ನವದೆಹಲಿ(ಆ): ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್ ಸುರೇಶ್ ರೈನಾ ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ನಡೆದ ತಮ್ಮ ಮಾವನ ಬರ್ಬರ ಹತ್ಯೆಯ ಬಗ್ಗೆ ಇದೇ ಮೊದಲ ಬಾರಿಗೆ ತುಟಿಬಿಚ್ಚಿದ್ದು, ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸರಿಗೆ ಹಾಗೂ ಮುಖ್ಯಮಂತ್ರಿ ಅಮರೀಂಧರ್ ಸಿಂಗ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.

13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ದಿಢೀರ್ ಎನ್ನುವಂತೆ ಸುರೇಶ್ ರೈನಾ ದುಬೈನಿಂದ ಭಾರತಕ್ಕೆ ಬಂದಿಳಿದಿದ್ದರು. ಇದರ ಬೆನ್ನಲ್ಲೇ ಹಲವು ಗಾಳಿ ಸುದ್ದಿಗಳು ಹರಿದಾಡಿದ್ದವು. ಈ ಎಲ್ಲಾ ಗಾಸಿಪ್‌ಗಳಿಗೆ ರೈನಾ ಪೂರ್ಣ ವಿರಾಮ ಇಟ್ಟಿದ್ದಾರೆ.

ಧೋನಿ ಜಗತ್ತಿನ ಒಬ್ಬ ಒಳ್ಳೆಯ ವ್ಯಕ್ತಿ: ಸುರೇಶ್ ರೈನಾ

ಪಂಜಾಬ್‌ನಲ್ಲಿ ನನ್ನ ಕುಟುಂಬದವರ ಹತ್ಯೆ ಅತ್ಯಂತ ಭಯನಕವಾದುದ್ದಾಗಿದೆ. ನನ್ನ ಮಾವನವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ನನ್ನ ಅತ್ತೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ದುರಾದೃಷ್ಟವೆಂದರೆ ಇಬ್ಬರು ಕಸಿನ್‌ಗಳ ಪೈಕಿ ಒಬ್ಬರು ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ನಮ್ಮ ಅತ್ತೆಯ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ರೈನಾ ಟ್ವೀಟ್‌ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಅಂದು ರಾತ್ರಿ ಏನು ನಡೆಯಿತು. ಈ ಹೇಯ ಕೃತ್ಯವನ್ನು ಯಾರು ಮಾಡಿದರು ಎಂದು ಇಲ್ಲಿಯ ತನಕ ಗೊತ್ತಾಗಿಲ್ಲ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪಂಜಾಬ್ ಪೊಲೀಸರ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಕೊನೆ ಪಕ್ಷ ಯಾರು ಯಾಕಾಗಿ ಹೀಗೆ ಮಾಡಿದರು ಎಂದಾದರು ತಿಳಿಯಲಿದೆ. ಇಂತಹ ದುಷ್ಟರು ಮತ್ತಷ್ಟು ಇಂತಹ ದುಷ್ಕೃತ್ಯ ಎಸಗುವ ಮುನ್ನ ತಕ್ಕ ಶಿಕ್ಷೆ ನೀಡಬೇಕು ಎಂದು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಆಗಸ್ಟ್ 19ರಂದು ಪಂಜಾಬ್‌ನ ಪಠಾಣ್ ಕೋಟ್‌ನಲ್ಲಿ ತಮ್ಮ ನಿವಾಸದಲ್ಲಿ ಮಲಗಿದ್ದ ಸುರೇಶ್ ರೈನಾ ಅವರ ಮಾವನನ್ನು ಡಕಾಯಿತರ ಗುಂಪು ಭೀಕರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿದೆ. ಇದರ ಜತೆಗೆ ಅವರ ಕುಟುಂಬದ ನಾಲ್ವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಿದೆ. ಈ ಘಟನೆಯಿಂದ ಕುಗ್ಗಿಹೋದ ರೈನಾ 13ನೇ ಆವೃತ್ತಿಯ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ.