* ಚಿನ್ನಸ್ವಾಮಿ ಮೈದಾನದಲ್ಲಿಂದು ಆರ್‌ಸಿಬಿ-ಕೆಕೆಆರ್ ಫೈಟ್* ಸತತ ಸೋಲಿನಿಂದ ಕಂಗೆಟ್ಟಿರುವ ನಿತೀಶ್ ರಾಣಾ ಪಡೆ* ಕೆಕೆಆರ್‌ ಭರ್ಜರಿಯಾಗಿಯೇ ಕಮ್‌ಬ್ಯಾಕ್‌ ಮಾಡಲಿದೆ ಎಂದ ಕೋಚ್

ಬೆಂಗಳೂರು(ಏ.26): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎರಡು ಬಾರಿಯ ಐಪಿಎಲ್ ಚಾಂಪಿಯನ್‌ ಕೋಲ್ಕತಾ ನೈಟ್ ರೈಡರ್ಸ್‌ ತಂಡವು ನೀರಸ ಪ್ರದರ್ಶನ ತೋರಿದೆ. ಮೊದಲಾರ್ಧದಲ್ಲಿ ನಿತೀಶ್ ರಾಣಾ ನೇತೃತ್ವದ ಕೆಕೆಆರ್ ತಂಡವು ಆಡಿದ 7 ಪಂದ್ಯಗಳಲ್ಲಿ 2 ಗೆಲುವು ಹಾಗೂ 5 ಸೋಲುಗಳೊಂದಿಗೆ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಇದೀಗ ಇಂದು ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬಲಿಷ್ಠ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಎದುರಿಸಿದೆ. ಈ ಪಂದ್ಯಕ್ಕೂ ಮುನ್ನ ಕೆಕೆಆರ್ ತಂಡದ ಹೆಡ್‌ಕೋಚ್ ಚಂದ್ರಕಾತ್ ಪಂಡಿತ್ ಉಳಿದ ತಂಡಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ತಂಡವು ತಾನಾಡಿದ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ಎದುರು ಡೆಕ್ವರ್ಥ್ ಲೂಯಿಸ್ ನಿಯಮದನ್ವಯ 7 ರನ್ ರೋಚಕ ಸೋಲು ಅನುಭವಿಸಿತ್ತು. ಇದಾದ ಬಳಿಕ ಆರ್‌ಸಿಬಿ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಎದುರು ಗೆಲುವಿನ ನಗು ಬೀರಿತ್ತು. ಆದರೆ ಇದಾದ ಬಳಿಕ ಸತತ 4 ಪಂದ್ಯಗಳನ್ನು ಸೋಲುವ ಮೂಲಕ ಕಂಗಾಲಾಗಿ ಹೋಗಿದೆ. ಇದೀಗ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೆಕೆಆರ್ ಹೆಡ್ ಕೋಚ್ ಚಂದ್ರಕಾಂತ್ ಪಂಡಿತ್, ಕೋಲ್ಕತಾ ನೈಟ್‌ ರೈಡರ್ಸ್‌ ತಂಡವು ದ್ವಿತಿಯಾರ್ಧದಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್‌ ತಂಡವು ಪ್ಲೇ ಆಫ್‌ ರೇಸ್‌ನಲ್ಲಿ ಉಳಿಯಬೇಕಿದ್ದರೇ, ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಈಗಾಗಲೇ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ತಲಾ 5 ಪಂದ್ಯಗಳನ್ನು ಜಯಿಸುವ ಮೂಲಕ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದರೆ, ಆರ್‌ಸಿಬಿ ಸೇರಿದಂತೆ 4 ತಂಡಗಳು ತಲಾ 4 ಗೆಲುವುಗಳೊಂದಿಗೆ 8 ಅಂಕಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿವೆ.

IPL 2023 ಕೆಕೆಆರ್‌ ವಿರುದ್ಧ ಸೇಡಿಗೆ ಆರ್‌ಸಿಬಿ ತುಡಿತ!

