ಲಖನೌದಲ್ಲಿಂದು ಚೆನ್ನೈಗೆ ಸೂಪರ್‌ಜೈಂಟ್ಸ್‌ ಸವಾಲುಗಾಯಾಳು ಕೆ ಎಲ್ ರಾಹುಲ್ ಅಲಭ್ಯರಾಗುವ ಸಾಧ್ಯತೆಕಳೆದ ಪಂದ್ಯದಲ್ಲಿ ಸೋಲುಂಡಿವೆ ಉಭಯ ತಂಡಗಳು

ಲಖನೌ(ಮೇ.03): ಆರ್‌ಸಿಬಿ ವಿರುದ್ಧ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈಚೆಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತವರಿನಲ್ಲಿ ಮತ್ತೊಂದು ಸೆಣಸಾಟಕ್ಕೆ ಸಜ್ಜಾಗಿದ್ದು, ಬುಧವಾರ ಚೆನ್ನೈ ಸೂಪರ್‌ ಕಿಂಗ್‌್ಸ ವಿರುದ್ಧ ಕಣಕ್ಕಿಳಿಯಲಿದೆ. ನಾಯಕ ಕೆ.ಎಲ್‌.ರಾಹುಲ್‌ ಹಾಗೂ ವೇಗಿ ಜಯ್‌ದೇವ್‌ ಉನಾದ್ಕತ್‌ ಗಾಯದಿಂದ ಸಂಪೂರ್ಣ ಚೇತರಿಕೆ ಕಂಡಿಲ್ಲ ಎನ್ನುವುದು ತಿಳಿದುಬಂದಿದ್ದು, ಈ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ.

ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಈ ಆವೃತ್ತಿಯಲ್ಲಿ 5 ಪಂದ್ಯಗಳು ನಡೆದಿದ್ದು, 3ರಲ್ಲಿ 140ಕ್ಕಿಂತ ಕಡಿಮೆ ಮೊತ್ತ ದಾಖಲಾಗಿದೆ. ಈ ಪಂದ್ಯವೂ ಲೋ ಸ್ಕೋರಿಂಗ್‌ ಥ್ರಿಲ್ಲರ್‌ ಆದರೆ ಅಚ್ಚರಿಯಿಲ್ಲ. ಪಿಚ್‌ ಸ್ಪಿನ್‌ ಸ್ನೇಹಿಯಾಗಿರುವ ಕಾರಣ ಚೆನ್ನೈ ನಾಯಕ ಧೋನಿ ತಮ್ಮ ಸ್ಪಿನ್‌ ಅಸ್ತ್ರಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಅಂಕಪಟ್ಟಿಯಲ್ಲಿ ಅಗ್ರ-4ರಲ್ಲಿ ಉಳಿಯಲು ಈ ಪಂದ್ಯದಲ್ಲಿ ಗೆಲುವು ಎರಡೂ ತಂಡಗಳಿಗೆ ಅವಶ್ಯಕವೆನಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಮುಗ್ಗರಿಸಿದ್ದರೂ, ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದೆ. ಋತುರಾಜ್ ಗಾಯಕ್ವಾಡ್‌, ಡೆವೊನ್ ಕಾನ್‌ವೇ, ಮೋಯಿನ್ ಅಲಿ, ಅಜಿಂಕ್ಯ ರಹಾನೆ, ಶಿವಂ ದುಬೆ ಹಾಗೂ ಅಂಬಟಿ ರಾಯುಡು ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಜಡೇಜಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದರೆ, ನಾಯಕ ಧೋನಿ, ಕೊನೆಯಲ್ಲಿ ಮ್ಯಾಚ್ ಫಿನಿಶರ್ ಪಾತ್ರವನ್ನು ಮುಂದುವರೆಸಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಯುವ ವೇಗಿ ಪತಿರಣ, ತುಷಾರ್ ದೇಶಪಾಂಡೆ, ತೀಕ್ಷಣ ಅವರ ಮೇಲೆ ಧೋನಿ ಪಡೆ ಹೆಚ್ಚು ಭರವಸೆಯನ್ನಿಟ್ಟಿದೆ.

