ದುಬೈ(ಜೂ.01): ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಬಹುತೇಕ ತಂಡಗಳಿಗೆ ದ್ವಿಪಕ್ಷೀಯ ಸರಣಿಗಳು ಇರುವ ಕಾರಣ, ವಿದೇಶಿ ತಾರಾ ಆಟಗಾರರು ಐಪಿಎಲ್‌ಗೆ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ಹಲವು ವರದಿಗಳು ಪ್ರಕಟಗೊಂಡ ಬೆನ್ನಲ್ಲೇ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಪ್ರತಿಕ್ರಿಯಿಸಿದ್ದಾರೆ. 

ಯುಎಇ ಅಧಿಕಾರಿಗಳೊಂದಿಗೆ ಸಭೆ ನಡೆಸಲು ದುಬೈ ತಲುಪಿರುವ ರಾಜೀವ್ ಶುಕ್ಲಾ, ಅಲ್ಲಿನ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ‘ವಿದೇಶಿ ತಾರೆಯರು ಬರದಿದ್ದರೂ ಐಪಿಎಲ್‌ ನಡೆಯಲಿದೆ. ಭಾರತೀಯ ಆಟಗಾರರು ಲಭ್ಯರಿರಲಿದ್ದಾರೆ. ಕೆಲವರನ್ನು ಹೊರತುಪಡಿಸಿ ಉಳಿದ ವಿದೇಶಿ ಆಟಗಾರರು ಸಹ ಆಗಮಿಸಲಿದ್ದಾರೆ. ಇರುವವರನ್ನು ಬಳಸಿಕೊಳ್ಳಲು ಫ್ರಾಂಚೈಸಿಗಳಿಗೆ ತಿಳಿಸುತ್ತೇವೆ. ಟೂರ್ನಿ ನಡೆಸುವುದಷ್ಟೇ ನಮ್ಮ ಆದ್ಯತೆ’ ಎಂದಿದ್ದಾರೆ.

ಈಗಾಗಲೇ ಇಂಗ್ಲೆಂಡ್ ಕ್ರಿಕೆಟ್‌ ಮಂಡಳಿ ಹಾಗೂ ಕ್ರಿಕೆಟ್ ಅಸ್ಟ್ರೇಲಿಯಾ ಮಂಡಳಿಗಳು ತಮ್ಮ ಆಟಗಾರರನ್ನು ಐಪಿಎಲ್ ಭಾಗ-2ಕ್ಕೆ ಕಳಿಸಿಕೊಡುವ ಕುರಿತಂತೆ ಯಾವುದೇ ಸಕಾರಾತ್ಮಕ ಮಾತುಗಳನ್ನು ಆಡಿಲ್ಲ. ಇನ್ನು ಬಾಂಗ್ಲಾ ಕ್ರಿಕೆಟ್‌ ಮಂಡಳಿ ಸಹಾ ಶಕೀಬ್ ಅಲ್‌ ಹಸನ್‌ಗೆ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ನಿರಪೇಕ್ಷಣ ಪತ್ರ ನೀಡದಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಗುಡ್ ನ್ಯೂಸ್‌: ಐಪಿಎಲ್‌ 2021 ಭಾಗ-2 ಆತಿಥ್ಯ ಎಲ್ಲಿ? ಗೊಂದಲಗಳಿಗೆ ಬಿಸಿಸಿಐ ತೆರೆ

ನಾವು ಈಗಿನಿಂದಲೇ ಎಲ್ಲಾ ಕ್ರಿಕೆಟ್‌ ಮಂಡಳಿ ಹಾಗೂ ಸಂಬಂಧಪಟ್ಟವರ ಜತೆ ಟೂರ್ನಿ ಆಯೋಜನೆಯ ಕುರಿತಂತೆ ಮಾತುಕತೆ ನಡೆಸುತ್ತಿದ್ದೇವೆ. ಕಳೆದ ವರ್ಷ ಹೇಗೆ ಸರಾಗವಾಗಿ ಟೂರ್ನಿ ನಡೆದಿತ್ತೋ ಅದೇ ರೀತಿ ಟೂರ್ನಿ ನಡೆಸಲು ವೇಳಾಪಟ್ಟಿ ಸಿದ್ದಮಾಡಲಿದ್ದೇವೆ. ವಿದೇಶಿ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಂಡರೆ ತುಂಬಾ ಚೆನ್ನಾಗಿರುತ್ತದೆ. ಹಾಗಂತ ವಿದೇಶಿ ಆಟಗಾರರು ಬಂದಿಲ್ಲ ಎಂದು ಟೂರ್ನಿಯನ್ನು ಅರ್ಧದಲ್ಲೇ ಕೈಬಿಡಲು ಸಾಧ್ಯವಿಲ್ಲ. ಲಭ್ಯವಿರುವ ಆಟಗಾರರನ್ನೇ ಬಳಸಿಕೊಂಡು ಟೂರ್ನಿಯಲ್ಲಿ ಪಾಲ್ಗೊಳ್ಳಲು ಫ್ರಾಂಚೈಸಿಗಳಿಗೆ ತಿಳಿಸಲಾಗಿದೆ ಎಂದು ರಾಜೀವ್ ಶುಕ್ಲಾ ತಿಳಿಸಿದ್ದಾರೆ.

ಐಪಿಎಲ್ ಭಾಗ-2 ಮುಂಬರುವ ಸೆಪ್ಟೆಂಬರ್ ಮೂರನೇ ವಾರದಿಂದ ಅಕ್ಟೋಬರ್ 10ರ ವರೆಗೆ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಸದ್ಯ ಬಿಸಿಸಿಐ ಈ ಕುರಿತಂತೆ ಯಾವುದೇ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ.

ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೇಲೆ ಕೊರೋನಾ ವಕ್ರದೃಷ್ಟಿ ಬೀರಿತ್ತು. ಬಯೋ ಬಬಲ್‌ನೊಳಗೆ ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಕೋವಿಡ್ 19 ದೃಢಪಟ್ಟ ಬೆನ್ನಲ್ಲೇ ಬಿಸಿಸಿಐ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು.