ಕೋಲ್ಕತ ನೈಟ್‌ ರೈಡರ್ಸ್‌ ವಿರುದ್ಧ 1 ರನ್‌ ಗೆಲುವಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್‌ ತಂಡ ಐಪಿಎಲ್‌ನ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ. ಇನ್ನೊಂದೆಡೆ  ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪ್ಲೇ ಆಫ್‌ ಸ್ಥಾನ ಕೂಡ ಖಚಿತವಾಗಿದೆ. ಇನ್ನೊಂದು ಸ್ಥಾನಕ್ಕಾಗಿ ಆರ್‌ಸಿಬಿ, ಮುಂಬೈ ಹಾಗೂ ರಾಜಸ್ಥಾನ ನಡುವೆ ಫೈಟ್‌ ಇದೆ. 

ಕೋಲ್ಕತ್ತಾ (ಮೇ.20): ಬ್ಯಾಟಿಂಗ್‌ನಲ್ಲಿ ನಿಕೋಲಸ್‌ ಪೂರನ್‌ ಹಾಗೂ ಬೌಲಿಂಗ್‌ನಲ್ಲಿ ರವಿ ಬಿಷ್ಣೋಯಿ ಮಾರಕ ದಾಳಿಯ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ 1 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಿಯಾಗಿ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ. ಇನ್ನು ಪ್ಲೇ ಆಫ್‌ನ ಅಂತಿಮ ಸ್ಥಾನಕ್ಕಾಗಿ ರಾಜಸ್ಥಾನ ರಾಯಲ್ಸ್‌, ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್‌ ನಡುವೆ ಪೈಪೋಟಿ ಇದೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ತಂಡ ಗುಜರಾತ್‌ ಟೈಟಾನ್ಸ್‌ ವಿರುದ್ಧ ಗೆಲುವು ಸಾಧಿಸಿದಲ್ಲಿ ನಾಲ್ಕನೇ ಸ್ಥಾನಿಯಾಗಿ ಪ್ಲೇ ಆಫ್‌ ಹಂತಕ್ಕೇರಲಿದೆ. ಹಾಗೇನಾದರೂ ಆರ್‌ಸಿಬಿ ಸೋತು ಸನ್‌ರೈಸರ್ಸ್‌ ವಿರುದ್ಧ ಮುಂಬೈ ಗೆದ್ದಲ್ಲಿ ಅವರು ಪ್ಲೇ ಆಫ್‌ಗೆ ನಾಲ್ಕನೇ ಸ್ಥಾನಿಯಾಗಿ ಅರ್ಹತೆ ಪಡೆಯಲಿದ್ದಾರೆ. ಹಾಗೇನಾದರೂ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಆಯಾ ಪಂದ್ಯಗಳಲ್ಲಿ ಹೀನಾಯವಾಗಿ ಸೋತಲ್ಲಿ ಮಾತ್ರವೇ ರಾಜಸ್ಥಾನ ರಾಯಲ್ಸ್‌ ತಂಡ ಪ್ಲೇ ಆಫ್‌ಗೆ ಗೇರಲಿದೆ.

ಈಡನ್‌ ಗಾರ್ಡನ್ಸ್ ಮೈದಾನದಲ್ಲಿ ಶನಿವಾರ ನಡೆದ 2ನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ 8 ವಿಕೆಟ್‌ಗೆ 176 ರನ್‌ಗಳ ಸಾಧಾರಣ ಮೊತ್ತ ಪೇರಿಸಿತ್ತು. ಪ್ರತಿಯಾಗಿ ಕೆಕೆಆರ್‌ ತಂಡ ಗೆಲುವಿಗಾಗಿ ದೊಡ್ಡ ಮಟ್ಟದ ಶ್ರಮ ವಹಿಸಿತಾದರೂ 7 ವಿಕೆಟ್‌ಗೆ 175 ರನ್‌ ಬಾರಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಕೆಕೆಆರ್‌ ಪರ ಮತ್ತೊಮ್ಮೆ ವಿಧ್ವಂಸಕವಾಗಿ ಬ್ಯಾಟಿಂಗ್‌ ಮಾಡಿದ ರಿಂಕು ಸಿಂಗ್‌ ತಮ್ಮ 33 ಎಸೆಗಳ ಅಪೂರ್ವ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 4 ಅಮೋಘ ಸಿಕ್ಸರ್‌ಗಳೊಂದಿಗೆ ಅಜೇಯ 67 ರನ್‌ ಬಾರಿಸಿದರು. ಆದರೂ ತಂಡಕ್ಕೆ ಗೆಲುವು ದಕ್ಕಿಸಿಕೊಡಲು ರಿಂಕು ಸಿಂಗ್‌ಗೆ ಸಾಧ್ಯವಾಗಲಿಲ್ಲ.

