ರ ಸಾಧ್ಯ. ಇನ್ನೊಂದೆಡೆ, ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋತ ಭಾರತ, ಗ್ರೂಪ್ 1ರಲ್ಲಿ ಎರಡನೇ ಸ್ಥಾನಕ್ಕಾಗಿ ಹೋರಾಡುತ್ತಿದೆ. ಈ ಗ್ರೂಪ್‌ನಲ್ಲಿ ದಕ್ಷಿಣ ಆಫ್ರಿಕಾ ಅಥವಾ ವೆಸ್ಟ್ ಇಂಡೀಸ್ ಅಗ್ರಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ.

ಒಂದು ವೇಳೆ ಎರಡೂ ತಂಡಗಳು ತಮ್ಮ ತಮ್ಮ ಗ್ರೂಪ್‌ಗಳಲ್ಲಿ ಎರಡನೇ ಸ್ಥಾನ ಪಡೆದು ಸೆಮಿಫೈನಲ್‌ಗೆ ಬಂದರೆ, ಅವೆರಡೂ ಮುಖಾಮುಖಿಯಾಗುವ ಸಾಧ್ಯತೆಯೇ ಇಲ್ಲ. ಐಸಿಸಿಯ ಹೈಬ್ರಿಡ್ ಮಾಡೆಲ್ ಪ್ರಕಾರ, ಭಾರತ-ಪಾಕಿಸ್ತಾನ ನಡುವೆ ಸೆಮಿಫೈನಲ್ ಅಥವಾ ಫೈನಲ್ ನಡೆದರೆ, ಅದನ್ನು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಈಗ ಸೆಮಿಫೈನಲ್‌ನಲ್ಲಿ ಈ ತಂಡಗಳು ಎದುರಾಗುವುದಿಲ್ಲ ಎಂಬುದು ಖಚಿತವಾದ ಕಾರಣ, ಪಂದ್ಯ ನಡೆಯುವ ಸ್ಥಳಗಳಲ್ಲೂ ಬದಲಾವಣೆಯಾಗಲಿದೆ.

ಸೂರ್ಯಕುಮಾರ್ ಯಾದವ್ ಪಡೆ ಗ್ರೂಪ್ 1ರಿಂದ ಎರಡನೇ ಸ್ಥಾನಿಯಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆದರೆ, ಭಾರತ ತನ್ನ ಸೆಮಿಫೈನಲ್ ಪಂದ್ಯವನ್ನು ಮುಂಬೈನಲ್ಲಿ ಆಡಲಿದೆ. ಒಂದು ವೇಳೆ ಅದ್ಭುತ ಪ್ರದರ್ಶನ ನೀಡಿ ಪಾಕಿಸ್ತಾನ ಸೆಮಿಫೈನಲ್‌ಗೆ ತಲುಪಿದರೆ, ಅವರ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ. ಅಲ್ಲಿ ಪಾಕಿಸ್ತಾನಕ್ಕೆ ಗ್ರೂಪ್ 1ರ ಟಾಪರ್ ತಂಡವಾದ ದಕ್ಷಿಣ ಆಫ್ರಿಕಾ ಅಥವಾ ವೆಸ್ಟ್ ಇಂಡೀಸ್ ಎದುರಾಳಿಯಾಗಲಿದೆ. ಭಾರತ ಎರಡನೇ ಸ್ಥಾನಿಯಾಗಿ ಅರ್ಹತೆ ಪಡೆದರೆ, ಇಂಗ್ಲೆಂಡ್ ತಂಡ ಎದುರಾಳಿಯಾಗುವ ಸಾಧ್ಯತೆ ಹೆಚ್ಚಿದೆ.

