ಐಪಿಎಲ್‌ನಲ್ಲಿ ಸೋಲಿನ ಆರಂಭ ಪಡೆದ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಗುವಾಹಟಿಯಲ್ಲಿ ಮುಖಾಮುಖಿಯಾಗಲಿವೆ. ಉಭಯ ತಂಡಗಳು ಕಳಪೆ ಬೌಲಿಂಗ್‌ನಿಂದ ಸೋತಿದ್ದು, ಬೌಲರ್‌ಗಳಿಗೆ ಇದು ಅಗ್ನಿಪರೀಕ್ಷೆಯಾಗಲಿದೆ. ಕೆಕೆಆರ್ ಸ್ಪಿನ್ನರ್‌ಗಳ ಮೇಲೆ ನಿರೀಕ್ಷೆ ಇಟ್ಟಿದೆ. ಗುವಾಹಟಿ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಮೊದಲು ಬ್ಯಾಟ್ ಮಾಡುವ ತಂಡಕ್ಕೆ ಹೆಚ್ಚಿನ ಅವಕಾಶವಿದೆ.

ಗುವಾಹಟಿ: ಈ ಬಾರಿ ಐಪಿಎಲ್‌ನಲ್ಲಿ ಸೋಲಿನ ಆರಂಭ ಪಡೆದಿರುವ ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಚೊಚ್ಚಲ ಆವೃತ್ತಿಯ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್‌ ತಂಡಗಳು ಬುಧವಾರ ಪರಸ್ಪರ ಸೆಣಸಾಡಲಿವೆ. ಪಂದ್ಯಕ್ಕೆ ಅಸ್ಸಾಂನ ಗುವಾಹಟಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್‌ ತಂಡ ಆರ್‌ಸಿಬಿ ವಿರುದ್ಧ 7 ವಿಕೆಟ್‌ಗಳಿಂದ ಪರಾಭವಗೊಂಡಿದ್ದರೆ, ರನ್‌ ಮಳೆ ಹರಿದಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಪಂದ್ಯದಲ್ಲಿ ರಾಜಸ್ಥಾನ 44 ರನ್‌ಗಳಲ್ಲಿ ಸೋಲನುಭವಿಸಿತ್ತು. ಈ ಎರಡೂ ತಂಡಗಳು ಕಳಪೆ ಬೌಲಿಂಗ್‌ ಪ್ರದರ್ಶನದಿಂದಾಗಿ ಸೋತಿದ್ದವು. ಹೀಗಾಗಿ ಬುಧವಾರದ ಪಂದ್ಯದ ಉಭಯ ತಂಡಗಳ ನಡುವಿನ ಬೌಲರ್‌ಗಳಿಗೆ ಅಗ್ನಿಪರೀಕ್ಷೆಯಾಗಿರಲಿದೆ.

ಇದನ್ನೂ ಓದಿ: ,IPL 2025: ಪಂಜಾಬ್ ಎದುರು ರನ್ ಮಳೆಗೆ ಮುಳುಗಿದ ಗುಜರಾತ್ ಟೈಟಾನ್ಸ್!

ಕೆಕೆಆರ್‌ ತನ್ನ ಸ್ಪಿನ್ನರ್‌ಗಳ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ವರುಣ್‌ ಚಕ್ರವರ್ತಿ ಈ ಪಂದ್ಯದಲ್ಲಾದರೂ ತಂಡದ ಕೈಹಿಡಿಯಬೇಕಿದೆ. ಮತ್ತೊಂದೆಡೆ ಸನ್‌ರೈಸರ್ಸ್‌ ವಿರುದ್ಧ ಸುಲಭದಲ್ಲಿ ಚಚ್ಚಿಸಿಕೊಂಡಿದ್ದ ರಾಜಸ್ಥಾನದ ವೇಗಿಗಳು ಮೊನಚು ದಾಳಿ ಸಂಘಟಿಸಬೇಕಾದ ಅಗತ್ಯವಿದೆ.