ಕೊನೆಯ ಓವರ್‌ನಲ್ಲಿ ಕೆಕೆಆರ್‌ ಗೆಲುವಿಗೆ 21 ರನ್‌ ಬೇಕಿದ್ದವು. ಯಶ್‌ ಠಾಕೂರ್‌ ಎಸೆದ ಮೊದಲ ಎಸೆತದಲ್ಲಿ ವೈಭವ್‌ ಅರೋರಾ 1 ರನ್‌ ಬಾರಿಸಿ ರಿಂಕುಗೆ ಸ್ಟ್ರೈಕ್‌ ನೀಡಿದ್ದರು. 2ನೇ ಎಸೆತ ವೈಡ್‌ ಅದರೆ, ನಂತರದ ಎಸೆತ ಡಾಟ್‌ ಬಾಲ್‌ ಆಯಿತು.ಮೂರನೇ ಎಸೆತದಲ್ಲಿ ಸ್ವತಃ ರಿಂಕು ಸಿಂಗ್‌ ರನ್‌ ಕದಿಯಲು ನಿರಾಕರಿಸಿದರು. ನಾಲ್ಕನೇ ಎಸೆತ ಮತ್ತೊಮ್ಮೆ ವೈಡ್‌ ಆಯಿತು.ಆ ನಂತರದ ಎಸೆತವನ್ನು ರಿಂಕು ಸಿಕ್ಸರ್‌ಗೆ ಅಟ್ಟಿದಾಗ ಕೆಕೆಆರ್‌ ತಂಡಕ್ಕೆ 2 ಎಸೆತಗಳಲ್ಲಿ 12 ರನ್‌ ಬೇಕಿದ್ದವು. ಐದನೇ ಎಸೆತದಲ್ಲಿ, ರಿಂಕು ಬೌಂಡರಿ ಬಾರಿಸಿದಾಗ ಲಕ್ನೋ ನಿರಾಳಗೊಂಡಿತು. ಅಂತಿಮ ಎಸೆತವನ್ನು ರಿಂಕಿ ಸಿಕ್ಸರ್‌ಗೆ ಅಟ್ಟಿದರೂ ಅದು ಸೋಲಿನ ಅಂತರವನ್ನಷ್ಟೇ ತಗ್ಗಿಸಿತು.

ಉಳಿದಂತೆ ಕೆಕೆಆರ್‌ ಪರವಾಗಿ ಜೇಸನ್‌ ರಾಯ್‌ (45ರನ್, 28 ಎಸೆತ, 7 ಬೌಂಡರಿ, 1 ಸಿಕ್ಸರ್‌), ವೆಂಕಟೇಶ್‌ ಅಯ್ಯರ್‌ (24ರನ್,‌ 15 ಎಸೆತ, 3 ಬೌಂಡರಿ, 1 ಸಿಕ್ಸರ್‌) ಮೊದಲ ವಿಕೆಟ್‌ಗೆ ಉತ್ತಮ ಜೊತೆಯಾಟವಾಡಿದರೆ, ನಾಯಕ ನಿತೀಶ್‌ ರಾಣಾ, ವಿಕೆಟ್‌ ಕೀಪರ್ ರೆಹಮಾನುಲ್ಲಾ ಗುರ್ಬಾಜ್‌, ಸ್ಪೋಟಕ ಆಟಗಾರ ಅಂಡ್ರೆ ರಸೆಲ್‌ ವೈಫಲ್ಯ ಕಂಡಿದ್ದು ತಂಡದ ಮೇಲೆ ಪರಿಣಾಮ ಬೀರಿತು.

IPL 2023 ಡೆಲ್ಲಿ ಮಣಿಸಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿದ ಚೆನ್ನೈ ಸೂಪರ್ ಕಿಂಗ್ಸ್!

ಇನ್ನೊಂದೆಡೆ ಲಕ್ನೋ ತಂಡದ ಪರವಾಗಿ ನಿಕೋಲಸ್‌ ಪೂರನ್‌ 30 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳಿದ್ದ ಅಬ್ಬರದ 58 ರನ್‌ ಸಿಡಿಸುವ ಮೂಲಕ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾಗಿದ್ದರು. ಇವರಿಗೆ ಉತ್ತಮವಾಗಿ ಸಾಥ್‌ ನೀಡಿದ ಆಯುಷ್‌ ಬಡೋನಿ 21 ಎಸೆತಗಳಲ್ಲಿ 25 ರನ್‌ ಸಿಡಿಸಿದರು.

ಡೆಲ್ಲಿ ಎದುರು 11 ವರ್ಷಗಳ ಹಳೆಯ IPL ದಾಖಲೆ ಮುರಿದ CSK