* ಇಂದೇ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಸಿಗುವ ಸಾಧ್ಯತೆ* ಐಪಿಎಲ್ ಭಾಗ-2 ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ* ಟಿ20 ವಿಶ್ವಕಪ್ ಆಯೋಜನೆ ಕುರಿತಂತೆ ಬಿಸಿಸಿಐಗಿಂದು ಡೆಡ್‌ಲೈನ್

ನವದೆಹಲಿ(ಜೂ.28): 14ನೇ ಆವೃತ್ತಿಯ ಐಪಿಎಲ್‌ ಭಾಗ-2ರ ವೇಳಾಪಟ್ಟಿ ಸೋಮವಾರ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಬಿಸಿಸಿಐ ಈಗಾಗಲೇ ಟೂರ್ನಿಯನ್ನು ಯುಎಇನಲ್ಲಿ ನಡೆಸುವುದಾಗಿ ಘೋಷಿಸಿದ್ದು, ಸೆಪ್ಟೆಂಬರ್ 17ರಿಂದ ಅಕ್ಟೋಬರ್ 10ರ ವರೆಗೂ ಟೂರ್ನಿ ನಡೆಯುವುದು ಬಹುತೇಕ ಖಚಿತವೆನಿಸಿದೆ. 

ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಗೆ ಕೋವಿಡ್‌ ವಕ್ರದೃಷ್ಟಿ ಬೀರಿತ್ತು. ಮೊದಲ 29 ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದವು. ಆದರೆ ಬಯೋ ಬಬಲ್‌ನೊಳಗಿದ್ದ ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ಕೋವಿಡ್ 19 ಸೋಂಕು ದೃಢಪಟ್ಟ ಬೆನ್ನಲ್ಲೇ ಮೇ 04ರಂದು ಬಿಸಿಸಿಐ ಮಿಲಿಯನ್ ಡಾಲರ್ ಕ್ರಿಕೆಟ್‌ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು.

ಐಪಿಎಲ್ 2021 ಭಾಗ-2 ದಿನಾಂಕ ಖಚಿತಪಡಿಸಿದ ರಾಜೀವ್ ಶುಕ್ಲಾ

ಇದೇ ವೇಳೆ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಯುಎಇಗೆ ಸ್ಥಳಾಂತರ ಮಾಡುವ ಬಗ್ಗೆ ಬಿಸಿಸಿಐ ಸೋಮವಾರ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ. ಟೂರ್ನಿಯ ಆಯೋಜನೆ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲು ಬಿಸಿಸಿಐ, ಐಸಿಸಿ ಬಳಿ ಜೂನ್ 28ರ ವರೆಗೂ ಸಮಯ ಕೇಳಿತ್ತು.

ಒಟ್ಟಿನಲ್ಲಿ ಇಂದು ಸಂಜೆಯೊಳಗೆ ಐಪಿಎಲ್ ಹಾಗೂ ಟಿ20 ವಿಶ್ವಕಪ್‌ ಅಧಿಕೃತ ವೇಳಾಪಟ್ಟಿ ಹೊರಬೀಳುವ ಸಾಧ್ಯತೆ ಬಹುತೇಕ ದಟ್ಟವಾಗಿದೆ.