ಆರ್‌ಸಿಬಿ ವಿರುದ್ಧ ಗೆಲುವು ಸಾಧಿಸಿದ ಬಳಿಕ ಕೆ ಎಲ್‌ ರಾಹುಲ್‌ ಅವರ ಸಂಭ್ರಮಾಚರಣೆ ಸಾಕಷ್ಟು ಸದ್ದು ಮಾಡಿದೆ. ಈ ಬಗ್ಗೆ ಮಾತನಾಡುತ್ತ ರಾಹುಲ್‌ ಅವರು ಕಾಂತಾರ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ.  

ಆರ್‌ಸಿಬಿ ಎದುರು ಗೆದ್ದ ಬಳಿಕ ಕೆ ಎಲ್‌ ರಾಹುಲ್‌ ಅವರು ಚಿನ್ನಸ್ವಾಮಿ ಮೈದಾನದಲ್ಲೇ ʼಒಂದು ವೃತ್ತ ಬರೆದು, ಇದು ನನ್ನ ನೆಲʼ ಎಂದು ಸನ್ನೆ ಮಾಡಿದ್ದರು. ಈ ಬಗ್ಗೆಯೇ ಈಗ ಭಾರೀ ಚರ್ಚೆ ಆಗುತ್ತಿದೆ. ಅಂದಹಾಗೆ 'ಕಾಂತಾರ' ಸಿನಿಮಾದ ದೃಶ್ಯವನ್ನು ಕೆ ಎಲ್‌ ರಾಹುಲ್‌ ಅವರು ರೀ ಕ್ರಿಯೇಟ್‌ ಮಾಡಿದ್ದಾರೆ. ಈ ವಿಷಯವನ್ನು ಸ್ವತಃ ರಾಹುಲ್‌ ಅವರೇ ಹೇಳಿಕೊಂಡಿದ್ದಾರೆ. 

ಕಾಂತಾರ ಸಿನಿಮಾ ಪ್ರಭಾವ!
“ನಾನು ಕಾಂತಾರ ಸಿನಿಮಾ ನೋಡಿದ್ದೆ. ಅದು ನನ್ನ ಫೇವರಿಟ್‌ ಸಿನಿಮಾ. ಈ ಮೈದಾನ ನನಗೆ ತುಂಬ ವಿಶೇಷವಾದುದು. ಅಲ್ಲಿನ ದೃಶ್ಯವನ್ನು ನಾನು ಇಲ್ಲಿ ಮಾಡಿದ್ದೇನೆ. ನಾನು ಬೆಳೆದಿದ್ದೆಲ್ಲವೂ ಇಲ್ಲಿಯೇ. ಇದು ನನ್ನ ಗ್ರೌಂಡ್‌, ನನ್ನದು ಅಂತ ನೆನಪಿಸೋಕೆ ಹೀಗೆ ಮಾಡಿದೆ” ಎಂದು ಕೆ ಎಲ್‌ ರಾಹುಲ್‌ ಅವರು ಹೇಳಿದ್ದಾರೆ. ಅಂದಹಾಗೆ ರಿಷಬ್‌ ಶೆಟ್ಟಿ ನಟನೆಯ, ನಿರ್ದೇಶನದ ʼಕಾಂತಾರಾʼ ಸಿನಿಮಾ ದೇಶ-ವಿದೇಶದಲ್ಲಿ ಸದ್ದು ಮಾಡಿದ್ದು, ಬಂಗಾರದ ಬೆಳೆ ತೆಗೆದ ಚಿತ್ರ ಎನಿಸಿಕೊಂಡಿದೆ. 

ಡೆಲ್ಲಿ ಕ್ಯಾಪಿಟಲ್ಸ್ ಎದುರು ಆರ್‌ಸಿಬಿ ಸೋಲಿಗೆ ಇಲ್ಲಿದೆ ಮೂರು ಮೇಜರ್ ಕಾರಣ!

ಸಖತ್‌ ಆಗಿ ಆಟ ಆಡಿದ ರಾಹುಲ್!‌ 
ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ವಿರುದ್ಧ ಬಲಗೈ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅವರು ಸಖತ್‌ ಆಗಿ ಆಟ ಆಡಿದರು. 32 ವರ್ಷದ ರಾಹುಲ್ ಅವರು 93 ರನ್ ಗಳಿಸುವ ಮೂಲಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಲು ದೊಡ್ಡ ಕೊಡುಗೆ ನೀಡಿದ್ದರು. 164 ರನ್‌ ಪಡೆಯಲು ಡೆಲ್ಲಿ ಕ್ಯಾಪಿಟಲ್ಸ್ ಒಂದು ಹಂತದಲ್ಲಿ 58/4 ರೊಂದಿಗೆ ಕಷ್ಟದಲ್ಲಿಯೇ ಇತ್ತು, ಆದರೆ ರಾಹುಲ್, ಟ್ರಿಸ್ಟಾನ್ ಸ್ಟಬ್ಸ್ ಐದನೇ ವಿಕೆಟ್‌ಗೆ 111 ರನ್‌ಗಳ ಆಟ ಆಡಿ, ತಂಡವನ್ನು ಗೆಲ್ಲಿಸಿದರು.

