* ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ ದಾಂಪತ್ಯ ಜೀವನದ ಬಗ್ಗೆ ಮಲಿಕ್ ಮಾತು * ಗಾಳಿ ಸುದ್ದಿಗೆ ತೆರೆ ಎಳೆದ ಪಾಕ್ ಮಾಜಿ ನಾಯಕ ಶೋಯೆಬ್ ಮಲಿಕ್ * ವಿಚ್ಛೇದನ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ ಸಾನಿಯಾ ಪತಿ
ಕರಾಚಿ(ಏ.26): ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿಯಿಲ್ಲ. ವೈಯುಕ್ತಿಕ ಬಿನ್ನಾಭಿಪ್ರಾಯಗಳಿಂದಾಗಿ ಈ ಇಬ್ಬರು ತಾರಾ ಜೋಡಿ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದರು ಎನ್ನುವಂತಹ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಆದರೆ ಈ ಕುರಿತಂತೆ ಸಾನಿಯಾ ಮಿರ್ಜಾ ಅವರಾಗಲಿ ಅಥವಾ ಶೋಯೆಬ್ ಮಲಿಕ್ ಆಗಿಲಿ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಹಲವು ಸಮಯದಿಂದ ಕೇಳಿಬರುತ್ತಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ಜೊತೆಗಿನ ವಿಚ್ಛೇದನ ವದಂತಿ ಬಗ್ಗೆ ಪಾಕಿಸ್ತಾನ ಮಾಜಿ ನಾಯಕ ಶೋಹೆಬ್ ಮಲಿಕ್ ಕೊನೆಗೂ ಮೌನ ಮುರಿದಿದ್ದು, ವಿಚ್ಛೇದನ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಲಿಕ್, ಸಾನಿಯಾ ಹಾಗೂ ಮಗನ ಜೊತೆ ಈದ್ ಆಚರಿಸಬೇಕಿತ್ತು. ಆದರೆ ಅವರು ದೂರದಲ್ಲಿದ್ದಾರೆ. ಒತ್ತಡದ ವೇಳಾಪಟ್ಟಿಯಿಂದಾಗಿ ಒಟ್ಟಿಗೆ ಇರಲು ಸಮಯ ಸಿಗುತ್ತಿಲ್ಲ. ಆದರೆ ನಾವಿಬ್ಬರು ದೂರವಾಗುವ ಬಗ್ಗೆ ವರದಿಗಳು ಆಧಾರರಹಿತ’ ಎಂದಿದ್ದಾರೆ. ಸಾನಿಯಾ-ಮಲಿಕ್ 2010ರಲ್ಲಿ ವಿವಾಹವಾಗಿದ್ದರು. ಆದರೆ ಕಳೆದ 6 ತಿಂಗಳಿಂದ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಹೀಗಾಗಿ ವಿಚ್ಛೇದನ ವದಂತಿ ಹಬ್ಬಿತ್ತು.
ವಿಚ್ಛೇದನದ ಸುದ್ದಿಯ ನಡುವೆ, 'ಹೃದಯ ಭಾರವಾದಂತೆ ಅನಿಸಿದೆ...' ಎಂದು ಸಾನಿಯಾ ಪೋಸ್ಟ್!
ಕೆಲ ತಿಂಗಳ ಹಿಂದಷ್ಟೇ ಸಾನಿಯಾ ಮಿರ್ಜಾ ತಮ್ಮ ಮಗನ ಹುಟ್ಟುಹಬ್ಬವನ್ನು ದುಬೈನಲ್ಲಿ ಆಚರಿಸಿದ್ದರು. ಆದರೆ ಇದಕ್ಕೂ ಕೆಲವೇ ದಿನಗಳ ಹಿಂದಷ್ಟೇ ಸಾನಿಯಾ ತಮ್ಮ ಮಗನ ಜೊತೆಗಿರುವ ಫೋಟೋ ಹಂಚಿಕೊಂಡು, ‘ಕಷ್ಟದ ದಿನಗಳಲ್ಲಿ ನನಗೆ ಸಿಕ್ಕ ಸಂತಸದ ಕ್ಷಣಗಳು’ ಎಂದು ಬರೆದಿದ್ದು, ವದಂತಿಗೆ ಕಾರಣವಾಗಿತ್ತು. ಬಳಿಕ ‘ಒಡೆಯ ಹೃದಯಗಳು ಎಲ್ಲಿಗೆ ಹೋಗುತ್ತವೆ. ದೇವರ ಬಳಿಗೆ’ ಎಂದು ಸ್ಟೋರಿಯೊಂದನ್ನು ಹಾಕಿದ್ದು ಮತ್ತಷ್ಟು ಊಹಾಪೋಹಗಳನ್ನು ಸೃಷ್ಟಿಸಿತ್ತು.
ವಿಚ್ಛೇದನ ಆಗಿದೆ, ಅಧಿಕೃತ ಘೋಷಣೆ ಬಾಕಿ?
ಇನ್ನು ಇದೆಲ್ಲದರ ನಡುವೆ ಭಾರತದ ಟೆನಿಸ್ ತಾರೆ, 6 ಗ್ರ್ಯಾನ್ ಸ್ಲಾಂ ಪ್ರಶಸ್ತಿ ವಿಜೇತೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ತಾರಾ ಕ್ರಿಕೆಟಿಗ ಶೋಯೆಬ್ ಮಲಿಕ್ ದಾಂಪತ್ಯ ಅಂತ್ಯಗೊಂಡಿದೆ. ಇಬ್ಬರ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಗದ ಪತ್ರಗಳ ಕಾರ‍್ಯ ಬಾಕಿ ಇದೆ ಎಂದು ದಂಪತಿಯ ಆಪ್ತ ಸ್ನೇಹಿತರೊಬ್ಬರು ಮಾಹಿತಿ ನೀಡಿರುವುದಾಗಿ ಮಾಧ್ಯಮಗಳು ವರದಿಯಾಗಿತ್ತು. ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದಾರೆ. ಸಾನಿಯಾ ದುಬೈನಲ್ಲಿ ತಮ್ಮ ಮಗುವಿನೊಂದಿಗೆ ನೆಲೆಸಿದ್ದು, ಶೋಯೆಬ್ ಪಾಕಿಸ್ತಾನದಲ್ಲಿದ್ದಾರೆ ಎನ್ನಲಾಗಿದೆ. ಶೋಯೆಬ್ ಪಾಕಿಸ್ತಾನದ ನಟಿಯೊಬ್ಬರ ಜೊತೆ ಸಂಬಂಧ ಹೊಂದಿರುವುದು ವಿಚ್ಛೇದನಕ್ಕೆ ಮುಖ್ಯ ಕಾರಣ ಎಂದೆಲ್ಲಾ ಸುದ್ದಿಯಾಗಿತ್ತು. ಆದರೆ ಈ ಎಲ್ಲಾ ಗಾಳಿ ಸುದ್ದಿಗೆ ಮಲಿಕ್ ಇದೀಗ ತೆರೆ ಎಳೆದಿದ್ದಾರೆ.
