ನವದೆಹಲಿ(ಜೂ.02): ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಯುಎಇನಲ್ಲಿ ನಡೆಯಲಿರುವ ಐಪಿಎಲ್‌ 14ನೇ ಆವೃತ್ತಿಯ ಭಾಗ-2ಕ್ಕೆ ಕೆಲ ಪ್ರಮುಖ ವಿದೇಶಿ ಆಟಗಾರರು ಗೈರಾಗುವ ಸಾಧ್ಯತೆ ಇದೆ. 

ಬಹುತೇಕ ತಂಡಗಳಿಗೆ ದ್ವಿಪಕ್ಷೀಯ ಸರಣಿಗಳು ಇರುವ ಕಾರಣ, ಐಪಿಎಲ್‌ಗೆ ತಾರಾ ಆಟಗಾರರನ್ನು ಕಳುಹಿಸಲು ಆಗುವುದಿಲ್ಲ ಎಂದು ವಿವಿಧ ರಾಷ್ಟ್ರಗಳ ಕ್ರಿಕೆಟ್‌ ಮಂಡಳಿಗಳು ಬಿಸಿಸಿಐಗೆ ಮಾಹಿತಿ ನೀಡಿವೆ ಎನ್ನಲಾಗಿದೆ. ಒಂದೊಮ್ಮೆ ದುಬಾರಿ ಮೊತ್ತದ ಗುತ್ತಿಗೆ ಹೊಂದಿರುವ ವಿದೇಶಿ ಆಟಗಾರರು ಐಪಿಎಲ್‌ಗೆ ಬರದಿದ್ದರೆ ಫ್ರಾಂಚೈಸಿಗಳಿಗೆ ಲಾಭವಾಗಲಿದೆ. ಆಟಗಾರರು ಆಡಿದಷ್ಟು ಪಂದ್ಯಗಳಿಗೆ ಮಾತ್ರ ಫ್ರಾಂಚೈಸಿಗಳು ವೇತನ ಪಾವತಿಸಲಿವೆ. ಉದಾಹರಣೆಗೆ ಕ್ರಿಸ್‌ ಮೋರಿಸ್‌ಗೆ ರಾಜಸ್ಥಾನ ರಾಯಲ್ಸ್‌ 16.25 ಕೋಟಿ ರು. ನೀಡಿ ಖರೀದಿಸಿತ್ತು. ಐಪಿಎಲ್‌ ಭಾಗ-2ರಲ್ಲಿ ಅವರು ಆಡದಿದ್ದರೆ ರಾಯಲ್ಸ್‌ ಕೇವಲ 7.28 ಕೋಟಿ ರು.ಗಳನ್ನಷ್ಟೇ ಪಾವತಿಸಲಿದೆ.

ವಿದೇಶಿ ಕ್ರಿಕೆಟಿಗರು ಗೈರಾದ್ರೂ ಐಪಿಎಲ್‌ ನಡೆಯುತ್ತೆ: ರಾಜೀವ್ ಶುಕ್ಲಾ

ಐಪಿಎಲ್ ಭಾಗ 2ರಲ್ಲಿ ವಿದೇಶಿ ಆಟಗಾರರು ಪಾಲ್ಗೊಂಡರೆ ಸಂತೋಷ. ಒಂದು ವೇಳೆ ವಿದೇಶಿ ಆಟಗಾರರು ಪಾಲ್ಗೊಳ್ಳದೇ ಹೋದರು ಹೆಚ್ಚಿನ ಪರಿಣಾಮವಾಗುವುದಿಲ್ಲ. ಕೆಲವು ಆಟಗಾರರಿಗಾಗಿ ಟೂರ್ನಿಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಈಗಾಗಲೇ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಖಚಿತಪಡಿಸಿದ್ದಾರೆ. 

ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಒಂದು ವಾರ ಅಥವಾ ಹತ್ತು ದಿನ ಮೊದಲೇ ಮುಗಿಸುವಂತೆ ವಿಂಡೀಸ್‌ ಕ್ರಿಕೆಟ್‌ ಮಂಡಳಿ ಬಳಿ ಬಿಸಿಸಿಐ ಈಗಾಗಲೇ ಮನವಿ ಮಾಡಿಕೊಂಡಿದೆ ಎನ್ನಲಾಗಿದೆ.