* ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಐಪಿಎಲ್ ಜ್ವರ* ಚುಟುಕು ಕ್ರಿಕೆಟ್ ಹಬ್ಬವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತ ಐಪಿಎಲ್ ಫ್ಯಾನ್ಸ್* ಆರ್‌ಸಿಬಿ ತಂಡಕ್ಕೆ ಮತ್ತೋರ್ವ ವಿದೇಶಿ ಆಟಗಾರ ಸೇರ್ಪಡೆ
ದುಬೈ(ಆ.26): 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಇನ್ನುಳಿದ ಪಂದ್ಯಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಇಂಗ್ಲೆಂಡ್ ಆಲ್ರೌಂಡರ್ ಜಾರ್ಜ್ ಗಾರ್ಟನ್‌ರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಎಡಗೈ ವೇಗದ ಬೌಲರ್ ಆಗಿರುವ ಗಾರ್ಟನ್ ಕೌಂಟಿ ತಂಡ ಸಸೆಕ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದರು. ಇತ್ತೀಚಿಗೆ ನಡೆದ 100 ಬಾಲ್ ಕ್ರಿಕೆಟ್‌ನಲ್ಲೂ ಮಿಂಚಿದ್ದರು. 24 ವರ್ಷದ ಗಾರ್ಟನ್ ಇದುವರೆಗೂ 38 ಟಿ20 ಪಂದ್ಯಗಳನ್ನಾಡಿ 44 ವಿಕೆಟ್ ಕಬಳಿಸಿದ್ದಾರೆ. ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್‌ಸನ್ ಐಪಿಎಲ್ ಭಾಗ-2 ಟೂರ್ನಿಗೆ ಅಲಭ್ಯರಾದ ಹಿನ್ನೆಲೆಯಲ್ಲಿ ಗಾರ್ಟನ್ ಆರ್‌ಸಿಬಿ ತಂಡ ಕೂಡಿಕೊಂಡಿದ್ದಾರೆ. ಅಂದಹಾಗೆ ಗಾರ್ಟನ್ ಪಾಲಿಗಿದು ಮೊದಲ ಐಪಿಎಲ್ ಟೂರ್ನಿ ಎನಿಸಿದೆ. ಈ ಮೊದಲು ಲಂಕಾ ಆಲ್ರೌಂಡರ್ ವನಿಂದು ಹಸರಂಗಾ, ವೇಗಿ ದುಸ್ಮಂತ್ ಚಮೀರಾ ಹಾಗೂ ಸಿಂಗಾಪುರದ ಕ್ರಿಕೆಟಿಗರ ಟಿಮ್ ಡೇವಿಡ್ ಆರ್‌ಸಿಬಿ ತಂಡ ಕೂಡಿಕೊಂಡಿದ್ದರು.
IPL 2021 ಆರ್‌ಸಿಬಿಗೆ ಹೊಸ ಅಸ್ತ್ರ ಸೇರ್ಪಡೆ; ಕೊಹ್ಲಿ ಪಡೆಯೀಗ ಮತ್ತಷ್ಟು..!
ಇನ್ನು ಇದೇ ವೇಳೆ ರಾಜಸ್ಥಾನ್ ರಾಯಲ್ಸ್ ತಂಡ ಟಿ20 ಕ್ರಿಕೆಟ್‌ನ ನಂ.1 ಬೌಲರ್ ಆಗಿರುವ ದಕ್ಷಿಣ ಆಫ್ರಿಕಾದ ತಬ್ರೇಝ್ ಶಂಸಿಯನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಆಸ್ಟ್ರೇಲಿಯಾದ ವೇಗದ ಬೌಲರ್ ಆ್ಯಂಡ್ರೂ ಟೈ ಬದಲಿಗೆ ಎಡಗೈ ಸ್ಪಿನ್ನರ್ ತಬ್ರೇಝ್ ರಾಜಸ್ಥಾನ ರಾಯಲ್ಸ್ ಪರ ಆಡಲಿದ್ದಾರೆ. 14ನೇ ಆವೃತ್ತಿಯ ಐಪಿಎಲ್ ಭಾಗ-2 ಸರಣಿಗೆ ಜೋಫ್ರಾ ಆರ್ಚರ್ ಹಾಗೂ ಜೋಸ್ ಬಟ್ಲರ್ ಅಲಭ್ಯರಾಗಿದ್ದಾರೆ. ಇನ್ನು ಬೆನ್ ಸ್ಟೋಕ್ಸ್ ಲಭ್ಯತೆ ಕುರಿತಂತೆ ಸಹಾ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ವಿದೇಶಿ ತಾರಾ ಆಟಗಾರರ ಕೊರತೆ ಅನುಭವಿಸುತ್ತಿದ್ದ ರಾಯಲ್ಸ್ ಪಡೆಗೆ ಶಂಶಿ ಸೇರ್ಪಡೆ ಕೊಂಚ ಬಲ ಬಂದಂತೆ ಆಗಿದೆ.
ಐಪಿಎಲ್ ಭಾಗ 2 ಟೂರ್ನಿಯು ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಇನ್ನು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೆಪ್ಟೆಂಬರ್ 20ರಂದು ನಡೆಯಲಿರುವ ಯುಎಇ ಚರಣದ ಮೊದಲ ಪಂದ್ಯದಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
