ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ಪ್ಲೇ-ಆಫ್‌ನಲ್ಲಿ ಕ್ವಾಲಿಫೈಯರ್ -1ರಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ. ಸೂರ್ಯಕುಮಾರ್ ಯಾದವ್ ಅವರ 57 ರನ್‌ಗಳ ಹೊರತಾಗಿಯೂ, ಮುಂಬೈ 184 ರನ್‌ಗಳಿಗೆ ಸೀಮಿತವಾಯಿತು.
ಜೈಪುರ: ಮುಂಬೈ ಇಂಡಿಯನ್ಸ್ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿದ ಪಂಜಾಬ್ ಕಿಂಗ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದರೊಂದಿಗೆ ತಂಡ ಪ್ಲೇ-ಆಫ್‌ನಲ್ಲಿ ಕ್ವಾಲಿಫೈಯರ್ -1ರಲ್ಲಿ ಆಡಲಿದೆ. 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎಲಿಮಿನೇಟರ್‌ನಲ್ಲಿ ಆಡಬೇಕಿದೆ. ಪಂಜಾಬ್ 14 ಪಂದ್ಯಗಳಲ್ಲಿ 19 ಅಂಕ ಗಳಿಸಿದ್ದು, ಅಗ್ರ-2ರಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು. ಮುಂಬೈ 16 ಅಂಕದೊಂದಿಗೆ 4ನೇ ಸ್ಥಾನದಲ್ಲೇ ಉಳಿಯಿತು.
ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 7 ವಿಕೆಟ್‌ಗೆ 184 ರನ್ ಗಳಿಸಿತು. ಸೂರ್ಯಕುಮಾರ್ ಯಾದವ್ 57 ರನ್ ಸಿಡಿಸಿದರು. ಬೇರೆ ಯಾರೂ 30ಕ್ಕಿಂತ ಹೆಚ್ಚು ರನ್ ಗಳಿಸಲಿಲ್ಲ. ಆರಂಭಿಕ ಬ್ಯಾಟರ್‍ಗಳಾದ ರಿಯನ್ ರಿಕೆಲ್ಟನ್ 27 ರನ್ ಸಿಡಿಸಿದರೆ, ಮಾಜಿ ನಾಯಕ ರೋಹಿತ್ ಶರ್ಮಾ 24 ರನ್ ಸಿಡಿಸಿ ಹರ್ಪ್ರೀತ್ ಬ್ರಾರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ತಿಲಕ್ ವರ್ಮಾ ಹಾಗೂ ವಿಲ್ ಜ್ಯಾಕ್ಸ್‌ಗೆ ಕನ್ನಡಿಗ ವೈಶಾಕ್ ವಿಜಯ್‌ಕುಮಾರ್ ಪೆವಿಲಿಯನ್ ಹಾದಿ ತೋರಿಸಿದರು. ತಿಲಕ್ ವರ್ಮಾ ಒಂದು ರನ್‌ಗೆ ವಿಕೆಟ್ ಒಪ್ಪಿಸಿದರೆ, ವಿಲ್ ಜ್ಯಾಕ್ಸ್ ಬ್ಯಾಟಿಂಗ್ 17 ರನ್‌ಗಳಿಗೆ ಸೀಮಿತವಾಯಿತು. ಇನ್ನು ನಾಯಕ ಹಾರ್ದಿಕ್ ಪಾಂಡ್ಯ 26 ಹಾಗೂ ನಮನ್ ಧಿರ್ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಮತ್ತೆ ಅಬ್ಬರಿಸಿದ ಸೂರ್ಯಕುಮಾರ್: ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ತಂಡಕ್ಕೆ ಆಸರೆಯಾದರು. ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ ಯಾದವ್, 39 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 57 ರನ್ ಸಿಡಿಸಿ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಅರ್ಶದೀಪ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್ ಆರಂಭದಲ್ಲೇ ಪ್ರಭ್‌ಸಿಮ್ರನ್ ಸಿಂಗ್ ಅವರನ್ನು ಬಲಿ ಪಡೆಯುವಲ್ಲಿ ಜಸ್ಪ್ರೀತ್ ಬುಮ್ರಾ ಬಲಿ ಪಡೆಯುವ ಮೂಲಕ ಆರಂಭಿಕ ಶಾಕ್ ನೀಡಿದರು. ಆದರೆ ಎರಡನೇ ವಿಕೆಟ್‌ಗೆ ಜತೆಯಾದ ಪ್ರಿಯಾನ್ಸ್ ಆರ್ಯ ಹಾಗೂ ಜೋಶ್ ಇಂಗ್ಲಿಸ್ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ಮುಂಬೈ ಗೆಲುವಿನ ಕನಸನ್ನು ನುಚ್ಚುನೂರು ಮಾಡಿದರು. ಮುಂಬೈನ ವಿಶ್ವದರ್ಜೆಯ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಪ್ರಿಯಾನ್ಸ್ ಆರ್ಯ ಕೇವಲ 35 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಆಕರ್ಷಕ 62 ರನ್ ಸಿಡಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಆಸೀಸ್ ಮೂಲದ ಬ್ಯಾಟರ್ ಜೋಶ್ ಇಂಗ್ಲಿಶ್ 42 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಸ್ಪೋಟಕ 73 ರನ್ ಸಿಡಿಸಿ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದರು.
18.3 ಓವರ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು. ಶ್ರೇಯಸ್ ಅಯ್ಯರ್ ಅಜೇಯ 26 ರನ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಮುಂಬೈ ಇಂಡಿಯನ್ಸ್ ಪರ ಮಿಚೆಲ್ ಸ್ಯಾಂಟ್ನರ್ 2 ಹಾಗೂ ಜಸ್ಪ್ರೀತ್ ಬುಮ್ರಾ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾದರು.
ಸ್ಕೋರ್ : ಮುಂಬೈ 20 ಓವರಲ್ಲಿ 184/7 (ಸೂರ್ಯಕುಮಾರ್ 57, ಅರ್ಶದೀಪ್ 2-28)
ಪಂಜಾಬ್ 18.3 ಓವರಲ್ಲಿ 187/3 (ಇಂಗ್ಲಿಸ್ 73, ಪ್ರಿಯಾನ್ಸ್ 62, ಮಿಚೆಲ್ ಸ್ಯಾಂಟರ್ 2-41)
ಪಂದ್ಯಶ್ರೇಷ್ಠ: ಜೋಶ್ ಇಂಗ್ಲಿಸ್
