ತಮಿಳುನಾಡಿನ ಸಾಯಿ ಸುದರ್ಶನ್ ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ 82 ರನ್ ಗಳಿಸಿ ಗುಜರಾತ್ ಟೈಟಾನ್ಸ್ ಗೆಲುವಿಗೆ ಕಾರಣರಾದರು. ಈ ಪಂದ್ಯದಲ್ಲಿ ಗುಜರಾತ್ 58 ರನ್‌ಗಳಿಂದ ಜಯಗಳಿಸಿತು. ಸುದರ್ಶನ್ 54.60 ಸರಾಸರಿಯಲ್ಲಿ 273 ರನ್ ಗಳಿಸಿ ಗರಿಷ್ಠ ಸ್ಕೋರರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪ್ರಸಿದ್ಧ್ ಕೃಷ್ಣ 3 ವಿಕೆಟ್ ಪಡೆದರು. ಗುಜರಾತ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಅಹಮದಾಬಾದ್‌: ತಮಿಳುನಾಡಿನ ಎಡಗೈ ಬ್ಯಾಟರ್‌ ಬಿ.ಸಾಯಿ ಸುದರ್ಶನ್‌ ತಮ್ಮ ಅಬ್ಬರದ ಆಟ ಮುಂದುವರಿಸಿದ್ದಾರೆ. 2024ರ ಐಪಿಎಲ್ ಬಳಿಕ ಈ ಬಾರಿ ಐಪಿಎಲ್‌ನಲ್ಲೂ ಮಿಂಚಿನ ಆಟವಾಡುತ್ತಿರುವ ಸುದರ್ಶನ್‌, ಭಾರತ ತಂಡದಲ್ಲಿ ಸ್ಥಾನ ಗಟ್ಟಿಸಿಗೊಳಿಸುವ ನಿರೀಕ್ಷೆಯಲ್ಲಿದ್ದಾರೆ.

ಆರಂಭಿಕ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ 74 ರನ್‌ ಚಚ್ಚಿದ್ದ ಸುದರ್ಶನ್‌, ಮುಂಬೈ ಇಂಡಿಯನ್ಸ್‌ ವಿರುದ್ಧ 63 ರನ್‌ ಸಿಡಿಸಿದ್ದರು. ಬಳಿಕ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ 49 ರನ್‌ ಸಿಡಿಸಿ, ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಇತ್ತೀಚೆಗೆ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಕೇವಲ 5 ರನ್‌ ಗಳಿಸಿದ್ದರೂ, ಬುಧವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ಮತ್ತೆ ಅಬ್ಬರಿಸಿದ್ದಾರೆ. ಅವರು 53 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್‌ಗಳೊಂದಿಗೆ 82 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು. ಅವರು ಟೂರ್ನಿಯಲ್ಲಿ 54.60ರ ಸರಾಸರಿಯಲ್ಲಿ 273 ರನ್‌ ಕಲೆಹಾಕಿದ್ದು, ಗರಿಷ್ಠ ಸ್ಕೋರರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಆರ್‌ಸಿಬಿಗೆ ಪಾದಾರ್ಪಣೆ ಮಾಡಿದ ಕ್ಷಣ ನೆನೆದು ಭಾವುಕರಾದ ಕೊಹ್ಲಿ!

ಭಾರತ ಪರ ಕೇವಲ 3 ಏಕದಿನ ಪಂದ್ಯಗಳನ್ನು ಆಡಿದ್ದರೂ, 2 ಅರ್ಧಶತಕ ಬಾರಿಸಿ ತಾವು ಅಂ.ರಾ. ಕ್ರಿಕೆಟ್‌ಗೂ ಸೈ ಎನ್ನುವುದನ್ನು ಸುದರ್ಶನ್‌ ಸಾಬೀತುಪಡಿಸಿದ್ದರು. ಈ ಬಾರಿ ಐಪಿಎಲ್‌ ಮೂಲಕ ಭಾರತ ತಂಡದ ಕಾಯಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಟೈಟಾನ್ಸ್‌ಗೆ ಮಂಡಿಯೂರಿದ ರಾಯಲ್ಸ್‌

ಅಹಮದಾಬಾದ್‌: ಈ ಸಲ ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ 4ನೇ ಗೆಲುವು ಸಾಧಿಸಿದ್ದು, ರಾಜಸ್ಥಾನ ರಾಯಲ್ಸ್‌ 3ನೇ ಸೋಲು ಕಂಡಿದೆ. ಗುರುವಾರ ಪಂದ್ಯದಲ್ಲಿ ಗುಜರಾತ್‌ 58 ರನ್‌ ಭರ್ಜರಿ ಗೆಲುವು ದಾಖಲಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಸಾಯಿ ಸುದರ್ಶನ್ ಸ್ಪೋಟಕ ಬ್ಯಾಟಿಂಗ್ ಹಾಗೂ ಕನ್ನಡಿಗ ವೇಗಿ ಪ್ರಸಿದ್ದ್ ಕೃಷ್ಣ ಮಿಂಚಿನ ದಾಳಿಯ ನೆರವಿನಿಂದ ರಾಜಸ್ಥಾನ ರಾಯಲ್ಸ್ ಎದುರು ಗುಜರಾತ್ ಭರ್ಜರಿ ಗೆಲುವು ದಾಖಲಿಸಿದೆ.

