ನವದೆಹಲಿ(ಮೇ.08): 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ ನೈಟ್‌ ರೈಡರ್ಸ್ ತಂಡದಲ್ಲಿದ್ದ ನ್ಯೂಜಿಲೆಂಡ್‌ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟಿಮ್ ಸೈಫರ್ಟ್‌ಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ. ಹೀಗಾಗಿ 26 ವರ್ಷದ ಸೈಫರ್ಟ್ ಕಿವೀಸ್ ತಂಡದ ಇತರೆ ಆಟಗಾರರೊಟ್ಟಿಗೆ ಚಾರ್ಟರ್ ವಿಮಾನದಲ್ಲಿ ತವರಿಗೆ ವಾಪಾಸಾಗಿಲ್ಲ.

ಬಯೋ ಬಬಲ್‌ನೊಳಗೆ ಆಟಗಾರರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟ ಬೆನ್ನಲ್ಲೇ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಕೆಕೆಆರ್ ತಂಡದ ಟಿಮ್ ಸೈಫರ್ಟ್‌ ಎದುರಿಸಿದ ಎರಡು ಪಿಸಿಆರ್ ಟೆಸ್ಟ್‌ನಲ್ಲೂ ಫೇಲ್ ಆಗಿದ್ದರಿಂದ ತವರಿಗೆ ಹೊರಡಲು ಸಾಧ್ಯವಾಗಿಲ್ಲ. ಹೀಗಾಗಿ ಸೈಫರ್ಟ್‌ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಬಯೋ ಬಬಲ್‌ ಲೋಪ ಹೇಗಾಯ್ತು ತಿಳಿಯುತ್ತಿಲ್ಲ: ಸೌರವ್ ಗಂಗೂಲಿ

ಟಿಮ್‌ ಸೈಫರ್ಟ್‌ಗೆ ಕೊಂಚ ಕೋವಿಡ್‌ ಲಕ್ಷಣಗಳು ಕಂಡು ಬಂದಿದ್ದವು. ಹೀಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ಆಸ್ಪತ್ರೆಯಲ್ಲಿ ಕೋವಿಡ್‌ಗೆ ಒಳಗಾಗಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಸಿಎಸ್‌ಕೆ ಬ್ಯಾಟಿಂಗ್‌ ಕೋಚ್ ಮೈಕ್ ಹಸ್ಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಟಿಮ್ ಸೈಫರ್ಟ್‌ಗೆ ಕೋವಿಡ್‌ 19 ತಗುಲಿದ್ದು ದುರಾದೃಷ್ಟಕರ ವಿಚಾರ. ಆದಷ್ಟು ಬೇಗ ಅವರು ಗುಣಮುಖರಾಗಲು ಏನು ಸಹಾಯ ಮಾಡಬೇಕೋ ಅದೆಲ್ಲವನ್ನು ಮಾಡಲಿದ್ದೇವೆ. ಆದಷ್ಟು ಬೇಗ ಅವರು ಕೋವಿಡ್ ಜಯಿಸುವ ವಿಶ್ವಾಸವಿದೆ ಎಂದು ನ್ಯೂಜಿಲೆಂಡ್‌ ಕ್ರಿಕೆಟ್ ಮಂಡಳಿಯ ಕಾರ್ಯನಿರ್ವಾಹಕ ಡೇವಿಡ್ ವೈಟ್‌ ನ್ಯೂಸ್‌ ಹಬ್ ಚಾನೆಲ್‌ಗೆ ತಿಳಿಸಿದ್ದಾರೆ.

ಕೋಲ್ಕತ ನೈಟ್‌ ರೈಡರ್ಸ್‌ ತಂಡದಲ್ಲಿ ದಿನೇಶ್ ಕಾರ್ತಿಕ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿರುವುದರಿಂದ ಟಿಮ್‌ ಸೈಫರ್ಟ್‌ಗೆ ಐಪಿಎಲ್‌ನಲ್ಲಿ ಪಾದಾರ್ಪಣೆ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ.