* ಆರ್‌ಸಿಬಿ ಅಪ್ಪಟ ಅಭಿಮಾನಿಯ ಪೋಸ್ಟರ್‌ ವೈರಲ್* 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಲು ಆರ್‌ಸಿಬಿ* ರಾಜಸ್ಥಾನ ರಾಯಲ್ಸ್ ಎದುರು ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದ ಬೆಂಗಳೂರು

ಬೆಂಗಳೂರು(ಮೇ.29): ರಾಯಲ್‌ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಇಂಡಿಯನ್‌ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಟ್ರೋಫಿ ಇಲ್ಲದೇ ಮತ್ತೊಮ್ಮೆ ಬರಿಗೈನಲ್ಲಿ ವಾಪಾಸ್ಸಾಗಿದೆ. 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಎರಡನೇ ಕ್ವಾಲಿಫೈಯರ್ ಹಂತ ಪ್ರವೇಶಿಸಿ, ಈ ಬಾರಿ ಟ್ರೋಫಿ ಗೆಲ್ಲುವ ಭರವಸೆ ಮೂಡಿಸಿದ್ದ ಆರ್‌ಸಿಬಿ ತಂಡವು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಹೀನಾಯ ಸೋಲು ಕಾಣುವ ಮೂಲಕ ಮತ್ತೊಮ್ಮೆ ನಿರಾಸೆ ಅನುಭವಿಸಿದೆ. ಇದರೊಂದಿಗೆ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಆರ್‌ಸಿಬಿ ಕನಸು ಮತ್ತೊಂದು ವರ್ಷ ಮುಂದೂಡಲ್ಪಟ್ಟಿದೆ. ಇದೆಲ್ಲದರ ನಡುವೆ ಆರ್‌ಸಿಬಿ ಮಹಿಳಾ ಅಭಿಮಾನಿಯೊಬ್ಬರು ಮೈದಾನದಲ್ಲಿ ಪ್ರದರ್ಶಿಸಿದ್ದ ಪೋಸ್ಟರ್‌ವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಲಾರಂಭಿಸಿದೆ.

ಹೌದು, ಫಾಫ್ ಡು ಪ್ಲೆಸಿಸ್ (Faf du Plessis) ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಪ್‌ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿತ್ತು. ಇದರ ಜತೆಗೆ ನಾಲ್ಕನೇ ತಂಡವಾಗಿ ಪ್ಲೇ ಆಫ್‌ಗೆ ಪ್ರವೇಶ ಪಡೆಯುವ ಮೂಲಕ ಅಭಿಮಾನಿಗಳಲ್ಲಿ ಟ್ರೋಫಿಯ ಆಸೆ ಗರಿಗೆದರುವಂತೆ ಮಾಡಿತ್ತು. ಇನ್ನು ಎಲಿಮಿನೇಟರ್‌ ಪಂದ್ಯದಲ್ಲಿ ಬಲಿಷ್ಠ ಲಖನೌ ಸೂಪರ್‌ ಜೈಂಟ್ಸ್ ತಂಡವನ್ನು ಮಣಿಸುವ ಮೂಲಕ ಆರ್‌ಸಿಬಿ ಫೈನಲ್‌ಗೆ ಮತ್ತಷ್ಟು ಹತ್ತಿರವಾಗಿತ್ತು. ಆದರೆ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ಎದುರು 7 ವಿಕೆಟ್‌ಗಳ ಅಂತರದ ಹೀನಾಯ ಸೋಲು ಕಾಣುವ ಮೂಲಕ ಕಪ್ ಗೆಲ್ಲುವ ಆಸೆಯನ್ನು ಈ ಬಾರಿ ಮತ್ತೆ ಕೈಚೆಲ್ಲಿದೆ.

ಇನ್ನು ಕಳೆದ 15 ಆವೃತ್ತಿಗಳಿಂದಲೂ ಐಪಿಎಲ್ ಕಪ್ ಗೆಲ್ಲಲು ವಿಫಲವಾಗುತ್ತಲೇ ಬಂದಿದ್ದರೂ ಸಹಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ಷಾಂತರ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದೆ. ಈ ಸಲ ಕಪ್ ನಮ್ದೇ ಎನ್ನುವ ಅಭಿಯಾನದ ಮೂಲಕ ಪ್ರತಿ ಬಾರಿಯು ಆರ್‌ಸಿಬಿ ಅಭಿಮಾನಿಗಳು ರೆಡ್ ಆರ್ಮಿಯನ್ನು ಬೆಂಬಲಿಸಿಕೊಂಡೇ ಬರುತ್ತಿದ್ದಾರೆ. ಆರ್‌ಸಿಬಿ ಕಪ್ ಗೆಲ್ಲದೇ ಹೋದರೂ ಸಹಾ ಬೆಂಗಳೂರು ತಂಡದ ಮೇಲಿನ ಅಭಿಮಾನ ಮಾತ್ರ ಫ್ಯಾನ್ಸ್‌ಗಳಲ್ಲಿ ಒಂದಿಂಚು ಕಡಿಮೆಯಾಗಿಲ್ಲ. ಇದೆಲ್ಲದರ ನಡುವೆ ಈ ಹಿಂದಿನ ಐಪಿಎಲ್ ಪಂದ್ಯವೊಂದರಲ್ಲಿ ಆರ್‌ಸಿಬಿಯ ಮಹಿಳಾ ಅಪ್ಪಟ ಅಭಿಮಾನಿಯೊಬ್ಬರು ಪ್ರದರ್ಶಿಸಿದ್ದ ಪೋಸ್ಟರ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ. 

