ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿದೆ. ಜಿತೇಶ್ ಶರ್ಮಾ ಅವರನ್ನು ಮಂಕಡಿಂಗ್ ಮಾಡಲು ದಿಗ್ವೇಶ್ ರಾಠಿ ಪ್ರಯತ್ನಿಸಿದ್ದು ವಿವಾದಕ್ಕೆ ಕಾರಣವಾಯಿತು. ಆದರೆ ನಿಯಮಗಳ ಪ್ರಕಾರ ಜಿತೇಶ್ ಶರ್ಮಾ ನಾಟೌಟ್ ಆಗಿಯೇ ಉಳಿಯುತ್ತಿದ್ದರು.
ಲಖನೌ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇದರ ಜತೆಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದು ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಅರ್ಹತೆ ಪಡೆದುಕೊಂಡಿದೆ. ಈ ಪಂದ್ಯದ ಗೆಲುವಿನ ಪ್ರಮುಖ ರೂವಾರಿ ಅಂದ್ರೆ ಅದು ಆರ್‌ಸಿಬಿ ಹಂಗಾಮಿ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ. ಇನ್ನು ಸ್ಪಿನ್ನರ್ ದಿಗ್ವೇಶ್ ರಾಠಿ, ಜಿತೇಶ್ ಶರ್ಮಾ ಅವರನ್ನು ಮಂಕಡಿಂಗ್ ಮಾಡಲು ಹೋಗಿ ಪೆಚ್ಚುಮೊರೆ ಹಾಕಿಕೊಂಡ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಲಖನೌ ಸೂಪರ್ ಜೈಂಟ್ಸ್ ನೀಡಿದ್ದ 228 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ವಿಕೆಟ್ ಕಳೆದುಕೊಂಡಿತು. ಆದರೆ 5ನೇ ವಿಕೆಟ್‌ಗೆ ಮಯಾಂಕ್ ಅಗರ್‌ವಾಲ್ ಹಾಗೂ ಜಿತೇಶ್ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಈ ಸಂದರ್ಭದಲ್ಲಿ 17ನೇ ಓವರ್‌ನ ಕೊನೆಯ ಎಸೆತದಲ್ಲಿ ಲಖನೌ ಸ್ಪಿನ್ನರ್ ದಿಗ್ವೇಶ್ ರಾಠಿ, ನಾನ್ ಸ್ಟ್ರೈಕರ್‌ನಲ್ಲಿದ್ದ ಜಿತೇಶ್ ಶರ್ಮಾ ಅವರನ್ನು ಮಂಕಡಿಂಗ್ ರನೌಟ್ ಮಾಡಲು ಪ್ರಯತ್ನಿಸಿ, ಔಟ್‌ಗೆ ಅಂಪೈರ್‌ಗೆ ಮನವಿ ಮಾಡಿದರು. ಆಗ ಲಖನೌ ನಾಯಕ ರಿಷಭ್ ಪಂತ್ ಔಟ್ ಮನವಿಯನ್ನು ಹಿಂಪಡೆದುಕೊಂಡರು. ಥರ್ಡ್ ಅಂಪೈರ್ ಕೂಡಾ ನಾಟೌಟ್ ತೀರ್ಪಿತ್ತರು.
ಇನ್ನು ರಿಷಭ್ ಪಂತ್ ಔಟ್‌ಗೆ ಸಲ್ಲಿಸಿದ್ದ ಮನವಿಯನ್ನು ಹಿಂಪಡೆಯುತ್ತಿದ್ದಂತೆಯೇ ಜಿತೇಶ್ ಶರ್ಮಾ, ಪಂತ್ ಅವರನ್ನು ಬಿಗಿದಪ್ಪಿ ಧನ್ಯವಾದಗಳನ್ನು ಸಲ್ಲಿಸಿದರು. ಆದರೆ ರಿಷಭ್ ಪಂತ್ ಅಫೀಲ್ ಹಿಂದೆ ಪಡೆಯಲಿದ್ದರೂ ಜಿತೇಶ್ ಶರ್ಮಾ ನಾಟೌಟ್ ಆಗಿಯೇ ಉಳಿಯುತ್ತಿದ್ದರೂ ಎನ್ನುವ ಆಸಕ್ತಿದಾಯಕ ಅಂಶ ಇದೀಗ ಬೆಳಕಿಗೆ ಬಂದಿದೆ.
ಹೌದು, ದಿಗ್ವೇಶ್ ರಾಠಿ, ನಾನ್‌ಸ್ಟ್ರೈಕರ್‌ನಲ್ಲಿದ್ದ ಜಿತೇಶ್ ಶರ್ಮಾ ಅವರನ್ನು ಮಂಕಡಿಂಗ್ ರನೌಟ್ ಮಾಡುವ ಸಂದರ್ಭದಲ್ಲಿ ಜಿತೇಶ್ ಶರ್ಮಾ ನಾನ್ ಸ್ಟ್ರೈಕರ್ ಕ್ರೀಸ್‌ನಿಂದ ಹೊರ ಹೋಗಿದ್ದರು. ಆದರೆ ನಾನ್‌ಸ್ಟ್ರೈಕರ್ ರನೌಟ್ ರೂಲ್ಸ್ ಬೇರೆಯದ್ದೇ ಸಂಗತಿಯನ್ನು ಬಿಚ್ಚಿಟ್ಟಿದೆ.
ರೂಲ್ಸ್ ಪ್ರಕಾರ, ಬೌಲರ್ ಆದವರು ತಮ್ಮ ಬೌಲಿಂಗ್ ಆಕ್ಷನ್ ಕಂಪ್ಲೀಟ್ ಮಾಡಿದ ಬಳಿಕ ಮಂಕಡಿಂಗ್ ರನೌಟ್ ಮಾಡಲು ಅವಕಾಶವಿಲ್ಲ. ಇದಷ್ಟೇ ಅಲ್ಲದೇ ಪಾಪಿಂಗ್ ಕ್ರೀಸ್‌ನೊಳಗಿಂದಲೇ ನಾನ್‌ಸ್ಟ್ರೈಕರ್ ಅವರನ್ನು ರನೌಟ್ ಮಾಡಲು ಅವಕಾಶವಿದೆ. ಆದರೆ ದಿಗ್ವೇಶ್ ರಾಠಿ ಬೌಲಿಂಗ್ ಆಕ್ಷನ್ ಕಂಪ್ಲೀಟ್ ಮಾಡಿದ್ದೂ ಅಲ್ಲದೇ, ಪಾಪಿಂಗ್ ಕ್ರೀಸ್ ಹೊರಗೆ ಕಾಲಿಟ್ಟಿರುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಗೋಚರಿಸುತ್ತಿತ್ತು. ಇದೇ ಕಾರಣಕ್ಕಾಗಿ ಥರ್ಡ್ ಅಂಪೈರ್ ನಾಟೌಟ್ ಎನ್ನುವ ತೀರ್ಪು ನೀಡಿದರು.
ಇನ್ನು ಆರ್‌ಸಿಬಿ ಹಾಗೂ ಲಖನೌ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡವು ನಾಯಕ ರಿಷಭ್ ಪಂತ್ ಬಾರಿಸಿದ ಆಕರ್ಷಕ ಶತಕ ಹಾಗೂ ಮಿಚೆಲ್ ಮಾರ್ಷ್ ಅರ್ಧಶತಕದ ನೆರವಿನಿಂದ ಮೂರು ವಿಕೆಟ್ ಕಳೆದುಕೊಂಡು 227 ರನ್ ಕಲೆಹಾಕಿತು. ಇನ್ನು ಗುರಿ ಬೆನ್ನತ್ತಿದ ಆರ್‌ಸಿಬಿ ವಿರಾಟ್ ಕೊಹ್ಲಿ ಹಾಗೂ ಜಿತೇಶ್ ಶರ್ಮಾ ಆಕರ್ಷಕ ಅರ್ಧಶತಕಗಳ ನೆರವಿನಿಂದ ಇನ್ನೂ 8 ಎಸೆತ ಬಾಕಿ ಇರುವಂತೆಯೇ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಅಜೇಯ 85 ರನ್ ಸಿಡಿಸಿ ಗೆಲುವಿನ ರೂವಾರಿಯಾದ ಜಿತೇಶ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.
