ಕೋಲ್ಕತಾ ವಿರುದ್ಧ 4 ವಿಕೆಟ್ ಜಯ, ಕೆಕೆಆರ್ಗೆ ಹ್ಯಾಟ್ರಿಕ್ ಸೋಲುಮಳೆ ಅಡ್ಡಿ, ಬೌಲರ್ಗಳ ಪರಾಕ್ರಮರಾಯ್, ರಸೆಲ್ ಹೋರಾಟದಿಂದ ಕೆಕೆಆರ್ 127/10ವಾರ್ನರ್ ಮತ್ತೆ ಫಿಫ್ಟಿ, 19.2 ಓವರ್ಗಳಲ್ಲಿ ಗೆದ್ದ ಡೆಲ್ಲಿ
ನವದೆಹಲಿ(ಏ.21): ಸತತ 5 ಪಂದ್ಯಗಳ ಸೋಲಿನೊಂದಿಗೆ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಮೊದಲ ಗೆಲುವಿಗಾಗಿ ಹಪಹಪಿಸುತ್ತಿದ್ದ ವಾರ್ನರ್ ಪಡೆ ಗುರುವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಬೌಲಿಂಗ್ನಲ್ಲಿ ಮೆರೆದಾಡಿದರೂ, ಬ್ಯಾಟಿಂಗ್ನಲ್ಲಿ ಎಂದಿನ ಹೀನಾಯ ಪ್ರದರ್ಶನ ತೋರಿತು. ಆದರೆ ‘ವಿಜಯಲಕ್ಷ್ಮಿ’ಯನ್ನು ಒಲಿಸಿಕೊಳ್ಳಲು ಕೊನೆಗೂ ಸಫಲವಾದ ಡೆಲ್ಲಿ 4 ವಿಕೆಟ್ಗಳ ಗೆಲುವು ತನ್ನದಾಗಿಸಿ, 16ನೇ ಆವೃತ್ತಿ ಐಪಿಎಲ್ನಲ್ಲಿ ಅಂಕದ ಖಾತೆ ತೆರೆಯಿತು. ಆದರೆ ಕೋಲ್ಕತಾ ಹ್ಯಾಟ್ರಿಕ್ ಸೋಲಿನ ಮುಖಭಂಗಕ್ಕೊಳಗಾಗಿದ್ದು, 8ನೇ ಸ್ಥಾನದಲ್ಲೇ ಉಳಿದುಕೊಂಡಿದೆ.
ಮಳೆಯಿಂದಾಗಿ ಒಂದು ಗಂಟೆ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ವಾರ್ನರ್ ಟಾಸ್ ಗೆದ್ದು ಕೋಲ್ಕತಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರಂಭದಿಂದ ಕೊನೆವರೆಗೂ ರನ್ ಗಳಿಸಲು ತಿಣುಕಾಡಿದ ಕೋಲ್ಕತಾ 20 ಓವರಲ್ಲಿ 127ಕ್ಕೆ ಆಲೌಟಾಯಿತು. ಸುಲಭ ಗುರಿ ಬೆನ್ನತ್ತಿದರೂ ಕೆಕೆಆರ್ ಸ್ಪಿನ್ನರ್ಗಳ ಮುಂದೆ ತತ್ತರಿಸಿದ ಡೆಲ್ಲಿ 19.2 ಓವರಲ್ಲಿ 6 ವಿಕೆಟ್ ಕಳೆದುಕೊಂಡು ಪ್ರಯಾಸದ ಜಯ ದಾಖಲಿಸಿತು.
ಸತತ ವೈಫಲ್ಯ ಅನುಭವಿಸುತ್ತಿರುವ ಪೃಥ್ವಿ ಶಾ ಆಟ ಈ ಪಂದ್ಯದಲ್ಲೂ ನಡೆಯಲಿಲ್ಲ. ಅವರು 13 ರನ್‌ಗೆ ಇನ್ನಿಂಗ್‌್ಸ ಕೊನೆಗೊಳಿಸಿದರೆ, ಮಿಚೆಲ್ ಮಾಷ್‌ರ್(02), ಫಿಲಿಫ್ ಸಾಲ್ಟ್(05) ಬಂದಷ್ಟೇ ವೇಗದಲ್ಲಿ ಪೆವಿಲಿಯನ್ಗೆ ಮರಳಿದರು. ಆದರೆ ಡೇವಿಡ್ ವಾರ್ನರ್ ಟೂರ್ನಿಯ 4ನೇ ಅರ್ಧಶತಕ ಬಾರಿಸಿ ತಂಡಕ್ಕೆ ಮತ್ತೊಮ್ಮೆ ಆಪತ್ಬಾಂಧವರಾಗಿ ಮೂಡಿಬಂದರು. ಮನೀಶ್ ಪಾಂಡೆ(21) ಕೊಡುಗೆ ನೀಡಿದರು. ವಾರ್ನರ್ ಔಟಾದಾಗ ತಂಡಕ್ಕೆ ಗೆಲ್ಲಲು 41 ಎಸೆತದಲ್ಲಿ 38 ರನ್ ಬೇಕಿತ್ತು. ತಿಣುಕಾಡಿದ ಡೆಲ್ಲಿ ಬ್ಯಾಟರ್‌ಗಳು ಕೊನೆಗೆ 4 ಎಸೆತ ಬಾಕಿ ಇರುವಂತೆ ಪಂದ್ಯ ಜಯಿಸಿದರು. ಮುರಿಯದ 7ನೇ ವಿಕೆಟ್‌ಗೆ ಅಕ್ಷರ್ ಹಾಗೂ ಲಲಿತ್ ನಡುವೆ ಮೂಡಿಬಂದ 17 ರನ್ ಜೊತೆಯಾಟ ಡೆಲ್ಲಿಯನ್ನು ಗೆಲ್ಲಿಸಿತು.
IPL 2023 ಮಳೆಯಿಂದಾಗಿ 8.30ಕ್ಕೆ ಪಂದ್ಯ ಆರಂಭ, ಕೆಕೆಆರ್ ವಿರುದ್ಧ ಟಾಸ್ ಗೆದ್ದ ಡೆಲ್ಲಿ!
ಪೆವಿಲಿಯನ್ ಪರೇಡ್: 2ನೇ ಓವರಲ್ಲೇ ವಿಕೆಟ್ ಕಳೆದುಕೊಳ್ಳಲು ಶುರುವಿಟ್ಟಕೋಲ್ಕತಾ ಕೊನೆವರೆಗೂ ಚೇತರಿಸಿಕೊಳ್ಳಲಿಲ್ಲ. ಪವರ್-ಪ್ಲೇ ಮುಕ್ತಾಯದ ವೇಳೆಗೆ ತಂಡದ ರನ್ 3 ವಿಕೆಟ್‌ಗೆ 35. ಆ ಬಳಿಕವೂ ತಂಡದ ಪರಿಸ್ಥಿತಿ ಸುಧಾರಿಸಲಿಲ್ಲ. ಲಿಟನ್(04), ವೆಂಕಟೇಶ್(00), ನಾಯಕ ನಿತೀಶ್ ರಾಣಾ(04) ಡೆಲ್ಲಿ ವೇಗಿಗಳ ಮುಂದೆ ನಿರುತ್ತರರಾದರು. ಮಂದೀಪ್ ಸಿಂಗ್(12), ರಿಂಕು ಸಿಂಗ್(06) ಅಕ್ಷರ್ ಪಟೇಲ್ಗೆ ಬಲಿಯಾದರು. ಆದರೆ ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕ್ರೀಸ್ ಕಚ್ಚಿ ನಿಂತ ಜೇಸನ್ ರಾಯ್ 39 ಎಸೆತಗಳಲ್ಲಿ 43 ರನ್ ಸಿಡಿಸಿ ತಂಡಕ್ಕೆ ಅಲ್ಪ ಆಸರೆಯಾದರು. ಮುಕೇಶ್ ಕುಮಾರ್ ಎಸೆದ 19ನೇ ಓವರಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದ ಆ್ಯಂಡ್ರೆ ರಸೆಲ್(31 ಎಸೆತಗಳಲ್ಲಿ 38) ತಂಡವನ್ನು 120ರ ಗಡಿದಾಟಿಸಿ ಮಾನ ಉಳಿಸಿದರು. ಟೂರ್ನಿಯಲ್ಲಿ ಮೊದಲ ಬಾರಿ ಆಡಿದ ಇಶಾಂತ್ ಶರ್ಮಾ, ನೋಕಿಯಾ, ಕುಲ್ದೀಪ್ ಹಾಗೂ ಅಕ್ಷರ್ ತಲಾ 2 ವಿಕೆಟ್ ಪಡೆದರು.
ಸ್ಕೋರ್:
ಕೋಲ್ಕತಾ 20 ಓವರಲ್ಲಿ 127/10 (ರಾಯ್ 43, ರಸೆಲ್ 38*, ಅಕ್ಷರ್ 2-13, ಕುಲ್ದೀಪ್ 2-15),
ಡೆಲ್ಲಿ 19.2 ಓವರಲ್ಲಿ 128/6 (ವಾರ್ನರ್ 57, ಪಾಂಡೆ 21, ವರುಣ್ 2-16, ನಿತೀಶ್ 2-
ಪಂದ್ಯಶ್ರೇಷ್ಠ: ಇಶಾಂತ್ ಶರ್ಮಾ
ಟರ್ನಿಂಗ್ ಪಾಯಿಂಟ್
ಡೆಲ್ಲಿ ರನ್ ಗಳಿಸಲು ತಿಣುಕಾಡುತ್ತಿದ್ದಾಗ 18ನೇ ಓವರಲ್ಲಿ ಲಲಿತ್, 19ನೇ ಓವರಲ್ಲಿ ಅಕ್ಷರ್‌ರನ್ನು ಸ್ಟಂಪ್ ಮಾಡುವ ಅವಕಾಶವನ್ನು ಕೀಪರ್ ಲಿಟನ್ ದಾಸ್ ಕೈಚೆಲ್ಲಿದರು. ಇವರಿಬ್ಬರನ್ನು ಔಟ್ ಮಾಡಿದ್ದರೆ ಕೆಕೆಆರ್ ಗೆಲ್ಲುವ ಸಾಧ್ಯತೆ ಇತ್ತು.
