ಡೆಲ್ಲಿ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಮುಂಬೈ ಗೆಲುವಿಗೆ ಆರ್‌ಸಿಬಿ ಅಭಿಮಾನಿಗಳ ಪ್ರಾರ್ಥನೆ ಇಂದಿನ ಫಲಿತಾಂಶದ ಮೇಲಿ ನಿಂತಿದೆ ಪ್ಲೇ ಆಫ್ ಲೆಕ್ಕಾಚಾರ
ಮುಂಬೈ(ಮೇ.21): ಐಪಿಎಲ್ 2022 ಟೂರ್ನಿಯ 69ನೇ ಲೀಗ್ ಪಂದ್ಯ ಭಾರಿ ಕುತೂಹಲ ಕೆರಳಿಸಿದೆ. ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಸ್ಟಬ್ಸ್ ಬದಲು ಬ್ರೆವಿಸ್ ತಂಡ ಸೇರಿಕೊಂಡಿದ್ದರೆ, ಸಂಜಯ್ ಬದಲು ಶೋಕಿನ್ ತಂಡ ಸೇರಿಕೊಂಡಿದ್ದಾರೆ. ಡೆಲ್ಲಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಲಲಿತ್ ಯಾದವ್ ಬದಲು ಪೃಥ್ವಿ ಶಾ ತಂಡ ಸೇರಿಕೊಂಡಿದ್ದಾರೆ. ಪೃಥ್ವಿ ಶಾ ಕಮ್‌ಬ್ಯಾಕ್ ಆರ್‌ಸಿಬಿ ಅಭಿಮಾನಿಗಳಲ್ಲಿ ಕೊಂಚ ಆತಂಕ ವಾತಾವರಣ ಸೃಷ್ಟಿಸಿದೆ.
IPL 2022: ಡೆಲ್ಲಿ ಗೆದ್ದರೆ ಪ್ಲೇ ಆಫ್‌ಗೆ, ಮುಂಬೈ ಗೆದ್ದರೆ ಆರ್‌ಸಿಬಿ ಪ್ಲೇ ಆಫ್‌ಗೆ..!!
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಡೇನಿಯಲ್ ಸ್ಯಾಮ್ಸ್, ತಿಲಕ್ ವರ್ಮಾ, ಡೇವಾಲ್ಡ್ ಬ್ರೆವಿಸ್, ಟಿಮ್ ಡೇವಿಡ್, ರಮನದೀಪ್ ಸಿಂಗ್, ಹೃತಿಕ್ ಶೋಕಿನ್, ಜಸ್ಪ್ರೀತ್ ಬುಮ್ರಾ, ರಿಲೇ ಮೆರಿಡಿತ್, ಮಯಾಂಕ್ ಮಾರ್ಕಂಡೆ
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ರಿಷಬ್ ಪಂತ್(ನಾಯಕ), ಸರ್ಫರಾಜ್ ಖಾನ್, ರೋವ್ಮನ್ ಪೊವೆಲ್, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅನ್ರಿಚ್ ನೋರ್ಜೆ, ಖಲೀಲ್ ಅಹಮ್ಮದ್
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲಿ ಚೇಸಿಂಗ್ ತಂಡ ಹೆಚ್ಚು ಯಶಸ್ಸು ಸಾಧಿಸಿದೆ. 4ರಲ್ಲಿ 3 ಪಂದ್ಯಗಳು ಚೇಸಿಂಗ್ ತಂಡ ಗೆಲುವು ಕಂಡಿದೆ. ಮುಂಬೈ ಹಾಗೂ ಡೆಲ್ಲಿ ಮುಖಾಮುಖಿಯಲ್ಲಿ ಮುಂಬೈ 16 ಗೆಲುವು ಕಂಡಿದ್ದರೆ, ಡೆಲ್ಲಿ 15 ಗೆಲುವು ಕಂಡಿದೆ.
ಇಂದಿನ ಪಂದ್ಯದ ಫಲಿತಾಂಶ ಮುಂಬೈ ತಂಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಎಷ್ಟು ಮುಖ್ಯವೋ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಅಷ್ಟೇ ಮುಖ್ಯ. ಡೆಲ್ಲಿ ಗೆದ್ದರೆ ನೇರವಾಗಿ ಪ್ಲೇ ಆಫ್‌ಗೆ ಲಗ್ಗೆ ಇಡಲಿದೆ. ಇದರಿಂದ ಆರ್‌ಸಿಬಿ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಆರ್‌ಸಿಬಿ ಹಾಗೂ ಅಭಿಮಾನಿಗಳು ಮುಂಬೈ ಇಂಡಿಯನ್ಸ್ ಗೆಲುವಿಗೆ ಪ್ರಾರ್ಥನೆ ಆರಂಭಿಸಿದ್ದಾರೆ.
IPL 2022: ಆರ್‌ಸಿಬಿ-ಮುಂಬೈ ದುಷ್ಮನ್ಸ್ ಅಲ್ಲ.. ಭಾಯ್ ಭಾಯ್..!
ಮುಂಬೈ ಇಂಡಿಯನ್ಸ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗೆದ್ದು ಟೂರ್ನಿಗೆ ವಿದಾಯ ಹೇಳಲು ಸಜ್ಜಾಗಿದೆ. ಜೊತೆಗೆ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಗೆದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಲಿದೆ.
ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ , ಪಂಜಾಬ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ಗುಜರಾತ್ ಟೈಟಾನ್ಸ್ , ರಾಜಸ್ಥಾನ ರಾಯಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಈಗಾಗಲೇ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇನ್ನುಳಿದಿರುವ ಒಂದು ಸ್ಥಾನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಇಂದು ಹೋರಾಟ ನಡೆಸುತ್ತಿದೆ. ಈ ಫಲಿತಾಂಶದ ಮೇಲೆ ಆರ್‌ಸಿಬಿ ಭವಿಷ್ಯವೂ ನಿರ್ಧಾರವಾಗಲಿದೆ.
