ಐಪಿಎಲ್‌ ಲೀಗ್ ಹಂತದಲ್ಲೇ ಹೊರಬಿದ್ದ ಆರ್‌ಸಿಬಿಸೋಲಿನ ಬೆನ್ನಲ್ಲೇ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ 

ಬೆಂಗಳೂರು(ಮೇ.23): 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಲೀಗ್‌ ಹಂತದಲ್ಲೇ ಹೊರಬೀಳುವ ಮೂಲಕ ನಿರಾಸೆ ಅನುಭವಿಸಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ, ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.

ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಫೈನಲ್‌ಗೇರುವ ಎಲ್ಲಾ ಅವಕಾಶಗಳಿದ್ದವು. ಆದರೆ ತವರಿನಲ್ಲಿ ಗುಜರಾತ್ ಟೈಟಾನ್ಸ್ ಎದುರು 6 ವಿಕೆಟ್‌ ರೋಚಕ ಸೋಲು ಅನುಭವಿಸುವ ಮೂಲಕ ಅಂತಿಮ ನಾಲ್ಕರ ಘಟ್ಟದಲ್ಲಿ ಸ್ಥಾನ ಪಡೆಯಲು ವಿಫಲವಾಯಿತು. ಗುಜರಾತ್ ಟೈಟಾನ್ಸ್ ಎದುರು ವಿರಾಟ್ ಕೊಹ್ಲಿ ಕೆಚ್ಚದೆಯ ಶತಕ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮತ್ತೊಮ್ಮೆ ಕಪ್‌ ಗೆಲ್ಲದೇ ತನ್ನ ಐಪಿಎಲ್ ಅಭಿಯಾನವನ್ನು ಮುಗಿಸಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ, ತಮ್ಮ ಫ್ಯಾನ್ಸ್‌ಗೆ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.

"ಈ ಆವೃತ್ತಿಯಲ್ಲಿ ನಮಗೆ ಒಳ್ಳೆಯ ಆರಂಭ ಸಿಕ್ಕಿತ್ತು. ಆದರೆ ದುರಾದೃಷ್ಟವಶಾತ್, ನಾವು ಗುರಿ ತಲುಪಲು ಸಾಧ್ಯವಾಗಲಿಲ್ಲ. ಬೇಸರವಾಗಿದೆ ಆದರೂ ನಾವು ತಲೆ ಎತ್ತಿ ನಿಲ್ಲುತ್ತೇವೆ. ಪ್ರತಿ ಸಲವೂ ನಮ್ಮ ಬೆಂಬಲಕ್ಕೆ ನಿಲ್ಲುವ ನಮ್ಮ ನಂಬಿಗಸ್ಥ ಬೆಂಬಲಿಗರಿಗೆ ನಾವು ಕೃತಜ್ಙರಾಗಿರುತ್ತೇವೆ. ನಮ್ಮ ಕೋಚ್‌, ಸಹಾಯಕ ಸಿಬ್ಬಂದಿಗಳಿಗೆ, ಸಹ ಆಟಗಾರರಿಗೆ ಹಾಗೂ ಮ್ಯಾನೇಜ್‌ಮೆಂಟ್‌ಗೆ ಧನ್ಯವಾದಗಳು ಎಂದು ವಿರಾಟ್ ಕೊಹ್ಲಿ ತಂಡದ ಗ್ರೂಪ್‌ ಪೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

View post on Instagram

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ಪ್ಲೇ ಆಫ್‌ಗೇರಲು ವಿಫಲವಾದರೂ ಸಹಾ ವಿರಾಟ್ ಕೊಹ್ಲಿ ಪಾಲಿಗೆ ಸಾಕಷ್ಟು ಫಲಪ್ರದವಾದ ಟೂರ್ನಿ ಎನಿಸಿಕೊಂಡಿತು. ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ 14 ಪಂದ್ಯಗಳನ್ನಾಡಿ 53.25ರ ಬ್ಯಾಟಿಂಗ್ ಸರಾಸರಿಯಲ್ಲಿ 6 ಅರ್ಧಶತಕ ಹಾಗೂ ಎರಡು ಮನಮೋಹಕ ಶತಕಗಳ ನೆರವಿನಿಂದ 639 ರನ್ ಬಾರಿಸಿದ್ದರು. ಈ ಮೂಲಕ ಲೀಗ್ ಹಂತ ಮುಕ್ತಾಯದ ವೇಳೆಗೆ ಐಪಿಎಲ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಇನ್ನು ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್‌ ಹಾಗೂ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಬ್ಯಾಟರ್‌ ಶುಭ್‌ಮನ್ ಗಿಲ್‌, ಸದ್ಯ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದಾರೆ.

ನನ್ನ ಟಿ20 ಆಟ ಕುಸಿದಿಲ್ಲ: ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ..!

ಇನ್ನು ಈ ಆವೃತ್ತಿಯ ಐಪಿಎಲ್‌ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಎರಡು ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ, ಚುಟುಕು ಕ್ರಿಕೆಟ್‌ನಲ್ಲಿ 8 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳೆದ ಏಷ್ಯಾಕಪ್ ಟೂರ್ನಿಯ ವೇಳೆ ಆಫ್ಘಾನಿಸ್ತಾನ ಎದುರು ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದರು. ಇನ್ನು ಐಪಿಎಲ್‌ನಲ್ಲಿ ಕೊಹ್ಲಿ 7 ಬಾರಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ದಾಖಲೆ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಹೆಸರಿನಲ್ಲಿದೆ. ವೆಸ್ಟ್‌ ಇಂಡೀಸ್ ದೈತ್ಯ ಕ್ರಿಕೆಟಿಗ ಕ್ರಿಸ್ ಗೇಲ್, ಚುಟುಕು ಕ್ರಿಕೆಟ್‌ನಲ್ಲಿ 22 ಶತಕ ಬಾರಿಸಿದ್ದಾರೆ. ಇನ್ನು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ 9 ಬಾರಿ ಟಿ20 ಕ್ರಿಕೆಟ್‌ನಲ್ಲಿ ಮೂರಂಕಿ ಮೊತ್ತ ದಾಖಲಿಸಿದ್ದಾರೆ. ಇನ್ನುಳಿದಂತೆ ವಿರಾಟ್ ಕೊಹ್ಲಿ ಸೇರಿದಂತೆ ಮೈಕಲ್ ಕ್ಲಿಂಜರ್, ಆರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ತಲಾ 8 ಶತಕ ಸಿಡಿಸಿದ್ದಾರೆ.