IPL 2023: ಹಾಲಿ ಚಾಂಪಿಯನ್ಸ್ ವಿರುದ್ಧ ಗೆಲುವು ಕಂಡ ಡೆಲ್ಲಿ ಕ್ಯಾಪಿಟಲ್ಸ್‌!

ಇನ್ನೊಂದೆಡೆ ಲಖನೌ ತಂಡದಿಂದ ಇಂದಿನ ಪಂದ್ಯಕ್ಕೆ ನಾಯಕ ಕೆ ಎಲ್ ರಾಹುಲ್ ಅಲಭ್ಯರಾಗುವ ಸಾಧ್ಯತೆಯಿದೆ. ಕೈಲ್ ಮೇಯರ್ಸ್‌ ಜತೆಗೆ ಪ್ರೇರಕ್ ಮಂಕಡ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದ್ದು, ಮಧ್ಯಮ ಕ್ರಮಾಂಕದಲ್ಲಿ ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ ಹಾಗೂ ಮಾರ್ಕಸ್ ಸ್ಟೋನಿಸ್‌ ಬ್ಯಾಟಿಂಗ್‌ನಲ್ಲಿ ಆಸರೆಯಾಗಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಕೃಷ್ಣಪ್ಪ ಗೌತಮ್, ಆವೇಶ್ ಖಾನ್‌, ರವಿ ಬಿಷ್ಣೋಯಿ, ನವೀನ್ ಉಲ್‌ ಹಕ್, ಬಲಿಷ್ಠ ಚೆನ್ನೈ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡವು ಒಟ್ಟು ಎರಡು ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಯಾವ ತಂಡ ಗೆಲುವಿನ ನಗೆ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. 

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ ಸೂಪರ್ ಕಿಂಗ್ಸ್: ಋುತುರಾಜ್‌ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ , ಮೋಯಿನ್‌ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂ ಎಸ್ ಧೋನಿ(ನಾಯಕ), ಮತೀಶ್ ಪತಿರನ, ತುಷಾರ್‌ ದೇಶಪಾಂಡೆ, ಮಹೀಶ್ ತೀಕ್ಷಣ/ ಮಿಚೆಲ್ ಸ್ಯಾಂಟ್ನರ್‌, ಆಕಾಶ್‌.

ಲಖನೌ ಸೂಪರ್ ಜೈಂಟ್ಸ್‌: ಕೈಲ್ ಮೇಯ​ರ್ಸ್‌, ಮನನ್‌ ವೊಹ್ರಾ/ಪ್ರೇರಕ್‌ ಮಂಕಡ್, ಆಯುಷ್ ಬದೋನಿ, ದೀಪಕ್ ಹೂಡಾ, ಕೃನಾಲ್‌ ಪಾಂಡ್ಯ(ನಾಯಕ), ಮಾರ್ಕಸ್ ಸ್ಟೋಯ್ನಿಸ್‌, ನಿಕೋಲಸ್ ಪೂರನ್‌, ಕೃಷ್ಣಪ್ಪ ಗೌತಮ್‌, ಆವೇಶ್‌ ಖಾನ್/ಯಶ್‌ ದಯಾಳ್, ರವಿ ಬಿಷ್ಣೋಯ್‌, ಅಮಿತ್ ಮಿಶ್ರಾ, ನವೀನ್‌ ಉಲ್ ಹಕ್/ಮಾರ್ಕ್‌ ವುಡ್‌.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್‌

ಈ ಪಂದ್ಯಕ್ಕೆ ಕೆಂಪು ಮಣ್ಣಿನ ಪಿಚ್‌ ಬಳಸಲು ನಿರ್ಧರಿಸಿದ್ದು, ಹೆಚ್ಚಿನ ಬೌನ್ಸ್‌ ನಿರೀಕ್ಷಿಸಬಹುದು. ಹೀಗಾಗಿ ಸ್ಪಿನ್ನರ್‌ಗಳು ಇನ್ನಷ್ಟು ಪರಿಣಾಮಕಾರಿಯಾಗಲಿದ್ದಾರೆ. ಇಲ್ಲಿ ಮೊದಲ ಇನ್ನಿಂಗ್‌್ಸನ ಸರಾಸರಿ ಮೊತ್ತ 147 ರನ್‌.