ಫೈನಲ್‌ನಲ್ಲಿ ಮುಖಾಮುಖಿಯಾಗಲು ಇದೆ ಅವಕಾಶ

ಸೆಮಿಫೈನಲ್‌ನಲ್ಲಿ ಮುಖಾಮುಖಿ ಅಸಾಧ್ಯವಾದರೂ, ಫೈನಲ್‌ನಲ್ಲಿ ಈ ಎರಡೂ ತಂಡಗಳು ಎದುರಾಗುವ ಒಂದು ಸಣ್ಣ ಸಾಧ್ಯತೆ ಇನ್ನೂ ಜೀವಂತವಾಗಿದೆ. ಭಾರತ ಮತ್ತು ಪಾಕಿಸ್ತಾನ ತಮ್ಮ ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ಗೆದ್ದರೆ, ವಿಶ್ವಕಪ್ ಫೈನಲ್‌ನಲ್ಲಿ ಮತ್ತೊಂದು ಹೈವೋಲ್ಟೇಜ್ ಪಂದ್ಯವನ್ನು ನೋಡಬಹುದು. ಆದರೆ, ಸದ್ಯದ ನೆಟ್ ರನ್‌ರೇಟ್ ಮತ್ತು ಪಾಯಿಂಟ್ಸ್ ಟೇಬಲ್ ಗಮನಿಸಿದರೆ, ಎರಡೂ ತಂಡಗಳಿಗೆ ಸೆಮಿಫೈನಲ್ ತಲುಪುವುದೇ ಒಂದು ದೊಡ್ಡ ಸವಾಲಾಗಿದೆ.

ಗ್ರೂಪ್‌ ಹಂತದಲ್ಲಿ ಭಾರತ ಅಗ್ರಸ್ಥಾನಿಯಾಗಿ ಸೂಪರ್-8 ಹಂತಕ್ಕೆ ಲಗ್ಗೆಯಿಟ್ಟರೇ, ಪಾಕಿಸ್ತಾನ ತಂಡವು ಗ್ರೂಪ್ ಹಂತದಲ್ಲಿ ಎರಡನೇ ಸ್ಥಾನ ಪಡೆದು ಸೂಪರ್-8ರ ಹಂತ ಪ್ರವೇಶಿಸಿದೆ. ಗ್ರೂಪ್ ಹಂತದಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ಎದುರು ಟೀಂ ಇಂಡಿಯಾ ಅನಾಯಾಸವಾಗಿ ಗೆಲುವಿನ ನಗೆ ಬೀರಿತ್ತು. ಇದೀಗ ಸೆಮಿಫೈನಲ್‌ನಲ್ಲಿ ಮತ್ತೊಮ್ಮೆ ಇಂಡೋ-ಪಾಕ್ ಕಾದಾಟವನ್ನು ನೋಡಬಹುದು ಎಂದು ಕಾಯುತ್ತಿದ್ದ ಫ್ಯಾನ್ಸ್‌ಗೆ ಸದ್ಯಕಂತೂ ನಿರಾಸೆ ಎದುರಾಗಿದ್ದು, ಉಭಯ ತಂಡಗಳು ಫೈನಲ್ ಪ್ರವೇಶಿಸಿದರೆ ಮಾತ್ರ ಹೈವೋಲ್ಟೇಜ್ ಮ್ಯಾಚ್ ನೋಡಲು ಸಿಗಲಿದೆ.

ಭಾರತ ತಂಡವು ಇದೀಗ ಸೂಪರ್-8 ಹಂತದಲ್ಲಿ ಜಿಂಬಾಬ್ವೆ(ಫೆ.26) ಹಾಗೂ ಮಾರ್ಚ್ 01ರಂದು ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಇನ್ನೊಂದೆಡೆ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಸೂಪರ್-8 ಹಂತದ ಮೊದಲ ಪಂದ್ಯ ಮಳೆಯಿಂದ ರದ್ದಾಗಿದೆ. ಇದೀಗ ಇಂಗ್ಲೆಂಡ್ ಎದುರು ಪಾಕ್ ಸೋಲು ಕಂಡಿದ್ದು, ಲಂಕಾ ಎದುರು ಕೊನೆಯ ಸೂಪರ್-8 ಪಂದ್ಯವನ್ನು ಪಾಕ್ ಆಡಲಿದೆ. ಒಂದು ವೇಳೆ ಲಂಕಾ ಎದುರಿನ ಪಂದ್ಯದಲ್ಲಿ ಪಾಕ್ ಸೋತರೇ ಅಧಿಕೃತವಾಗಿಯೇ ಸೆಮಿಫೈನಲ್ ರೇಸ್‌ನಿಂದ ಹೊರಬೀಳಲಿದೆ. ಒಂದು ವೇಳೆ ಪಾಕ್ ಗೆದ್ದು ಅದೃಷ್ಟ ಕೈಹಿಡಿದರಷ್ಟೇ ಸೆಮೀಸ್‌ಗೇರಲು ಸಾಧ್ಯವಾಗಲಿದೆ.