ಸುಯಾಶ್‌ ಶರ್ಮ ಹಾಗೂ ವರುಣ್‌ ಚಕ್ರವರ್ತಿ ನೇತೃತ್ವದಲ್ಲಿ ಭರ್ಜರಿ ಸ್ಪಿನ್‌ ದಾಳಿ ನಡೆಸಿದ ಕೆಕೆಆರ್‌ ತಂಡ ಕೊನೆಗೂ ಗೆಲುವಿನ ನಿಟ್ಟುಸಿರು ಬಿಟ್ಟಿದೆ. ಸತತ ನಾಲ್ಕು ಪಂದ್ಯಗಳಿಂದ ಸೋಲು ಕಂಡಿದ್ದ ಕೆಕೆಆರ್‌ 000 ರನ್ ಗಳಿಂದ ಆರ್‌ಸಿಬಿ ತಂಡವನ್ನು ಸೋಲಿಸಿದೆ.

ಬೆಂಗಳೂರು (ಏ.26): ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದ ಕೋಲ್ಕತ್ತ ನೈಟ್‌ರೈಡರ್ಸ್ ತಂಡ ಕೊನೆಗೂ ಗೆಲುವಿನ ಸಮಾಧಾನ ಕಂಡಿದೆ. ಕೆಕೆಆರ್‌ ತಂಡದ ಸಂಘಟಿತ ಬ್ಯಾಟಿಂಗ್‌ ಹಾಗೂ ಆಕರ್ಷಕ ಸ್ಪಿನ್‌ ದಾಳಿಯ ಮುಂದೆ ಮಂಡಿಯೂರಿದ ಆರ್‌ಸಿಬಿ 21 ರನ್‌ಗಳ ಸೋಲು ಕಂಡಿತು. ಅದರೊಂದಿಗೆ ಹಾಲಿ ಐಪಿಎಲ್‌ನಲ್ಲಿ ಆರ್‌ಸಿಬಿ 4 ಪಂದ್ಯಗಳಲ್ಲಿ ಸೋಲು ಕಂಡಂತಾಗಿದೆ. ಇದರಲ್ಲಿ ಎರಡು ಸೋಲುಗಳು ಕೆಕೆಆರ್‌ ವಿರುದ್ಧವೇ ಬಂದಂತಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ತಂಡ ಆರಂಭಿಕ ಆಟಗಾರ ಜೇಸನ್‌ ರಾಯ್‌ ಹಾಗೂ ನಾಯಕ ನಿತೀಶ್‌ ರಾಣಾ ಸ್ಪೋಟಕ ಬ್ಯಾಟಿಂಗ್‌ನಿಂದ 5 ವಿಕೆಟ್‌ಗೆ 200 ರನ್‌ ಪೇರಿಸಿತ್ತು. ಗೆಲುವಿಗೆ 201 ರನ್‌ ಚೇಸಿಂಗ್‌ ಮಾಡಲು ಆರಂಭಿಸಿದ ಆರ್‌ಸಿಬಿ ಆರಂಭದಿಂದಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ವಿರಾಟ್‌ ಕೊಹ್ಲಿ ಅರ್ಧಶತಕ ಬಾರಿಸಿದರೂ ಅದು ತಂಡದ ಗೆಲುವಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ನಿಗದಿತ ಓವರ್‌ಗಳ ಅಂತ್ಯಕ್ಕೆ ಆರ್‌ಸಿಬಿ 8 ವಿಕೆಟ್‌ಗೆ 179 ರನ್‌ ಬಾರಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಸತತ ಸೋಲುಗಳಿಂದ ಕಂಗೆಟ್ಟಿದ್ದ ತಂಡಕ್ಕೆ ಆರ್‌ಸಿಬಿ ಗೆಲುವು ದಯಪಾಲಿಸಿದಂತಾಗಿದೆ.

