* ಮೊಹಾಲಿಯಲ್ಲಿಂದು ಮುಂಬೈ-ಪಂಜಾಬ್ ಬಿಗ್‌ ಫೈಟ್‌* ಉಭಯ ತಂಡದಲ್ಲಿದ್ದಾರೆ ಸ್ಪೋಟಕ ಬ್ಯಾಟರ್‌ಗಳ ದಂಡು* ಪ್ಲೇ ಆಫ್‌ ದೃಷ್ಟಿಯಿಂದ ಗೆಲುವು ಉಭಯ ತಂಡಗಳಿಗೆ ಅನಿವಾರ್ಯ

ಮೊಹಾಲಿ(ಮೇ.03): ಕಳೆದ ಪಂದ್ಯದಲ್ಲಿ 200+ ರನ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಪಂಜಾಬ್‌ ಕಿಂಗ್‌್ಸ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಬುಧವಾರ ಮುಖಾಮುಖಿಯಾಗಲಿವೆ. ಸ್ಫೋಟಕ ಬ್ಯಾಟರ್‌ಗಳ ನಡುವೆ ರೋಚಕ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದ್ದು, ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಪಂಜಾಬ್‌ 9 ಪಂದ್ಯಗಳಲ್ಲಿ 5 ಜಯದೊಂದಿಗೆ 10 ಅಂಕ ಹೊಂದಿದ್ದರೆ, ಮುಂಬೈ 8 ಪಂದ್ಯದಲ್ಲಿ 4 ಜಯದೊಂದಿಗೆ 8 ಅಂಕ ಗಳಿಸಿದೆ. ಪ್ಲೇ-ಆಫ್‌ಗೇರಲು ಪೈಪೋಟಿ ಇನ್ನಷ್ಟು ಹೆಚ್ಚಾಗಲಿರುವ ಕಾರಣ ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದೆನಿಸಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ 2ನೇ ಮುಖಾಮುಖಿ ಇದು. ಮೊದಲ ಭೇಟಿಯಲ್ಲಿ ಪಂಜಾಬ್‌ ನೀಡಿದ್ದ 215 ರನ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತುವ ನಿರೀಕ್ಷೆಯಲ್ಲಿದ್ದ ಮುಂಬೈ ಸ್ವಲ್ಪದರಲ್ಲೇ ಎಡವಿತ್ತು. ಈ ಪಂದ್ಯದಲ್ಲಿ ತನ್ನ ಗುರಿಯನ್ನು ಪೂರ್ತಿಗೊಳಿಸಲು ಮುಂಬೈ ಕಾಯುತ್ತಿದೆ.

ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್‌ ತಂಡವು ಬ್ಯಾಟಿಂಗ್‌ನಲ್ಲಿ ಪ್ರಭ್‌ಸಿಮ್ರನ್ ಸಿಂಗ್, ಅಥರ್ವ ಟೈಡೆ, ಲಿಯಾಮ್‌ ಲಿವಿಂಗ್‌ಸ್ಟೋನ್‌, ಜಿತೇಶ್ ಶರ್ಮಾ ಹಾಗೂ ಶಾರುಕ್ ಖಾನ್ ಅವರನ್ನು ನೆಚ್ಚಿಕೊಂಡಿದೆ. ಇನ್ನು ಆಲ್ರೌಂಡರ್‌ಗಳಾದ ಸ್ಯಾಮ್ ಕರ್ರನ್ ಹಾಗೂ ಸಿಕಂದರ್ ರಾಜಾ ಕೂಡಾ ಜವಾಬ್ದಾರಿಯುತ ಆಟ ಪ್ರದರ್ಶಿಸುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಇನ್ನು ಬೌಲಿಂಗ್‌ನಲ್ಲಿ ಹಪ್ರೀತ್ ಬ್ರಾರ್, ರಾಹುಲ್ ಚಹಾರ್, ಕಗಿಸೋ ರಬಾಡ ಹಾಗೂ ಆರ್ಶದೀಪ್ ಸಿಂಗ್‌ ಮುಂದೆ ಬಲಾಢ್ಯ ಮುಂಬೈ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಾದ ಸವಾಲಿದೆ.