"ಇದು ಆರಂಭವಷ್ಟೇ, ನನ್ನ ಪ್ರಕಾರ ಇಂದಿನಿಂದ ದ್ವಿತಿಯಾರ್ಧ ಆರಂಭವಾಗಿದೆ. ನಾವು ಮೊದಲಾರ್ಧದಲ್ಲಿ ಇದೇ ತಂಡವನ್ನು ಮಣಿಸಿದ್ದೇವೆ. ಆ ಆತ್ಮವಿಶ್ವಾಸ ನಮ್ಮಲ್ಲಿದೆ. ಇನ್ನೊಂದು ಗೆಲುವು ಸಿಕ್ಕಿದರೇ, ಅದೇ ಜೋಶ್‌ನಲ್ಲಿ ತಂಡವು ಮುನ್ನುಗಲಿದೆ ಎನ್ನುವ ವಿಶ್ವಾಸ ನಮ್ಮದು" ಎಂದು ಚಂದ್ರಕಾಂತ್ ಪಂಡಿತ್ ಹೇಳಿದ್ದಾರೆ.

"ನಾವು ಯಾವಾಗಲೂ ಆಶಾವಾದಿಗಳಾಗಿರಬೇಕು. ನಾವು ಟೂರ್ನಿಯನ್ನು ಹೇಗೆ ನೋಡಬೇಕು ಎಂದರೆ ನಾಳೆಯಿಂದ ಹೊಸದಾಗಿ ಟೂರ್ನಿ ಆರಂಭವಾಗಿದೆ ಎಂದು ನೋಡಬೇಕು. ಯಾವಾಗಲೂ ನಾವು ಧನಾತ್ಮಕವಾಗಿ ಆಲೋಚಿಸಬೇಕು. ಈಗ ನಮ್ಮ ತಂಡದ ಆಟಗಾರರ ಆತ್ಮವಿಶ್ವಾಸ ಮೊದಲಿದ್ದಕ್ಕಿಂತ ಈಗ ಹೆಚ್ಚಿದೆ. ಇದೀಗ ಎಲ್ಲಾ ಆಟಗಾರರು ತಮ್ಮ ಜವಾಬ್ದಾರಿ ಅರಿತು ಆಡಲು ರೆಡಿಯಾಗಿದ್ದಾರೆ ಎಂದು ಚಂದ್ರಕಾಂತ್ ಪಂಡಿತ್ ಹೇಳಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ವಿರಾಟ್‌ ಕೊಹ್ಲಿ(ನಾಯಕ), ಫಾಫ್ ಡು ಪ್ಲೆಸಿಸ್, ಮಹಿಪಾಲ್‌ ಲೋಮ್ರಾರ್, ಗ್ಲೆನ್‌ ಮ್ಯಾಕ್ಸ್‌ವೆಲ್‌, ಸುಯಶ್‌ ಪ್ರಭುದೇಸಾಯಿ, ಶಾಬಾಜ್‌ ಅಹಮ್ಮದ್, ದಿನೇಶ್ ಕಾರ್ತಿಕ್‌, ವನಿಂದು ಹಸರಂಗ, ಹರ್ಷಲ್‌ ಪಟೇಲ್, ಡೇವಿಡ್‌ ವಿಲ್ಲಿ, ಮೊಹಮ್ಮದ್ ಸಿರಾಜ್‌, ವೈಶಾಖ್‌ ವಿಜಯ್‌ಕುಮಾರ್.

ಕೆಕೆಆರ್‌: ಜೇಸನ್ ರಾಯ್‌, ಎನ್‌ ಜಗದೀಶನ್‌, ವೆಂಕಟೇಶ್ ಅಯ್ಯರ್‌, ನಿತೀಶ್ ರಾಣಾ(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್‌, ಸುನಿಲ್ ನರೇನ್‌, ಟಿಮ್ ಸೌಥಿ, ಉಮೇಶ್‌ ಯಾದವ್, ವೈಭವ್‌ ಅರೋರ, ವರುಣ್‌ ಚಕ್ರವರ್ತಿ, ಸುಯಶ್‌ ಪ್ರಭುದೇಸಾಯಿ.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌/ಜಿಯೋ ಸಿನಿಮಾ