ಟಾಸ್ ಗೆದ್ದ ಬೆನ್ನಲ್ಲಿಯೇ ವಿರಾಟ್‌ ಕೊಹ್ಲಿ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದು ನಿತೀಶ್‌ ರಾಣಾ ಸಂಭ್ರಮಕ್ಕೆ ಕಾರಣವಾಗಿತ್ತು. 2ನೇ ಇನ್ನಿಂಗ್ಸ್ ವೇಳೆಗೆ ಪಿಚ್‌ ನಿಧಾನಗತಿಯದ್ದಾಗಬಹುದು ಎಂದು ಅಂದಾಜಿಸಿದ್ದು ನಿಜವಾಯಿತು. ಕೆಕೆಆರ್‌ ಬ್ಯಾಟಿಂಗ್‌ ವೇಳೆಯಲ್ಲೂ ರನ್‌ಗಾಗಿ ತಡಕಾಡಿತಾದರೂ, ರಾಯ್‌ ಹಾಗೂ ರಾಣಾ ಸ್ಫೋಟಕ ಇನ್ನಿಂಗ್ಸ್‌ನಿಂದ ದೊಡ್ಡ ಮೊತ್ತ ಪೇರಿಸಿತ್ತು.

ಇನ್ನೊಂದೆಡೆ ಆರ್‌ಸಿಬಿ ಆರಂಭ ಸ್ಪೋಟಕವಾಗಿತ್ತಾದರೂ, ನಿಗದಿತ ಸಮಯದಲ್ಲಿ ವರುಣ್‌ ಚಕ್ರವರ್ತಿ ಹಾಗೂ ಸುಯಾಶ್‌ ಶರ್ಮ ವಿಕೆಟ್‌ ಉರುಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಆರ್‌ಸಿಬಿ ಬ್ಯಾಟಿಂಗ್ ವೇಳೆ ಮಹಿಪಾಲ್‌ ಲೋಮ್ರರ್‌ ಆಡುವವರೆಗೂ ತಂಡ ಜಯದ ನಿರೀಕ್ಷೆ ಇಟ್ಟಿತ್ತಾದರೂ ಆ ಬಳಿಕ ಕೆಕೆಆರ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ಸಾನಿ​ಯಾಗೆ ವಿಚ್ಛೇ​ದನ ವದಂತಿ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ ಶೋಯೆಬ್‌ ಮಲಿ​ಕ್‌!

ವಿರಾಟ್‌ ಕೊಹ್ಲಿ 37 ಎಸೆತಗಳಲ್ಲಿ 6 ಬೌಂಡರಿಗಳಿದ್ದ 54 ರನ್‌ ಪೇರಿಸಿದರೆ, ಫಾಫ್‌ ಡು ಪ್ಲೆಸಿಸ್‌ (17), ಶಹಬಾಜ್‌ ಅಹ್ಮದ್‌ (2), ಗ್ಲೆನ್‌ ಮ್ಯಾಕ್ಸ್‌ವೆಲ್‌ (5) ಲೆಕ್ಕದ ಭರ್ತಿಯ ಆಟವಾಡಿದರು. ಮಹಿಪಾಲ್‌ ಲೋಮ್ರರ್‌ 18 ಎಸೆತಗಳಲ್ಲಿ 3 ಸಿಕ್ಸರ್‌ 1 ಬೌಂಡರಿಗಳಿದ್ದ 34 ರನ್‌ ಬಾರಿಸಿ ಮಿಂಚಿದರು. ಇನ್ನು ಫಿನಿಶರ್‌ ರೋಲ್‌ ನಿಭಾಯಿಸಬೇಕಿದ್ದ ದಿನೇಶ್‌ ಕಾರ್ತಿಕ್‌ (22 ರನ್‌, 18 ಎಸೆತ, 1 ಬೌಂಡರಿ, 1 ಸಿಕ್ಸರ್‌) ಎದುರಾಳಿಯ ಮ್ಯಾಚ್‌ ಫಿನಿಶ್‌ ಮಾಡುವುದರ ಬದಲಾಗಿ ಹಾಲಿ ವರ್ಷದಲ್ಲಿ ಆರ್‌ಸಿಬಿಯ ಮ್ಯಾಚ್‌ ಫಿನಿಶ್‌ (ಸೋಲು) ಮಾಡುವುದರಲ್ಲೇ ಹೆಚ್ಚು ಸಮಯ ಕಳೆದಿದ್ದಾರೆ.