ಕೆಕೆಆರ್‌ನ ರಿಂಕು ಸಿಂಗ್‌ ಕಳೆದ 6 ಇನ್ನಿಂಗ್ಸ್‌ಗಳಲ್ಲಿ ಒಮ್ಮೆ ಮಾತ್ರ 30 ರನ್‌ ಗಳಿಸಿದ್ದು, ಉಳಿದ 5 ಪಂದ್ಯಗಳಲ್ಲಿ ಒಟ್ಟಾರೆ 49 ರನ್‌ ಬಾರಿಸಿದ್ದಾರೆ. ಅವರಿಂದ ತಂಡ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸುತ್ತಿದೆ.

ಇದನ್ನೂ ಓದಿ: ಸಿಟ್ಟಿನಲ್ಲಿ ಮಲಗುವ ಮಂಚಕ್ಕೆ ಒದ್ದ ಮಯಾಂಕ್; ಐಪಿಎಲ್ ಆಡೋದು ಮತ್ತಷ್ಟು ತಡ!

ಮುಖಾಮುಖಿ: 29

ಕೆಕೆಆರ್‌: 14

ರಾಜಸ್ಥಾನ: 14

ಫಲಿತಾಂಶವಿಲ್ಲ: 01

ಸಂಭಾವ್ಯ ಆಟಗಾರರು

ಕೆಕೆಆರ್‌: ಕ್ವಿಂಟನ್ ಡಿ ಕಾಕ್‌, ಸುನಿಲ್ ನರೈನ್‌, ಅಜಿಂಕ್ಯಾ ರಹಾನೆ(ನಾಯಕ), ವೆಂಕಟೇಶ್‌ ಅಯ್ಯರ್, ಅಂಗಕೃಷ್ ರಘುವಂಶಿ, ರಿಂಕು ಸಿಂಗ್, ಆಂಡ್ರೆ ರಸೆಲ್‌, ರಮನ್‌ದೀಪ್‌ ಸಿಂಗ್, ಹರ್ಷಿತ್‌ ರಾಣಾ, ಸ್ಪೆನ್ಸರ್ ಜಾನ್ಸನ್, ವೈಭವ್‌ ಅರೋರಾ. ವರುಣ್ ಚಕ್ರವರ್ತಿ.

ರಾಜಸ್ಥಾನ: ಸಂಜು ಸ್ಯಾಮ್ಸನ್‌, ಯಶಸ್ವಿ ಜೈಸ್ವಾಲ್‌, ರಿಯಾನ್ ಪರಾಗ್(ನಾಯಕ), ನಿತೀಶ್ ರಾಣಾ, ಧ್ರುವ್‌ ಜುರೆಲ್, ಶಿಮ್ರೊನ್ ಹೆಟ್ಮೇಯರ್, ಶುಭಂ ದುಬೆ, ಜೋಫ್ರಾ ಆರ್ಚರ್‌, ಮಹೀಶ್ ತೀಕ್ಷಣ, ತುಷಾರ್‌ ದೇಶಪಾಂಡೆ, ಸಂದೀಪ್‌ ಶರ್ಮಾ, ಫಝಲ್‌ಹಕ್ ಫಾರೂಖಿ.

ಪಂದ್ಯ: ಸಂಜೆ 7.30ಕ್ಕೆ

ಪಿಚ್‌ ರಿಪೋರ್ಟ್‌

ಗುವಾಹಟಿ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಹೆಚ್ಚು. ಇಲ್ಲಿ ಮೊದಲ ಇನ್ನಿಂಗ್ಸ್‌ ಸರಾಸರಿ ಮೊತ್ತ 190. ರಾತ್ರಿ ವೇಳೆ ಮಂಜು ಬೀಳುವ ಸಾಧ್ಯತೆ ಇರುವುದರಿಂದ ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ನೆರವು ಸಿಗಬಹುದು.