IPL 2022: ಮತ್ತೆ ಮತ್ತೆ ನೋಡಬೇಕೆನಿಸುವ ಆರ್‌ಸಿಬಿ ಸಂಭ್ರಮಾಚರಣೆ..! ವಿಡಿಯೋ ವೈರಲ್
* ಡೆಲ್ಲಿ ಕ್ಯಾಪಿಟಲ್ಸ್ ಬಗ್ಗುಬಡಿದ ಮುಂಬೈ ಇಂಡಿಯನ್ಸ್
* ಡೆಲ್ಲಿ ಸೋಲುತ್ತಿದ್ದಂತೆಯೇ ಕುಣಿದುಕುಪ್ಪಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು
* ಸತತ ಮೂರನೇ ಬಾರಿಗೆ ಐಪಿಎಲ್‌ನಲ್ಲಿ ಪ್ಲೇ ಆಫ್‌ಗೇರಿದ ಆರ್‌ಸಿಬಿ
ಮುಂಬೈ(ಮೇ.22): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ ಲೀಗ್ ಹಂತದ ಅತ್ಯಂತ ಬಹುನಿರೀಕ್ಷಿತ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (Mumbai Indians vs Delhi Capitals) ತಂಡಗಳು ಮುಂಬೈನ ವಾಂಖೇಡೆ ಮೈದಾನದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದ ಫಲಿತಾಂಶ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಪ್ಲೇ ಆಫ್ ಹಣೆಬರಹವನ್ನು ತೀರ್ಮಾನಿಸುವಂತದ್ದಾಗಿತ್ತು. ಮುಂಬೈ ಎದುರು ಡೆಲ್ಲಿ ಕ್ಯಾಪಿಟಲ್ಸ್ ಸೋಲು ಕಾಣುತ್ತಿದ್ದಂತೆಯೇ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ನಾಲ್ಕನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುತ್ತಿದ್ದಂತೆಯೇ ಅಭಿಮಾನಿಗಳು ಮಾತ್ರವಲ್ದದೇ ಬಯೋಬಬಲ್‌ನೊಳಗಿದ್ದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳು ಕುಣಿದು ಕುಪ್ಪಳಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ಎದುರು 8 ವಿಕೆಟ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿತ್ತು. ಇದಾದ ಬಳಿಕ ಡೆಲ್ಲಿ ಹಾಗೂ ಮುಂಬೈ ನಡುವಿನ ಪಂದ್ಯದ ಫಲಿತಾಂಶದ ಮೇಲೆ ಆರ್‌ಸಿಬಿ ತನ್ನ ಚಿತ್ತವನ್ನು ನೆಟ್ಟಿತ್ತು. ಒಂದು ವೇಳೆ ಮುಂಬೈ ಎದುರು ಡೆಲ್ಲಿ ತಂಡವು ಗೆಲುವು ದಾಖಲಿಸಿದ್ದರೆ, ಆರ್‌ಸಿಬಿ ಪ್ಲೇ ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬೀಳುತ್ತಿತ್ತು. ಹೀಗಾಗಿ ಆರ್‌ಸಿಬಿ ತನ್ನ ಸಂಪೂರ್ಣ ಬೆಂಬಲವನ್ನು 5 ಬಾರಿಯ ಚಾಂಪಿಯನ್ ಮುಂಬೈಗೆ ನೀಡಿತ್ತು. ಡೆಲ್ಲಿ ಹಾಗೂ ಮುಂಬೈ ನಡುವಿನ ಕಾದಾಟಕ್ಕೂ ಮುನ್ನ ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್ ಖಾತೆಯ ಪ್ರೊಫೈಲ್ ಚಿತ್ರದ ಬಣ್ಣವನ್ನು ಕೆಂಪುವಿನಿಂದ ನೀಲಿ ಬಣ್ಣಕ್ಕೆ ಬದಲಿಸುವ ಮೂಲಕ ಮುಂಬೈ ಇಂಡಿಯನ್ಸ್‌ಗೆ ಬಹಿರಂಗವಾಗಿಯೇ ಬೆಂಬಲ ಸೂಚಿಸಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡಾ ಬಹಿರಂಗವಾಗಿಯೇ ಆರ್‌ಸಿಬಿಗೆ ಬೆಂಬಲ ಸೂಚಿಸಿದ್ದರು. ಆರ್‌ಸಿಬಿ ನಿರೀಕ್ಷೆಯನ್ನು ಮುಂಬೈ ಇಂಡಿಯನ್ಸ್ ತಂಡವು ಹುಸಿ ಮಾಡಲಿಲ್ಲ. ಡೆಲ್ಲಿ ಸೋಲಿನ ಬೆನ್ನಲ್ಲೇ ಆರ್‌ಸಿಬಿ ತಂಡವು ಐಪಿಎಲ್ ಟೂರ್ನಿಯಲ್ಲಿ ಸತತವಾಗಿ ಮೂರನೇ ಬಾರಿಗೆ ಪ್ಲೇ ಆಫ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಯಿತು.
IPL 2022 ಮುಂಬೈ ವಾಂಖೇಡೆ ಮೈದಾನದಲ್ಲೇ RCB, RCB ಜಯಘೋಷ..! ವಿಡಿಯೋ ವೈರಲ್
ಆರ್‌ಸಿಬಿ ತಂಡದ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿ ಒಟ್ಟಿಗೆ ಕುಳಿತು ಕಣ್ಮಿಟುಕಿಸದಂತೆ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ವೀಕ್ಷಿಸಿದರು. ಆಟಗಾರರು ಪ್ರತಿಕ್ಷಣ ಮುಂಬೈ ತಂಡವನ್ನು ಬೆಂಬಲಿಸಿದರು. ಮುಂಬೈ ಗೆಲುವು ದಾಖಲಿಸುತ್ತಿದ್ದಂತೆಯೇ ಜೋರಾಗಿ ಆರ್‌ಸಿಬಿ... ಆರ್‌ಸಿಬಿ... ಎಂದು ಘೋಷಣೆ ಕೂಗುವ ಮೂಲಕ ಮುಂಬೈ ಗೆಲುವನ್ನು ಆರ್‌ಸಿಬಿ ಆಟಗಾರರು ಸಂಭ್ರಮಿಸಿದರು. ಈ ವಿಡಿಯೋವನ್ನು ಆರ್‌ಸಿಬಿ ಫ್ರಾಂಚೈಸಿಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವ್ಯಾಪಕವಾಗಿ ಆರ್‌ಸಿಬಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಆರ್‌ಸಿಬಿ ಅಭಿಮಾನಿಗಳು ಮತ್ತೆ ಮತ್ತೆ ನೋಡ ಬಯಸುವ ವಿಡಿಯೋ ಇಲ್ಲಿದೆ ನೋಡಿ
ಮುಂಬೈ ಇಂಡಿಯನ್ಸ್ ಎದುರು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸೋಲು ಅನುಭವಿಸುತ್ತಿದ್ದಂತೆಯೇ ಆರ್‌ಸಿಬಿ ತಂಡವು ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ. ಈಗಾಗಲೇ ಗುಜರಾತ್ ಟೈಟಾನ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದವು. ಇದೀಗ ಆರ್‌ಸಿಬಿ ತಂಡವು ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಮೇ 25ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನ ಸಾಕ್ಷಿಯಾಗಲಿದೆ.