* ಮುಂಬೈ ಇಂಡಿಯನ್ಸ್ ಎದುರು ಸೋಲುಂಡ ಡೆಲ್ಲಿ ಕ್ಯಾಪಿಲಟ್ಸ್* ಡೆಲ್ಲಿ ಸೋಲಿನೊಂದಿಗೆ ಆರ್‌ಸಿಬಿ ಪ್ಲೇ ಆಫ್ ಹಾದಿ ಖಚಿತ* ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿದ ಆರ್‌ಸಿಬಿ ಫ್ಯಾನ್ಸ್
ಮುಂಬೈ(ಮೇ.22): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indians Premier League 2022) ಟೂರ್ನಿಯ 69ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಗೆಲುವಿನೊಂದಿಗೆ ಅಭಿಯಾನ ಮುಗಿಸಿದೆ. ಈ ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಪ್ಲೇ ಆಫ್ ಕನಸು ಭಗ್ನವಾದರೆ, ಆರ್‌ಸಿಬಿ ತಂಡದ ಪ್ಲೇ ಆಫ್ ಸ್ಥಾನ ಖಚಿತವಾಗಿದೆ. ಈ ಪಂದ್ಯದ ಫಲಿತಾಂಶದ ಮೇಲೆ ಆರ್‌ಸಿಬಿ ತಂಡ ಹಾಗೂ ಅಭಿಮಾನಿಗಳು ಹದ್ದಿನಗಣ್ಣಿಟ್ಟಿದ್ದರು. ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳು ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುವ ಮೂಲಕ ಗಮನ ಸೆಳೆದರು. ಮೈದಾನದ ತುಂಬೆಲ್ಲಾ ಅಭಿಮಾನಿಗಳು ಆರ್‌ಸಿಬಿ, ಆರ್‌ಸಿಬಿ ಎಂದು ಘೋಷಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಹುರಿದುಂಬಿಸಿದರು.
2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಾಲ್ಕನೇ ತಂಡವಾಗಿ ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸುವರ್ಣಾವಕಾಶವಿತ್ತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಮುಂಬೈ ಎದುರು ಗೆಲುವು ಸಾಧಿಸಿ ಪ್ಲೇ ಆಫ್‌ಗೇರಲು ರಿಷಭ್ ಪಂತ್ ಪಡೆ ತುದಿಗಾಲಿನಲ್ಲಿ ನಿಂತಿತ್ತು. ಡೆಲ್ಲಿ ಹಾಗೂ ಮುಂಬೈ ತಂಡಗಳ ನಡುವಿನ ಪಂದ್ಯದ ಫಲಿತಾಂಶ ಆರ್‌ಸಿಬಿ ತಂಡದ ಪ್ಲೇ ಆಫ್ ಹಾದಿಯನ್ನು ನಿರ್ಧರಿಸುವಂತಿತ್ತು. ಆರಂಭಿಕ ಆಘಾತದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು 159 ರನ್ ಕಲೆಹಾಕುವ ಮೂಲಕ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಸವಾಲಿನ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಮುಂಬೈ ಉತ್ತಮ ಆರಂಭವನ್ನು ಪಡೆಯಿತು. ಇದರ ಹೊರತಾಗಿಯೂ ನಿರಂತರ ವಿಕೆಟ್ ಕಳೆದುಕೊಂಡ ಪರಿಣಾಮ ಮುಂಬೈ ಇಂಡಿಯನ್ಸ್ ಕೊನೆಯ 6 ಓವರ್‌ಗಳಲ್ಲಿ 68 ರನ್ ಗಳಿಸಬೇಕಿತ್ತು. ಆದರೆ ಮುಂಬೈ ಇಂಡಿಯನ್ಸ್ ಸ್ಪೋಟಕ ಬ್ಯಾಟರ್ ಟಿಮ್ ಡೇವಿಡ್ ಕೇವಲ 11 ಎಸೆತಗಳಲ್ಲಿ 34 ರನ್ ಚಚ್ಚುವ ಮೂಲಕ ಮುಂಬೈ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.
ಟಿಮ್ ಡೇವಿಡ್ ತಾವೆದುರಿಸಿದ ಮೊದಲ ಎಸೆತದಲ್ಲೇ ರಿಷಭ್ ಪಂತ್‌ಗೆ ಕ್ಯಾಚ್ ನೀಡಿದ್ದರು. ಆದರೆ ಅಂಪೈರ್ ಔಟ್ ನೀಡಿರಲಿಲ್ಲ, ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಡಿಆರ್‌ಎಸ್ ತೆಗೆದುಕೊಳ್ಳುವ ಅವಕಾಶವಿದ್ದರೂ ಸಹಾ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಒಂದು ವೇಳೆ ಈ ಅವಕಾಶ ಬಳಸಿಕೊಂಡಿದ್ದರೆ ಪಂದ್ಯದ ಫಲಿತಾಂಶ ಬೇರೆಯದ್ದೇ ಆಗುವ ಸಾಧ್ಯತೆಯಿತ್ತು.
IPL 2022 ಡೆಲ್ಲಿ ವಿರುದ್ಧ ಮುಂಬೈಗೆ ಗೆಲುವು, ಆರ್‌ಸಿಬಿಗೆ ಸಿಕ್ತು ಪ್ಲೇ ಆಫ್ ಚಾನ್ಸ್!
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲನ್ನೇ ನಿರೀಕ್ಷಿಸುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ವಾಂಖೇಡೆ ಮೈದಾನದಲ್ಲಿ ಆರ್‌ಸಿಬಿ... ಆರ್‌ಸಿಬಿ ಎಂದು ಘೋಷಣೆ ಕೂಗುವ ಮೂಲಕ ಮುಂಬೈ ತಂಡವನ್ನು ಗೆಲ್ಲಲು ಹುರಿದುಂಬಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ನು ಡೆಲ್ಲಿ ಹಾಗೂ ಮುಂಬೈ ನಡುವಿನ ಪಂದ್ಯ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ, ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆರ್‌ಸಿಬಿ ತಂಡವು ಚಿಯರ್ ಅಪ್ ಮಾಡಲಿದೆ ಎಂದು ಘೋಷಿಸಿತ್ತು. ಇನ್ನು ಪಂದ್ಯ ಮುಕ್ತಾಯದ ಬಳಿಕ ಆರ್‌ಸಿಬಿ ತಂಡವು, ಮುಂಬೈ ಇಂಡಿಯನ್ಸ್ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿತ್ತು.
