ಚಿಗುರುವ ಮುನ್ನವೇ ಚಿವುಟಬೇಡಿ: ಅರ್ಜುನ್ ತೆಂಡುಲ್ಕರ್ ಬೆಂಬಲಕ್ಕೆ ನಿಂತ ಫರ್ಹಾನ್ ಅಖ್ತರ್
ಮುಂಬೈ ಇಂಡಿಯನ್ಸ್ ತಂಡವು ಅರ್ಜುನ್ ತೆಂಡುಲ್ಕರ್‌ರನ್ನು ಐಪಿಎಲ್ ಹರಾಜಿನಲ್ಲಿ ಖರೀದಿಸಿದ್ದ ಬೆನ್ನಲ್ಲೇ ಟೀಕೆಗಳು ವ್ಯಕ್ತವಾಗಿದ್ದವು. ಆದರೆ ಈ ಟೀಕೆಗಳಿಗೆ ಬಾಲಿವುಡ್ ನಟ ಫರ್ಹಾನ್ ಅಖ್ತರ್ ತಿರುಗೇಟು ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಫೆ.21): ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್‌ರನ್ನು ಮೂಲ ಬೆಲೆ 20 ಲಕ್ಷ ರುಪಾಯಿ ನೀಡಿ ಖರೀದಿಸಿತ್ತು.
ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅರ್ಜುನ್ ತೆಂಡುಲ್ಕರ್ ಅವರನ್ನು ಖರೀದಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಸಚಿನ್ ತೆಂಡುಲ್ಕರ್ ಪುತ್ರ ಎನ್ನುವ ಕಾರಣಕ್ಕೆ ಅರ್ಜುನ್ ತೆಂಡುಲ್ಕರ್‌ರನ್ನು ಮುಂಬೈ ಫ್ರಾಂಚೈಸಿ ಖರೀದಿಸಿದೆ. ಇದೊಂದು ರೀತಿಯ ಸ್ವಜನಪಕ್ಷಪಾತ ಎಂಬರ್ಥದಲ್ಲಿ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಯ ಸುರಿಮಳೆ ಸುರಿಸಿದ್ದರು. ಇದೀಗ ಭಾಗ್ ಮಿಲ್ಕಾ ಭಾಗ್ ಸಿನಿಮಾ ಖ್ಯಾತಿಯ ಬಾಲಿವುಡ್ ನಟ ಅರ್ಜುನ್ ತೆಂಡುಲ್ಕರ್ ಬೆಂಬಲಕ್ಕೆ ನಿಂತಿದ್ದಾರೆ.
ಅರ್ಜುನ್ ತೆಂಡುಲ್ಕರ್ ಬಗ್ಗೆ ನನಗನಿಸಿದ್ದನ್ನು ನಾನು ಹೇಳಲೇಬೇಕು. ನಾವು ಒಂದೇ ಜಿಮ್‌ನಲ್ಲಿ ಒಟ್ಟಾಗಿಯೇ ಕಸರತ್ತು ನಡೆಸುತ್ತೇವೆ. ಅರ್ಜುನ್ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು, ಕ್ರಿಕೆಟ್ ಮತ್ತಷ್ಟು ಚೆನ್ನಾಗಿ ಕಲಿಯಲು ಎಷ್ಟು ಕಠಿಣ ಶ್ರಮ ಪಡುತ್ತಾನೆ ಎನ್ನುವುದನ್ನು ಹತ್ತಿರದಿಂದ ನೋಡಿದ್ದೇನೆ. ಆತನ ಮೇಲೆ ಸ್ವಜನಪಕ್ಷದಂತಹ ಕಟು ಪದಗಳ ಬಳಕೆ ಅಮಾನವೀಯ ಹಾಗೂ ಅಸಂಬದ್ಧವಾದದ್ದು. ಆತ ತನ್ನ ತನ್ನ ಪ್ರತಿಭೆ ಅನಾವರಣ ಮಾಡುವ ಮುನ್ನವೇ ಆತನ ಮೇಲೆ ಭಾರವನ್ನು ಹೇರಿ ಆತನ ಉತ್ಸಾಹವನ್ನು ದಯವಿಟ್ಟು ಸಾಯಿಸಬೇಡಿ ಎಂದು ಟ್ವೀಟ್ ಮೂಲಕ ಫರ್ಹಾನ್ ಅಖ್ತರ್ ಮನವಿ ಮಾಡಿಕೊಂಡಿದ್ದಾರೆ.
IPL 2021: ಹರಾಜಿನ ಬಳಿಕ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹೀಗಿದೆ ನೋಡಿ
ಈ ಮೊದಲು ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಹೇಲಾ ಜಯವರ್ಧನೆ ಸಹಾ ಅರ್ಜುನ್ ತೆಂಡುಲ್ಕರ್‌ರನ್ನು ಖರೀದಿಸಿದ್ದರ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದರು. ನಾವು ಅರ್ಜುನ್ ತೆಂಡುಲ್ಕರ್ ಅವರನ್ನು ಖರೀದಿಸಿದ್ದು, ಆತನ ಹಿನ್ನೆಲೆಯ ಕಾರಣದಿಂದಲ್ಲ, ಬದಲಾಗಿ ಆತನ ಕೌಶಲ್ಯ ಹಾಗೂ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಖರೀದಿಸಿದ್ದೇವೆ ಎಂದು ಹೇಳಿದ್ದರು.