ಐಪಿಎಲ್ 2023 ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದೆ. ಇಂದಿನಿಂದ ಪ್ಲೇ ಆಫ್ ಹೋರಾಟ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಎಸ್‌ಕೆ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಚೆನ್ನೈ(ಮೇ.23): ಹಾಲಿ ಚಾಂಪಿಯನ್ ಹಾಗೂ ಮಾಜಿ ಚಾಂಪಿಯನ್ ಪ್ರಶಸ್ತಿ ಸುತ್ತಿನ ಪ್ರವೇಶಕ್ಕೆ ಇಂದು ಹೋರಾಟ ನಡಸುತ್ತಿದೆ. ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಹೋರಾಟಕ್ಕೆ ಅಭಿಮಾನಿಗಳು ಈಗಾಗಲೇ ಕಾದುಕುಳಿತಿದ್ದಾರೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಗುಜರಾತ್ ತಂಡ ಒಂದು ಬದಲಾವಣೆ ಮಾಡಿದೆ. ಯಶ್ ದಯಾಳ್ ಬದಲು ದರ್ಶನ್ ನಲ್ಕಂಡೆ ತಂಡ ಸೇರಿಕೊಂಡಿದ್ದಾರೆ. ಚೆನ್ನೈ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 

ಪ್ಲೇ ಆಫ್ ಸುತ್ತಿನ ಪಂದ್ಯಗಳು ಆರಂಭಗೊಂಡಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಸಲಿದೆ. ಇಲ್ಲಿ ಸೋತ ತಂಡಕ್ಕೆ ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶವಿದೆ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಹೋರಾಡಿ ಫೈನಲ್ ಪ್ರವೇಶಿಸಬಹುದು. ಹೀಗಾಗಿ ಫೈನಲ್ ಪ್ರವೇಶಕ್ಕೆ ಸಿಎಸ್‌ಕೆ ಹಾಗೂ ಗುಜರಾತ್ ಟೈಟಾನ್ಸ್ ಜಿದ್ದಾಜಿದ್ದಿನ ಹೋರಾಟ ನೀಡಲಿದೆ.

IPL 2023 ಗುಜರಾತ್ ಎದುರು ಅಬ್ಬರಿಸಲು ಧೋನಿ ರೆಡಿ; ನೆಟ್ಸ್‌ನಲ್ಲಿ ಮಹಿ ಭರ್ಜರಿ ಪ್ರಾಕ್ಟೀಸ್‌..! ವಿಡಿಯೋ ವೈರಲ್

ಮೇ.24 ರಂದು ಎಲಿಮಿನೇಟರ್ ಸುತ್ತಿನ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಗೆದ್ದ ತಂಡ ಫೈನಲ್ ಪ್ರವೇಶಕ್ಕೆ 2ನೇ ಕ್ವಾಲಿಫೈಯರ್ ಪಂದ್ಯ ಆಡಬೇಕಿದೆ. ಎರಡನೇ ಕ್ವಾಲಿಫೈಯರ್ ಪಂದ್ಯ ಮೇ.26 ರಂದು ನಡೆದರೆ, ಮೇ.28 ರಂದು ಅಹಮ್ಮದಾಬಾದ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಇದೀಗ ಪ್ರಶಸ್ತಿ ಗೆಲ್ಲುವ ತಂಡ ಯಾವುದು ಅನ್ನೋ ಚರ್ಚೆಗಳು ಜೋರಾಗಿ ನಡೆಯುತ್ತಿದೆ.

ಈ ಬಾರಿಯ ಐಪಿಎಲ್ ಲೀಗ್ ಟೂರ್ನಿಯಲ್ಲಿ ದಿಟ್ಟ ಹೋರಾಟ ನೀಡಿದರೂ ಆರ್‌ಸಿಬಿ ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆಯಲಿಲ್ಲ. ಅಂತಿಮ ಪಂದ್ಯದಲ್ಲಿ ಗುಜರಾತ್ ವಿರುದ್ಧ ಮುಗ್ಗರಿಸಿದ ಕಾರಣ ಆರ್‌ಸಿಬಿ ಟೂರ್ನಿಯಿಂದ ಹೊರಬಿದ್ದರೆ, ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿತು. ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಖನೌ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆದಿದೆ. ಇನ್ನುಳಿದ ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ

RCB ಸೋಲಿನ ಬೆನ್ನಲ್ಲೇ ಫ್ಯಾನ್ಸ್‌ಗೆ ಭಾವನಾತ್ಮಕ ಸಂದೇಶ ರವಾನಿಸಿದ ವಿರಾಟ್ ಕೊಹ್ಲಿ..!

ಗುಜರಾತ್ ಟೈಟಾನ್ಸ್ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಈ ಬಾರಿಯ ಲೀಗ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಟ ಪ್ರದರ್ಶಿಸಿ ಮೊದಲ ತಂಡವಾಗಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿತ್ತು. ಇತ್ತ ಚೆನ್ನೈ ಸೂಪರ್ ಕಿಂಗ್ಸ್ 5ನೇ ಐಪಿಎಲ್ ಟ್ರೋಫಿ ಗೆಲುವಿನ ತಯಾರಿಯಲ್ಲಿದೆ. ಈ ಮೂಲಕ ಧೋನಿಗೆ ಭರ್ಜರಿ ಗಿಫ್ಟ್ ನೀಡಲು ಸಿಎಸ್‌ಕೆ ತಂಡ ಸಿದ್ಧತೆ ನಡೆಸಿದೆ. ಇದರ ನಡುವೆ ಪ್ಲೇ ಆಫ್ ಪ್ರವೇಶಿಸಿರುವ ಮುಂಬೈ 6ನೇ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದ್ದರೆ, ಲಖನೌ ಸೂಪರ್ ಜೈಂಟ್ಸ್ ಚೊಚ್ಚಲ ಟ್ರೋಫಿ ನಿರೀಕ್ಷೆಯಲ್ಲಿದೆ.