ಇನ್ನೊಂದೆಡೆ ಮುಂಬೈ ಇಂಡಿಯನ್ಸ್‌ ಅಸ್ಥಿರ ಪ್ರದರ್ಶನದ ಹೊರತಾಗಿಯೂ ಇದೀಗ ಗೆಲುವಿನ ಲಯಕ್ಕೆ ಬಂದಂತೆ ಕಾಣುತ್ತಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್‌ ಸ್ಥಿರ ಪ್ರದರ್ಶನ ತೋರದೇ ಇರುವುದು ತಂಡದ ತಲೆನೋವು ಹೆಚ್ಚುವಂತೆ ಮಾಡಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಕ್ಯಾಮರೋನ್ ಗ್ರೀನ್, ತಿಲಕ್ ವರ್ಮಾ ಹಾಗೂ ಟಿಮ್ ಡೇವಿಡ್ ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಅಬ್ಬರಿಸುವ ಕ್ಷಮತೆ ಹೊಂದಿದ್ದಾರೆ. ಆದರೆ ಜೋಫ್ರಾ ಆರ್ಚರ್ ಸೇರಿದಂತೆ ಮುಂಬೈ ಬೌಲರ್‌ಗಳು ದುಬಾರಿಯಾಗುತ್ತಿರುವುದು ತಂಡದ ಪಾಲಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.

IPL 2023 ಗೆಲುವಿನ ಹಳಿಗೆ ಮರಳಲು ಲಖನೌ vs ಚೆನ್ನೈ ಫೈಟ್

ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್‌ ತಂಡಗಳು ಒಟ್ಟು 30 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಉಭಯ ತಂಡಗಳು ಸಮಾನ ಪೈಪೋಟಿ ತೋರಿವೆ. 30 ಪಂದ್ಯಗಳ ಪೈಕಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್‌ ತಂಡಗಳು ತಲಾ 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿವೆ

ಸಂಭವನೀಯ ಆಟಗಾರರ ಪಟ್ಟಿ

ಪಂಜಾಬ್‌ ಕಿಂಗ್ಸ್‌: ಪ್ರಭ್‌ಸಿಮ್ರನ್‌ ಸಿಂಗ್, ಶಿಖರ್ ಧವನ್‌(ನಾಯಕ), ಅಥರ್ವ ಟೈಡೆ, ಲಿಯಾಮ್ ಲಿವಿಂಗ್‌ಸ್ಟೋನ್‌, ಸ್ಯಾಮ್ ಕರ್ರನ್‌, ಜಿತೇಶ್‌ ಶರ್ಮಾ, ಶಾರುಖ್‌ ಖಾನ್, ಸಿಕಂದರ್‌ ರಾಜಾ, ಹಪ್ರೀತ್ ಬ್ರಾರ್, ಕಗಿಸೋ ರಬಾಡ, ರಾಹುಲ್ ಚಹರ್‌, ಆರ್ಶದೀಪ್ ಸಿಂಗ್.

ಮುಂಬೈ ಇಂಡಿಯನ್ಸ್: ರೋಹಿತ್‌ ಶರ್ಮಾ(ನಾಯಕ), ಇಶಾನ್ ಕಿಶನ್‌, ಕ್ಯಾಮರೋನ್ ಗ್ರೀನ್‌, ಸೂರ್ಯಕುಮಾರ್ ಯಾದವ್, ತಿಲಕ್‌ ವರ್ಮಾ, ಟಿಮ್ ಡೇವಿಡ್‌, ನೇಹಲ್‌ ವಡೇರಾ, ಪೀಯುಷ್‌ ಚಾವ್ಲಾ, ಜೋಫ್ರಾ ಆರ್ಚರ್‌, ಹೃತ್ತಿಕ್ ಶೋಕೀನ್‌/ಕುಮಾರ ಕಾರ್ತಿಕೇಯ, ರಿಲೇ ಮೆರೆಡಿತ್‌, ಅರ್ಷದ್‌.

ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍, ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್‌

ಇಲ್ಲಿನ ಪಿಸಿಎ ಕ್ರೀಡಾಂಗಣದಲ್ಲಿ ನಡೆದಿರುವ 4 ಪಂದ್ಯಗಳಲ್ಲಿ 3ರಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಗೆದ್ದಿದ್ದರೂ, ಮಳೆ ಭೀತಿ ಇರುವ ಕಾರಣ ಈ ಪಂದ್ಯದಲ್ಲಿ ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.