Asianet Suvarna News Asianet Suvarna News

IPL 2022: ಆರ್‌ಸಿಬಿ ಸೋಲಿನ ಬೆನ್ನಲ್ಲೇ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ..!

* ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಆರ್‌ಸಿಬಿ ಕನಸು ಮತ್ತೊಮ್ಮೆ ಭಗ್ನ

* ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಆರ್‌ಸಿಬಿಗೆ ಸೋಲು

* ಆರ್‌ಸಿಬಿ ಅಭಿಮಾನಿಗಳಿಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾವನಾತ್ಮಕ ಸಂದೇಶ

Former Captain Virat Kohli pens heartfelt message for RCB fans after IPL loss against Rajasthan Royals kvn
Author
Bengaluru, First Published May 29, 2022, 1:13 PM IST

ಬೆಂಗಳೂರು(ಮೇ.29): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಟ್ರೋಫಿ ಗೆಲ್ಲಬೇಕೆನ್ನುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಕನಸು ಮತ್ತೊಮ್ಮೆ ಭಗ್ನವಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ಎದುರು ಆರ್‌ಸಿಬಿ ಆಘಾತಕಾರಿ ಸೋಲು ಕಾಣುವ ಮೂಲಕ ಐಪಿಎಲ್ ಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದೆ. ಈ ಸೋಲಿನ ಬೆನ್ನಲ್ಲೇ ಆರ್‌ಸಿಬಿ ಅಭಿಮಾನಿಗಳಿಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.

ರಾಜಸ್ಥಾನ ರಾಯಲ್ಸ್ ಎದುರು ಆರ್‌ಸಿಬಿ ಸೋಲು ಕಾಣುತ್ತಿದ್ದಂತೆಯೇ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ (Virat Kohli), ಕೆಲವೊಮ್ಮೆ ಗೆಲ್ಲಬಹುದು, ಇನ್ನು ಮತ್ತೆ ಕೆಲವೊಮ್ಮೆ ಗೆಲ್ಲಲು ಸಾಧ್ಯವಾಗದೇ ಇರಬಹುದು. ಆದರೆ ನಿಮ್ಮಂತಹ ಅಭಿಮಾನಿಗಳ ಟೂರ್ನಿಯುದ್ದಕ್ಕೂ ನೀಡಿದ ಬೆಂಬಲ ಅತ್ಯಮೋಘ. ನೀವೆಲ್ಲರೂ ಕ್ರಿಕೆಟ್‌ ಟೂರ್ನಿಯನ್ನು ಮತ್ತಷ್ಟು ರಂಗೇರುವಂತೆ ಮಾಡಿದ್ದೀರ. ಕಲಿಯುವಿಕೆ ನಿರಂತರ ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.

ಆರ್‌ಸಿಬಿ ಮ್ಯಾನೇಜ್‌ಮೆಂಟ್, ಸಹಾಯಕ ಸಿಬ್ಬಂದಿಗಳಿಗೆ, ಈ ಫ್ರಾಂಚೈಸಿ ಜತೆಗಿರುವ ಎಲ್ಲಾ ಅಧ್ಭುತ ವ್ಯಕ್ತಿಗಳಿಗೆ ಅನಂತ ಧನ್ಯವಾದಗಳು. ಮುಂದಿನ ಆವೃತ್ತಿಯಲ್ಲಿ ಮತ್ತೊಮ್ಮೆ ಭೇಟಿಯಾಗೋಣ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿಯವರ ಬ್ಯಾಟಿಂಗ್ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಮೂರು ಬಾರಿ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದ್ದರು. ಈ ಬಾರಿ 16 ಐಪಿಎಲ್ ಪಂದ್ಯಗಳನ್ನಾಡಿದ ವಿರಾಟ್ ಕೊಹ್ಲಿ 22.73ರ ಬ್ಯಾಟಿಂಗ್ ಸರಾಸರಿಯಲ್ಲಿ 341 ರನ್ ಬಾರಿಸಿದ್ದರು. 2022ನೇ ಸಾಲಿನ ಐಪಿಎಲ್ ಟೂರ್ನಿಗೂ ಮುನ್ನ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ನಾಯಕತ್ವದ ಭಾರವನ್ನು ಕೆಳಗಿಳಿಸಿಕೊಂಡಿರುವ ವಿರಾಟ್ ಕೊಹ್ಲಿ ರನ್ ಮಳೆ ಹರಿಸಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಕಿಂಗ್ ಕೊಹ್ಲಿ ಬ್ಯಾಟಿಂದ ನಿರೀಕ್ಷಿತ ಮಟ್ಟದ ರನ್ ಹೊಳೆ ಹರಿಯಲಿಲ್ಲ. ವಿರಾಟ್ ಕೊಹ್ಲಿ ಅವರಿಂದ ತೆರವಾಗಿದ್ದ ನಾಯಕತ್ವ ಸ್ಥಾನವನ್ನು ತುಂಬಿದ್ದ ಫಾಫ್ ಡು ಪ್ಲೆಸಿಸ್‌ ಆರ್‌ಸಿಬಿ ತಂಡವನ್ನು ಪ್ಲೇ ಆಫ್‌ಗೆ ಕರೆದೊಯ್ದರಾದರೂ, ಫೈನಲ್‌ಗೇರಿಸಲು ವಿಫಲರಾದರು.
 
ಹೊಸ ಗುರಿಯೊಂದಿಗೆ ಮರಳುತ್ತೇವೆ: ಫಾಫ್ ಡು ಪ್ಲೆಸಿಸ್

ಅಹಮದಾಬಾದ್‌: ಟೂರ್ನಿಯುದ್ದಕ್ಕೂ ಆರ್‌ಸಿಬಿಯನ್ನು ಬೆಂಬಲಿಸಿದ್ದಕ್ಕೆ ಧನ್ಯವಾದಗಳು. ಮುಂದಿನ ವರ್ಷ ಮತ್ತಷ್ಟು ಉತ್ಸಾಹ, ಹೊಸ ಗುರಿಯೊಂದಿಗೆ ಮರಳುತ್ತೇವೆ ಎಂದು ತಂಡದ ನಾಯಕ ಫಾಫ್‌ ಡು ಪ್ಲೆಸಿಸ್ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. 

IPL 2022: 'ವಿರಾಟ್ ಕೊಹ್ಲಿ ಈ ಬಾರಿ ಮಾಡಿದಷ್ಟು ಮಿಸ್ಟೇಕ್ಸ್, ಇಡೀ ವೃತ್ತಿ ಜೀವನದಲ್ಲಿ ಮಾಡಿಲ್ಲ..!'

ರಾಜಸ್ಥಾನ ರಾಯಲ್ಸ್‌ ವಿರುದ್ಧದ ಕ್ವಾಲಿಫೈಯರ್‌-2ರ ಸೋಲಿನ ಬಳಿಕ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ಅವರು, ‘ಆರ್‌ಸಿಬಿ ಜೊತೆಗಿನ ಮೊದಲ ಆವೃತ್ತಿಯ ಪಯಣ ಅದ್ಭುತವಾಗಿತ್ತು. ತಂಡದ ಭಾಗವಾಗಿರುವುದಕ್ಕೆ ತುಂಬಾ ಹೆಮ್ಮೆ ಅನಿಸುತ್ತಿದೆ. ಎಲ್ಲೇ ಹೋದರೂ ಅಭಿಮಾನಿಗಳು ತೋರಿಸುತ್ತಿದ್ದ ಪ್ರೀತಿ, ಅಭಿಮಾನ ವಿಶೇಷವಾದದ್ದು. ತಂಡದ ಜೊತೆಗಿನ ಪಯಣವನ್ನು ಅವಿಸ್ಮರಣೀಯಗೊಳಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಕಾಲ ಇರಲಿ’ ಎಂದು ತಿಳಿಸಿದ್ದಾರೆ.

ಆವೃತ್ತಿಯಲ್ಲಿ 31 ಸಿಕ್ಸರ್‌ ಚಚ್ಚಿಸಿಕೊಂಡ ಸಿರಾಜ್‌!

ಅಹಮದಾಬಾದ್‌: ಆರ್‌ಸಿಬಿ ವೇಗಿ ಮೊಹಮದ್‌ ಸಿರಾಜ್‌ ಐಪಿಎಲ್‌ ಆವೃತ್ತಿಯೊಂದರಲ್ಲಿ ಅತೀ ಹೆಚ್ಚು ಸಿಕ್ಸರ್‌ ಬಿಟ್ಟುಕೊಟ್ಟಬೌಲರ್‌ ಎಂಬ ಅನಗತ್ಯ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಶುಕ್ರವಾರ ರಾಜಸ್ಥಾನ ವಿರುದ್ಧದ ಕ್ವಾಲಿಫೈಯರ್‌-2 ಪಂದ್ಯದಲ್ಲಿ ಮೊದಲ ಓವರ್‌ನಲ್ಲೇ 2 ಸಿಕ್ಸರ್‌ ಚಚ್ಚಿಸಿಕೊಂಡ ಅವರು ಸಿಕ್ಸರ್‌ಗಳ ಸಂಖ್ಯೆಯನ್ನು 31ಕ್ಕೆ ಏರಿಸಿದರು. ಆರ್‌ಸಿಬಿಯ ವನಿಂದು ಹಸರಂಗ ಈ ವರ್ಷ 30 ಸಿಕ್ಸರ್‌ ಬಿಟ್ಟುಕೊಟ್ಟಿದ್ದು, ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಇದಕ್ಕೂ ಮೊದಲು ಡ್ವೇನ್‌ ಬ್ರಾವೋ 29(2018), ಯಜುವೇಂದ್ರ ಚಹಲ್‌ 28(2015) ಸಿಕ್ಸರ್‌ಗಳನ್ನು ಚಚ್ಚಿಸಿಕೊಂಡಿದ್ದರು.


 

Follow Us:
Download App:
  • android
  • ios