RCB ಎದುರಿನ ಪಂದ್ಯಕ್ಕೂ ಮುನ್ನ ವಾರ್ನಿಂಗ್‌ ಕೊಟ್ಟ KKR ಕೋಚ್ ಚಂದ್ರಕಾಂತ್ ಪಂಡಿತ್..!

ಪಂದ್ಯದ ಬಳಿಕ ಮಾತನಾಡಿದ ವಿರಾಟ್‌ ಕೊಹ್ಲಿ ಮಾತುಗಳಲ್ಲಿ ತಂಡದ ಸೋಲಿನ ಬಗ್ಗೆ ನಿರಾಸೆ ಕಾಡಿತ್ತು. 'ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವು ಅವರಿಗೆ ಸುಮ್ಮನೆ ಪಂದ್ಯವನ್ನು ಬಿಟ್ಟುಕೊಟ್ಟಂತೆ ಅನಿಸಿತು. ಸೋಲಿಗೆ ನಾವು ಅರ್ಹರಾಗಿದ್ದೆವು. ನಾವು ವೃತ್ತಿಪರವವಾಗಿ ಆಡಲಿಲ್ಲ. ಉತ್ತಮವಾಗಿ ಬೌಲಿಂಗ್‌ ಮಾಡಿದೆವು. ಆದರೆ, ಫೀಲ್ಡಿಂಗ್‌ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಉಚಿತವಾಗಿ ಅವರಿಗೆ ಗೆಲುವು ಕೊಟ್ಟ ಪಂದ್ಯವಿದು. ಫೀಲ್ಡಿಂಗ್‌ನಲ್ಲಿ ಎರಡು ಕ್ಯಾಚ್‌ ಕೈಚೆಲ್ಲಿದ್ದರಿಂದ 25-30 ರನ್‌ ಹೆಚ್ಚು ನೀಡಿದೆವು. ಬ್ಯಾಟಿಂಗ್‌ನಲ್ಲೂ ನಾವು ಉತ್ತಮ ಆರಂಭ ಪಡೆದಿದ್ದವು. ಆದರೆ, 4-5 ಕೆಟ್ಟ ಶಾಟ್‌ಗಳಿಂದಾಗಿ ವಿಕೆಟ್‌ ಕಳೆದುಕೊಂಡೆವು. ಅದಾವುದು ವಿಕೆಟ್‌ ತೆಎಗೆಯುವ ಎಸೆತವಾಗಿರಲಿಲ್ಲ. ಆದರೆ, ನಾವೇ ಚೆಂಡನ್ನು ಸೀದಾ ಫೀಲ್ಡರ್‌ ಕೈಗೆ ನೀಡಿದೆವು.ಚೇಸಿಂಗ್‌ ಸಮಯದಲ್ಲಿ ವಿಕೆಟ್‌ ಹೋದರೂ, ಒಂದು ಉತ್ತಮ ಜೊತೆಯಾಟ ಬಂದಿದ್ದರೆ ಗೆಲುವು ಸಾಧ್ಯವಿತ್ತು. ಅದರ ಕೊರತೆ ಎದ್ದುಕಾಡಿತು ಎಂದು ವಿರಾಟ್‌ ಕೊಹ್ಲಿ ಹೇಳುವಾಗ ಪಂದ್ಯ ಸೋಲು ಅವರನ್ನು ಬಹುವಾಗಿ ಕಾಡಿತ್ತು.