* ಡೆಲ್ಲಿ ಕ್ಯಾಪಿಟಲ್ಸ್‌ಗೆ ಶರಣಾದ ಕೋಲ್ಕತಾ ನೈಟ್ ರೈಡರ್ಸ್* 4 ವಿಕೆಟ್ ಕಬಳಿಸಿ ಮಿಂಚಿದ ಕುಲ್ದೀಪ್ ಯಾದವ್* ನಾಯಕ ಶ್ರೇಯಸ್ ಅಯ್ಯರ್ ಏಕಾಂಗಿ ಹೋರಾಟ ವ್ಯರ್ಥ
ಮುಂಬೈ(ಏ.10): ಚೈನಾಮನ್ ಸ್ಪಿನ್ನರ್ ಖ್ಯಾತಿಯ ಕುಲ್ದೀಪ್ ಯಾದವ್ ಮಾರಕ ದಾಳಿಗೆ ತತ್ತರಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಕೇವಲ 171 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು 44 ರನ್‌ಗಳ ಅಂತರದ ಭರ್ಜರಿ ಜಯ ಸಾಧಿಸಿದೆ. ಇದರ ಜತೆಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ ನೀಡಿದ್ದ 216 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಆರಂಭದಲ್ಲೇ ಅಜಿಂಕ್ಯ ರಹಾನೆ ವಿಕೆಟ್ ಕಳೆದುಕೊಂಡಿತು. ರಹಾನೆ 14 ಎಸೆತಗಳನ್ನು ಎದುರಿಸಿ 1 ಬೌಂಡರಿ ಸಹಿತ 8 ರನ್ ಬಾರಿಸಿ ಖಲೀಲ್ ಅಹಮ್ಮದ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ವೆಂಕಟೇಶ್ ಅಯ್ಯರ್ 8 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ 18 ರನ್ ಬಾರಿಸಿ ಖಲೀಲ್ ಅಹಮ್ಮದ್‌ಗೆ ಎರಡನೇ ಬಲಿಯಾದರು. ಈ ವೇಳೆಗೆ ಕೆಕೆಅರ್ 38 ರನ್ ಬಾರಿಸಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಅಯ್ಯರ್-ರಾಣಾ ಆಸರೆ: ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕೆಕೆಆರ್ ತಂಡಕ್ಕೆ ನಾಯಕ ಶ್ರೇಯಸ್ ಅಯ್ಯರ್ ಹಾಗೂ ನಿತೀಶ್ ರಾಣಾ ಮೂರನೇ ವಿಕೆಟ್‌ಗೆ 79 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಅಸರೆಯಾದರು. ಚುರುಕಿನ ಬ್ಯಾಟಿಂಗ್ ನಡೆಸಿದ ನಿತೀಶ್ ರಾಣಾ 20 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 30 ರನ್ ಬಾರಿಸಿ ಲಲಿತ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಅಯ್ಯರ್ 33 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 54 ರನ್ ಬಾರಿಸಿ ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು.
ದಿಢೀರ್ ಕುಸಿತ ಕಂಡ ಕೆಕೆಆರ್: ನಿತೀಶ್ ರಾಣಾ ಹಾಗೂ ಶ್ರೇಯಸ್ ಅಯ್ಯರ್ ವಿಕೆಟ್ ಪತನವಾಗುತ್ತಿದ್ದಂತೆಯೇ ಕೆಕೆಆರ್ ತಂಡವು ನಾಟಕೀಯ ಕುಸಿತ ಕಂಡಿತು. 117 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಕೆಕೆಆರ್ ತಂಡವು ತನ್ನ ಖಾತೆಗೆ 26 ರನ್ ಸೇರಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ದಿಢೀರ್ ಕುಸಿತ ಕಂಡಿತು. ಕುಲ್ದೀಪ್ ಯಾದವ್ ಮತ್ತೆ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಕೆಕೆಆರ್ ತಂಡವನ್ನು ಸೋಲಿನ ಪ್ರಪಾತಕ್ಕೆ ತಳ್ಳಿದರು.
IPL 2022: ಪೃಥ್ವಿ, ವಾರ್ನರ್ ಗುಡುಗು, ಕೆಕೆಆರ್‌ಗೆ ಕಠಿಣ ಗುರಿ ನೀಡಿದ ಡೆಲ್ಲಿ..!
ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಭರ್ಜರಿ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕರಾದ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಡ್ರೀಮ್ ಸ್ಟಾರ್ಟ್ ಒದಗಿಸಿಕೊಟ್ಟರು. ಕೋಲ್ಕತಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಪವರ್ ಪ್ಲೇ ಓವರ್‌ನಲ್ಲಿ 68 ರನ್‌ಗಳ ಜತೆಯಾಟ ನಿಭಾಯಿಸಿದರು. ಇದಾದ ಬಳಿಕವೂ ಈ ಇಬ್ಬರು ಬ್ಯಾಟರ್‌ಗಳ ಅಬ್ಬರ ಜೋರಾಯಿತು. ಮೊದಲ ವಿಕೆಟ್‌ಗೆ ಈ ಜೋಡಿ 93 ರನ್‌ಗಳ ಜತೆಯಾಟ ನಿಭಾಯಿಸಿತು. ಪೃಥ್ವಿ ಶಾ ಕೇವಲ 29 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 51 ರನ್ ಬಾರಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು. ಇದು ಟೂರ್ನಿಯಲ್ಲಿ ಪೃಥ್ವಿ ಬಾರಿಸಿದ ಸತತ ಎರಡನೇ ಅರ್ಧಶತಕವಾಗಿದೆ.
ಡೇವಿಡ್ ವಾರ್ನರ್ ಆಕರ್ಷಕ ಅರ್ಧಶತಕ: ಡೆಲ್ಲಿ ಕ್ಯಾಪಿಟಲ್ಸ್ ಪರ ಮೊದಲ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದ ವಾಮನ ಮೂರ್ತಿ ಡೇವಿಡ್ ವಾರ್ನರ್, ಎರಡನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಎದುರು ಸವಾರಿ ಮಾಡಿದರು. ಸಿಕ್ಕ ಅವಕಾಶಗಳಲ್ಲಿ ಬೌಂಡರಿ ಬಾರಿಸುತ್ತಾ, ಡೆಲ್ಲಿ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಅಂತಿಮವಾಗಿ ವಾರ್ನರ್ 45 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 61 ರನ್ ಬಾರಿಸಿ ಉಮೇಶ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು
