IPL 2021 ಆರ್‌ಸಿಬಿಗೆ ಹೊಸ ಅಸ್ತ್ರ ಸೇರ್ಪಡೆ; ಕೊಹ್ಲಿ ಪಡೆಯೀಗ ಮತ್ತಷ್ಟು ಬಲಿಷ್ಠ..!
ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಭಾಗ 2 ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಎಲ್ಲಾ ತಂಡಗಳು ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಸಕಲ ಸಿದ್ದತೆ ಆರಂಭಿಸಿದೆ. ಹೀಗಿರುವಾಗಲೇ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 3 ಹೊಸ ಅಸ್ತ್ರ ಸೇರ್ಪಡೆಯಾಗಿವೆ. ಆರ್‌ಸಿಬಿ ತಂಡ ಕೂಡಿಕೊಂಡಿರುವ ಹೊಸ ಆಟಗಾರರು ಯಾರು? ಯಾರ ಬದಲಿಗೆ ತಂಡ ಕೂಡಿಕೊಂಡಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಭಾಗ-2 ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಈ ಚುಟುಕು ಕ್ರಿಕೆಟ್ ಹಬ್ಬವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಈಗಾಗಲೇ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಯುಎಇಗೆ ಒಂದು ತಿಂಗಳು ಮುಂಚಿತವಾಗಿಯೇ ಬಂದಿಳಿದಿದ್ದು, ದುಬೈನ ಐಸಿಸಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸ ಆರಂಭಿಸಿದೆ.
ಇನ್ನು ಮೊದಲ 2021ನೇ ಸಾಲಿನ ಐಪಿಎಲ್‌ನ ಮೊದಲ ಚರಣದಲ್ಲಿ ಅದ್ಭುತ ಪ್ರದರ್ಶನ ತೋರಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡವೆಂದು ಗುರುತಿಸಿಕೊಂಡಿದೆ. ಸದ್ಯ 7 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 2 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೂರನೇ
ಸ್ಥಾನದಲ್ಲಿದೆ.
ಇದೀಗ ಐಪಿಎಲ್ ಭಾಗ 2 ಆರಂಭಕ್ಕೂ ಮುನ್ನ ಲಂಕಾದ ಇಬ್ಬರು ತಾರಾ ಆಟಗಾರರು ಹಾಗೂ ಸಿಂಗಾಪುರದ ಒಬ್ಬ ಆಟಗಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೂಡಿಕೊಂಡಿದ್ದು, ತಂಡದ ಬಲ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ.
ಹೌದು, ಇತ್ತೀಚೆಗಷ್ಟೇ ಭಾರತ ವಿರುದ್ದ ಮುಕ್ತಾಯವಾದ ಸೀಮಿತ ಓವರ್‌ಗಳ ಸರಣಿಯಲ್ಲಿ ಮಿಂಚಿನ ಪ್ರದರ್ಶನ ತೋರಿದ್ದ ಆಲ್ರೌಂಡರ್ ವನಿಂದು ಹಸರಂಗಾ, ವೇಗಿ ದುಸ್ಮಂತ್ ಚಮೀರಾ ಹಾಗೂ ಸಿಂಗಾಪುರದ ಕ್ರಿಕೆಟಿಗರ ಟಿಮ್ ಡೇವಿಡ್ ಆರ್‌ಸಿಬಿ ತಂಡ ಕೂಡಿಕೊಂಡಿದ್ದಾರೆ.
hasaranga
ವನಿಂದು ಹಸರಂಗಾ ಇತ್ತೀಚೆಗಷ್ಟೇ ಮುಕ್ತಾಯವಾದ ಭಾರತ ವಿರುದ್ದದ ಸರಣಿಯಲ್ಲಿ ಅಮೋಘ ಆಲ್ರೌಂಡ್ ಪ್ರದರ್ಶನ ತೋರುವ ಮೂಲಕ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು. ಇನ್ನು ಚಮೀರಾ 5.25ರ ಎಕನಮಿಯಲ್ಲಿ ಬೌಲಿಂಗ್ ಮಾಡಿ 4 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು.
ಐಪಿಎಲ್ ಭಾಗ 2ಕ್ಕೆ ನ್ಯೂಜಿಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಫಿನ್ ಅಲೆನ್ ಹಾಗೂ ವೇಗಿ ಸ್ಕಾಟ್ ಕುಗ್ಗೆಲೆಜಿನ್ ಬಾಂಗ್ಲಾದೇಶ ವಿರುದ್ದ ಸರಣಿಗೆ ಕಿವೀಸ್ ತಂಡ ಕೂಡಿದ್ದರಿಂದ ಯುಎಇ ಚರಣದ ಐಪಿಎಲ್‌ಗೆ ಅಲಭ್ಯರಾಗಿದ್ದಾರೆ.
ಇನ್ನು ಆಸ್ಟ್ರೇಲಿಯಾದ ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್, ಕೇನ್ ರಿಚರ್ಡ್‌ಸನ್ ಹಾಗೂ ಸ್ಪಿನ್ನರ್ ಆಡಂ ಜಂಪಾ ಕೂಡಾ ಯುಎಇ ಚರಣದ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನುವ ಸ್ಪಷ್ಟ ನಿರ್ಧಾರ ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲೇ ಮೂವರು ಹೊಸಬರು ಆರ್‌ಸಿಬಿ ತಂಡ ಕೂಡಿಕೊಂಡಿದ್ದಾರೆ.