Scroll to load tweet…

ಆರ್‌ಸಿಬಿ ಮಹಿಳಾ ಅಭಿಮಾನಿಯೊಬ್ಬರು, ಆರ್‌ಸಿಬಿ ತಂಡವು ಐಪಿಎಲ್‌ ಟ್ರೋಫಿ ಗೆಲ್ಲುವವರೆಗೂ ತಾವು ಮದುವೆಯಾಗುವುದಿಲ್ಲ ಎನ್ನುವ ಪೋಸ್ಟರ್‌ ಪ್ರದರ್ಶಿಸಿದ್ದರು. ಇದೀಗ ಆರ್‌ಸಿಬಿ ತಂಡವು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲು ಕಾಣುತ್ತಿದ್ದಂತೆಯೇ, ಅಪ್ಪಟ ಅಭಿಮಾನಿಯ ಮದುವೆ ಮತ್ತೊಂದು ವರ್ಷಕ್ಕೆ ಮುಂದೂಡಲ್ಪಟ್ಟಂತೆ ಆಗಿದೆ. ಆರ್‌ಸಿಬಿ ಸೋಲಿನ ಬಳಿಕ ಈ ಪೋಸ್ಟರ್‌ ವಿವಿಧ ರೀತಿಯಲ್ಲಿ ವೈರಲ್ ಆಗಲಾರಂಭಿಸಿದೆ.

ಇನ್ನು ಪಂದ್ಯ ಸೋಲಿನ ಬಳಿಕ ಮಾತನಾಡಿದ್ದ ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮುಂದಿನ ವರ್ಷ ಹೊಸ ಗುರಿಯೊಂದಿಗೆ ಕಮ್‌ಬ್ಯಾಕ್ ಮಾಡುವುದಾಗಿ ತಿಳಿಸಿದ್ದಾರೆ. ಟೂರ್ನಿಯುದ್ದಕ್ಕೂ ಆರ್‌ಸಿಬಿಯನ್ನು ಬೆಂಬಲಿಸಿದ್ದಕ್ಕೆ ಧನ್ಯವಾದಗಳು. ಮುಂದಿನ ವರ್ಷ ಮತ್ತಷ್ಟು ಉತ್ಸಾಹ, ಹೊಸ ಗುರಿಯೊಂದಿಗೆ ಮರಳುತ್ತೇವೆ ಎಂದು ತಂಡದ ನಾಯಕ ಫಾಫ್‌ ಡು ಪ್ಲೆಸಿಸ್ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. 

IPL 2022: ಆರ್‌ಸಿಬಿ ಸೋಲಿನ ಬೆನ್ನಲ್ಲೇ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ..!

ರಾಜಸ್ಥಾನ ರಾಯಲ್ಸ್‌ ವಿರುದ್ಧದ ಕ್ವಾಲಿಫೈಯರ್‌-2ರ ಸೋಲಿನ ಬಳಿಕ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ಅವರು, ‘ಆರ್‌ಸಿಬಿ ಜೊತೆಗಿನ ಮೊದಲ ಆವೃತ್ತಿಯ ಪಯಣ ಅದ್ಭುತವಾಗಿತ್ತು. ತಂಡದ ಭಾಗವಾಗಿರುವುದಕ್ಕೆ ತುಂಬಾ ಹೆಮ್ಮೆ ಅನಿಸುತ್ತಿದೆ. ಎಲ್ಲೇ ಹೋದರೂ ಅಭಿಮಾನಿಗಳು ತೋರಿಸುತ್ತಿದ್ದ ಪ್ರೀತಿ, ಅಭಿಮಾನ ವಿಶೇಷವಾದದ್ದು. ತಂಡದ ಜೊತೆಗಿನ ಪಯಣವನ್ನು ಅವಿಸ್ಮರಣೀಯಗೊಳಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಕಾಲ ಇರಲಿ’ ಎಂದು ತಿಳಿಸಿದ್ದಾರೆ.