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ಟೈಟಾನ್ಸ್ 6 ವಿಕೆಟ್‌ಗೆ 217 ರನ್‌ ಗಳಿಸಿತು. ಚೆನ್ನೈ ಮೂಲದ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್‌ 53 ಎಸೆತಕ್ಕೆ 82, ಜೋಸ್ ಬಟ್ಲರ್‌ 36, ಶಾರುಖ್‌ ಖಾನ್‌ 36, ರಾಹುಲ್‌ ತೆವಾಟಿಯಾ 24 ರನ್‌ ಗಳಿಸಿದರು. ರಾಜಸ್ಥಾನ ರಾಯಲ್ಸ್ ಪರ ತುಷಾರ್ ದೇಶಪಾಂಡೆ ಹಾಗೂ ಮಹೀಶ್ ತೀಕ್ಷಣ ತಲಾ 2 ವಿಕೆಟ್ ಕಬಳಿಸಿದರಾದರೂ ಈ ಇಬ್ಬರೂ ಬೌಲರ್‌ಗಳು 50+ ರನ್ ಬಿಟ್ಟುಕೊಡುವ ಮೂಲಕ ದುಬಾರಿಯಾದರು.

ಇದನ್ನೂ ಓದಿ: ಧೋನಿ ತೋರಿಸಿ ಅಭಿಮಾನಿಗಳಿಗೆ ಟೋಪಿ ಹಾಕಿ ದುಡ್ಡು ಮಾಡ್ತಿದಿಯಾ ಸಿಎಸ್‌ಕೆ?

ದೊಡ್ಡ ಗುರಿ ಬೆನ್ನತ್ತಿದ ರಾಯಲ್ಸ್‌ ಬ್ಯಾಟಿಂಗ್‌ ವೈಫಲ್ಯಕ್ಕೆ ಒಳಗಾಗಿ 19.2 ಓವರ್‌ಗಳಲ್ಲಿ 159 ರನ್‌ಗೆ ಆಲೌಟಾಯಿತು. ಹೆಟ್ಮೇಯರ್‌(32 ಎಸೆತಕ್ಕೆ 52), ಸಂಜು ಸ್ಯಾಮ್ಸನ್‌(41) ಹೋರಾಟ ವ್ಯರ್ಥವಾಯಿತು. 12ಕ್ಕೆ 2 ವಿಕೆಟ್‌ ಕಳೆದುಕೊಂಡಿದ್ದ ತಂಡ, ಪವರ್‌-ಪ್ಲೇ ಅಂತ್ಯಕ್ಕೆ 57 ರನ್‌ ಗಳಿಸಿತ್ತು. ಆದರೆ 7ನೇ ಓವರಲ್ಲಿ ರಿಯಾನ್‌(26) ಔಟಾದ ಬಳಿಕ ಕುಸಿರಾಯುತ್ತಲೇ ಹೋದ ತಂಡ ಬಳಿಕ ಚೇತರಿಸಿಕೊಳ್ಳಲಿಲ್ಲ. ಯಶಸ್ವಿ ಜೈಸ್ವಾಲ್, ಧೃವ್ ಜುರೆಲ್, ನಿತಿಶ್ ರಾಣಾ ಹಾಗೂ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಶುಭಂ ದುಬೆ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು, ರಾಜಸ್ಥಾನ ರಾಯಲ್ಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಪ್ರಸಿದ್ಧ್ ಕೃಷ್ಣ 3 ವಿಕೆಟ್‌ ಕಿತ್ತರು.

ಸ್ಕೋರ್‌:
ಗುಜರಾತ್ ಟೈಟಾನ್ಸ್: 217/6
ಸಾಯಿ ಸುದರ್ಶನ್: 82
ತುಷಾರ್ ದೇಶಪಾಂಡೆ: 53/2

ರಾಜಸ್ಥಾನ ರಾಯಲ್ಸ್: 159/10
ಶಿಮ್ರೊನ್ ಹೆಟ್ಮೇಯರ್: 52
ಪ್ರಸಿದ್ಧ್ ಕೃಷ್ಣ: 24/3

ಪಂದ್ಯಶ್ರೇಷ್ಠ: ಸಾಯಿ ಸುದರ್ಶನ್