ಐಪಿಎಲ್ 2021: ಕನ್ನಡಿಗ ಪ್ರಸಿದ್ಧ್ ಕೃಷ್ಣಗೂ ಅಂಟಿದ ಕೋವಿಡ್ ಸೋಂಕು..!
ಕೋಲ್ಕತ ನೈಟ್ ರೈಡರ್ಸ್ ವೇಗಿ ಪ್ರಸಿದ್ಧ್ ಕೃಷ್ಣಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ. ಇದರೊಂದಿಗೆ ಕೆಕೆಆರ್‌ನ 4ನೇ ಆಟಗಾರನಿಗೆ ಕೊರೋನಾ ವೈರಸ್ ತಗುಲಿದಂತಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಮೇ.08): ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಒಂದು ವಾರ ಕಳೆದಿದ್ದರೂ ಆಟಗಾರರಲ್ಲಿ ಹೊಸದಾಗಿ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದೀಗ ಕನ್ನಡದ ಯುವ ಪ್ರತಿಭೆ, ಕೋಲ್ಕತ ನೈಟ್ ರೈಡರ್ಸ್ ತಂಡದ ವೇಗಿ ಪ್ರಸಿದ್ಧ್ ಕೃಷ್ಣ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದೆ.
ಬಯೋ ಬಬಲ್‌ನೊಳಗೆ ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬಿಸಿಸಿಐ ದಿಢೀರ್ ಎನ್ನುವಂತೆ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಈ ಮೊದಲು ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್‌ಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಇದಾದ ಬಳಿಕ ಕೆಕೆಆರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟಿಮ್ ಸೈಫರ್ಟ್‌ಗೆ ಕೂಡಾ ಕೋವಿಡ್ ವಕ್ಕರಿಸಿದ್ದು ತಡವಾಗಿ ಬೆಳಕಿಗೆ ಬಂದಿತ್ತು. ಇದೀಗ ಹೊಸ ಸೇರ್ಪಡೆ ಎನ್ನುವಂತೆ ಪ್ರಸಿದ್ಧ್ ಕೃಷ್ಣಗೂ ಕೂಡಾ ಕೋವಿಡ್ ಪಾಸಿಟಿವ್ ಬಂದಿದೆ. ಇದರೊಂದಿಗೆ ಕೆಕೆಆರ್ ತಂಡದಲ್ಲೇ ನಾಲ್ವರು ಆಟಗಾರರಿಗೆ ಕೋವಿಡ್ ತಗುಲಿದಂತಾಗಿದೆ.
ಐಪಿಎಲ್ 2021: ಕೆಕೆಆರ್ ವಿಕೆಟ್ ಕೀಪರ್ ಟಿಮ್ ಸೈಫರ್ಟ್‌ಗೆ ಕೊರೋನಾ ಪಾಸಿಟಿವ್..!
ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಕೋವಿಡ್ ಪರೀಕ್ಷಾ ವರದಿ ಹೊರಬಿದ್ದಿದ್ದು, ಪಾಸಿಟಿವ್ ಬಂದಿದೆ ಎಂದು ಇನ್‌ಸೈಡ್ ಸ್ಪೋರ್ಟ್ ವೆಬ್‌ಸೈಟ್ ವರದಿ ಮಾಡಿದೆ. 25 ವರ್ಷದ ಪ್ರಸಿದ್ಧ್ ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ದದ ಸೀಮಿತ ಓವರ್‌ಗಳ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಗಮನ ಸೆಳೆದಿದ್ದರು. ಇದರ ಜತೆಗೆ ಚೊಚ್ಚಲ ಆವೃತ್ತಿಯ ಐಸಿಸಿ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಹಾಗೂ ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಟೆಸ್ಟ್ ಸರಣಿಗೆ ಮೀಸಲು ಆಟಗಾರನಾಗಿ ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದಾರೆ.
ಒಟ್ಟಿನಲ್ಲಿ ಪ್ರಸಿದ್ದ್ ಕೃಷ್ಣ ಆದಷ್ಟು ಬೇಗ ಕೋವಿಡ್ ಮಣಿಸಿ ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ದರಾಗಲಿ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ಹಾರೈಕೆಯಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona