Asianet Suvarna News Asianet Suvarna News

IPL 2022: ಪೃಥ್ವಿ, ವಾರ್ನರ್ ಗುಡುಗು, ಕೆಕೆಆರ್‌ಗೆ ಕಠಿಣ ಗುರಿ ನೀಡಿದ ಡೆಲ್ಲಿ..!

* ಕೋಲ್ಕತಾಗೆ ಕಠಿಣ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

* ಆಕರ್ಷಕ ಅರ್ಧಶತಕ ಚಚ್ಚಿದ ಡೇವಿಡ್ ವಾರ್ನರ್, ಪೃಥ್ವಿ ಶಾ

* ಮೊದಲು ಬ್ಯಾಟ್‌ ಮಾಡಿ 215 ರನ್ ಬಾರಿಸಿದ ಡೆಲ್ಲಿ ಕ್ಯಾಪಿಟಲ್ಸ್‌

IPL 2022 David Warner Prithvi Shaw fifty helps Delhi Capitals set 216 runs target to KKR kvn
Author
Bengaluru, First Published Apr 10, 2022, 5:27 PM IST

ಮುಂಬೈ‌(ಏ.10): ಆರಂಭಿಕ ಬ್ಯಾಟರ್‌ಗಳಾದ ಪೃಥ್ವಿ ಶಾ(51), ಡೇವಿಡ್ ವಾರ್ನರ್‌(61) ಬಾರಿಸಿದ ಸ್ಪೋಟಕ ಅರ್ಧಶತಕದ (Prithvi Shaw and David Warner Blasting Fifty) ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 215 ರನ್ ಬಾರಿಸಿದ್ದು, ಕೋಲ್ಕತಾ ನೈಟ್ ರೈಡರ್ಸ್‌ (Kolkata Knight Riders) ತಂಡಕ್ಕೆ ಕಠಿಣ ಗುರಿ ನೀಡಿದೆ. ಬೌಲಿಂಗ್‌ನಲ್ಲಿ ಉಮೇಶ್ ಯಾದವ್, ಪ್ಯಾಟ್ ಕಮಿನ್ಸ್‌ ದುಬಾರಿಯಾದರು.  

ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಭರ್ಜರಿ (Delhi Capitals gets good Start) ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕರಾದ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಡ್ರೀಮ್ ಸ್ಟಾರ್ಟ್‌ ಒದಗಿಸಿಕೊಟ್ಟರು. ಕೋಲ್ಕತಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಪವರ್‌ ಪ್ಲೇ ಓವರ್‌ನಲ್ಲಿ 68 ರನ್‌ಗಳ ಜತೆಯಾಟ ನಿಭಾಯಿಸಿದರು. ಇದಾದ ಬಳಿಕವೂ ಈ ಇಬ್ಬರು ಬ್ಯಾಟರ್‌ಗಳ ಅಬ್ಬರ ಜೋರಾಯಿತು. ಮೊದಲ ವಿಕೆಟ್‌ಗೆ ಈ ಜೋಡಿ 93 ರನ್‌ಗಳ ಜತೆಯಾಟ ನಿಭಾಯಿಸಿತು. ಪೃಥ್ವಿ ಶಾ ಕೇವಲ 29 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 51 ರನ್ ಬಾರಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು. ಇದು ಟೂರ್ನಿಯಲ್ಲಿ ಪೃಥ್ವಿ ಬಾರಿಸಿದ ಸತತ ಎರಡನೇ ಅರ್ಧಶತಕವಾಗಿದೆ.

ಡೇವಿಡ್ ವಾರ್ನರ್‌ ಆಕರ್ಷಕ ಅರ್ಧಶತಕ: ಡೆಲ್ಲಿ ಕ್ಯಾಪಿಟಲ್ಸ್ ಪರ ಮೊದಲ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದ ವಾಮನ ಮೂರ್ತಿ ಡೇವಿಡ್ ವಾರ್ನರ್, ಎರಡನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಎದುರು ಸವಾರಿ ಮಾಡಿದರು. ಸಿಕ್ಕ ಅವಕಾಶಗಳಲ್ಲಿ ಬೌಂಡರಿ ಬಾರಿಸುತ್ತಾ, ಡೆಲ್ಲಿ ರನ್‌ ವೇಗಕ್ಕೆ ಚುರುಕು ಮುಟ್ಟಿಸಿದರು. ಅಂತಿಮವಾಗಿ ವಾರ್ನರ್‌ 45 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 61 ರನ್ ಬಾರಿಸಿ ಉಮೇಶ್ ಯಾದವ್‌ಗೆ ವಿಕೆಟ್‌ ಒಪ್ಪಿಸಿದರು.

DC vs KKR: ಡೆಲ್ಲಿ ಕ್ಯಾಪಿಟಲ್ಸ್ ಎದುರು ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ

ಕೊಂಚ ರನ್ ವೇಗಕ್ಕೆ ಕಡಿವಾಣ ಹಾಕಿದ ಕೆಕೆಆರ್: ಪೃಥ್ವಿ ಶಾ ವಿಕೆಟ್ ಪತನದ ಬಳಿಕ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಾಯಕ ರಿಷಭ್ ಪಂತ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ವಾರ್ನರ್‌ಗೆ ಉತ್ತಮ ಸಾಥ್ ನೀಡಿದರು. ರಿಷಭ್ ಪಂತ್ 14 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 27 ರನ್ ಬಾರಿಸಿ ರಸೆಲ್‌ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಡೆಲ್ಲಿ 12.5 ಓವರ್‌ಗಳಲ್ಲಿ 148 ರನ್‌ ಗಳಿಸಿತ್ತು. ಪಂತ್ ವಿಕೆಟ್ ಪತನದ ಬೆನ್ನಲ್ಲೇ ಲಲಿತ್ ಯಾದವ್(1), ರೋಮನ್ ಪೋವೆಲ್(8) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. 16ನೇ ಓವರ್‌ನಲ್ಲಿ ಸುನಿಲ್ ನರೈನ್ ಕೇವಲ 1 ಒಂದು ರನ್ ನೀಡಿದರು. ಆ ಬಳಿಕ ಕೊನೆಯಲ್ಲಿ ಅಕ್ಷರ್ ಪಟೇಲ್ ಹಾಗೂ ಶಾರ್ದೂಲ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಅಕ್ಷರ್ ಪಟೇಲ್ 14 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 22 ರನ್ ಬಾರಿಸಿದರೆ, ಶಾರ್ದೂಲ್ ಠಾಕೂರ್ ಕೇವಲ 11 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 29 ರನ್ ಸಿಡಿಸಿದರು.

ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಸುನಿಲ್ ನರೈನ್ 21 ರನ್ ನೀಡಿ 2 ವಿಕೆಟ್ ಪಡೆದರೆ, ಆಂಡ್ರೆ ರಸೆಲ್, ಉಮೇಶ್ ಯಾದವ್ ಹಾಗೂ ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಕಬಳಿಸಿದರು.

Follow Us:
Download App:
  • android
  • ios