ಈ ಗ್ರೌಂಡ್‌ ಬಗ್ಗೆ ನಂಗಿಂತ ಯಾರಿಗೂ ಚೆನ್ನಾಗಿ ಗೊತ್ತಿಲ್ಲ
53 ಎಸೆತಗಳಲ್ಲಿ 93 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ರಾಹುಲ್ ಅವರು ಮ್ಯಾಚ್‌ ಬಳಿಕ ಮಾತನಾಡಿದ್ದಾರೆ. “ಬೆಂಗಳೂರಿನ ಪಿಚ್ ಪರಿಸ್ಥಿತಿಯ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ, ಆದ್ದರಿಂದ ತನ್ನ ಇನ್ನಿಂಗ್ಸ್ ಹೇಗೆ ಮುಂದುವರಿಸಬೇಕು, 13 ಎಸೆತಗಳು ಬಾಕಿ ಇರುವಾಗ ನನ್ನ ತಂಡವನ್ನು ಗೆಲುವಿನ ಗೆರೆ ಹೇಗೆ ದಾಟಿಸೋದು ಅಂತ ಗೊತ್ತಿತ್ತು. ಇದು ನನ್ನ ಮೈದಾನ, ಇದು ನನ್ನ ಜಾಗ. ಇದರ ಬಗ್ಗೆ ಬೇರೆಯವರಿಗಿಂತ ನನಗೆ ಚೆನ್ನಾಗಿ ಗೊತ್ತು. ಇಲ್ಲಿ ಆಡೋದನ್ನು ಎಂಜಾಯ್‌ ಮಾಡ್ತೀನಿ” ಎಂದು ಕೆ ಎಲ್‌ ರಾಹುಲ್ ಹೇಳಿದ್ದಾರೆ. 

ಕೆಎಲ್‌ ರಾಹುಲ್‌ ಸೆಲೆಬ್ರೆಷನ್‌ಗೆ ದಂಗಾದ ಆರ್‌ಸಿಬಿ ಪ್ಲೇಯರ್‌! ಮ್ಯಾಚ್‌ ಬಳಿಕ ಏನದು ಎಂದು ಪ್ರಶ್ನೆ?

ಆಟ ತಿರುವು ತಗೊಂಡಿದ್ದು ಎಲ್ಲಿ? 
ಡೆಲ್ಲಿ ಕ್ಯಾಪಿಟಲ್ಸ್ ಒತ್ತಡದಲ್ಲಿದ್ದಾಗ ಆರ್‌ಸಿಬಿಯ ಅತ್ಯುತ್ತಮ ಬೌಲರ್‌ನ ಮೇಲೆ ಕೆ ಎಲ್‌ ರಾಹುಲ್‌ ದಾಳಿ ಮಾಡಿದರು. ಇದು ಅವರ ಬ್ಯಾಟಿಂಗ್‌ನ ಅತ್ಯುತ್ತಮ ಭಾಗ ಎನ್ನಬಹುದು. 15 ನೇ ಓವರ್‌ನಲ್ಲಿ, ಬಲಗೈ ಬೌಲರ್ ಜೋಶ್ ಹ್ಯಾಜಲ್‌ವುಡ್ ಅವರನ್ನು ಹಿಂಬಾಲಿಸಿ 22 ರನ್‌ ಹೊಡೆದರು. ಇದಕ್ಕೂ ಮುನ್ನ, ಆಟದ ನಿರ್ಣಾಯಕ ಹಂತದಲ್ಲಿ, ಆರ್‌ಸಿಬಿ ನಾಯಕ ರಜತ್ ಪಾಟಿದಾರ್, ಕೆಎಲ್ ರಾಹುಲ್ ಅವರ ಕ್ಯಾಚ್ ಅನ್ನು ಕೈಬಿಟ್ಟರು, ಇದು ಆಟದ ಅತಿದೊಡ್ಡ ತಿರುವಾಗಿದೆ. 

ಹೆಣ್ಣು ಮಗುವಿನ ಪಾಲಕರು! 
ನಟ ಸುನೀಲ್‌ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಜೊತೆಗೆ ಕೆ ಎಲ್‌ ರಾಹುಲ್‌ ಮದುವೆಯಾಗಿದೆ. ರಾಹುಲ್‌, ಅಥಿಯಾ ಇತ್ತೀಚೆಗೆ ಹೆಣ್ಣು ಮಗುವಿನ ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ಪತಿಯ ಗೆಲುವಿನ ಬಗ್ಗೆ ಮಾತಾಡಿರುವ ಅಥಿಯಾ ಶೆಟ್ಟಿ, “ಈ ಹುಡುಗ..UFF” ಎಂದು ಹೇಳಿಕೊಂಡಿದ್ದಾರೆ. ಅಂದಹಾಗೆ ಈ ಪುಟ್ಟ ಲಕ್ಷ್ಮೀಯಿಂದಲೇ ರಾಹುಲ್‌ ಸಖತ್‌ ಆಗಿ ಆಟ ಆಡಿದರು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. 

Scroll to load tweet…