ಬೆಂಗಳೂರು(ಸೆ.01): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ತಮ್ಮ ನೆಚ್ಚಿನ ಸ್ನೇಹಿತ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಜಗತ್ತಿನ ಅತ್ಯಂತ ಒಳ್ಳೆಯ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಇದೇ ಕಳೆದ ತಿಂಗಳು ಅಂದರೆ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದಾಗಿ ಕೆಲವೇ ಕ್ಷಣಗಳಲ್ಲಿ ಸುರೇಶ್ ರೈನಾ ಕೂಡಾ ಧೋನಿಯ ಹಾದಿಯನ್ನೇ ಹಿಂಬಾಲಿಸಿದ್ದರು. ಇದಾದ ಬಳಿಕ ಧೋನಿ ಮತ್ತು ರೈನಾ ಸೇರಿದಂತೆ ಚೆನ್ನೈ ಸೂಪರ್‌ ಕಿಂಗ್ಸ್ ತಂಡ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನಾಡಲು ದುಬೈ ವಿಮಾನವನ್ನೇರಿತ್ತು. ಆದರೆ ವೈಯುಕ್ತಿಕ ಕಾರಣಗಳಿಂದಾಗಿ ರೈನಾ ದಿಢೀರ್ ಎಂಬಂತೆ ದುಬೈ ತೊರೆದು ಭಾರತಕ್ಕೆ ಬಂದಿಳಿದಿದ್ದಾರೆ.

ಸುರೇಶ್ ರೈನಾ ಶನಿವಾರ(ಆಗಸ್ಟ್ 29)ರಂದು ಏಕಾಏಕಿ ದುಬೈನಿಂದ ಭಾರತಕ್ಕೆ ಬಂದಿಳಿದದ್ದು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅಚ್ಚರಿ ಮೂಡಿಸಿತ್ತು. 2020ನೇ ಸಾಲಿನ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ನಡೆಯಲಿದೆ.

ರೈನಾ ತವರಿಗೆ ಮರಳಿದ ಬೆನ್ನಲ್ಲೇ ಎಡಗೈ ಬ್ಯಾಟ್ಸ್‌ಮನ್ ಕುರಿತಂತೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ರೈನಾ ಸಂಬಂಧಿಕರು ಹತ್ಯೆಯಾಗಿದ್ದರಿಂದ ತವರಿಗೆ ಬಂದಿದ್ದಾರೆ ಎಂದು ಒಂದು ಕಡೆ ವರದಿಯಾದರೆ, ಮತ್ತೊಂದೆಡೆ ಕೊರೋನಾಗೆ ಹೆದರಿ ತವರಿಗೆ ವಾಪಾಸಾಗಿದ್ದಾರೆ ಎನ್ನಲಾಗಿತ್ತು. ಮತ್ತೆ ಕೆಲವು ಕಡೆ ಧೋನಿ ಅವರಿಗೆ ನೀಡಿದ್ದ ಕೊಠಡಿ ರೀತಿಯ ಕೊಠಡಿ ತಮಗೆ ಬೇಕು ಎಂದು ಜಗಳ ಮಾಡಿಕೊಂಡು ರೈನಾ ಭಾರತಕ್ಕೆ ಬಂದಿದ್ದಾರೆ ಎನ್ನುವ ಸುದ್ದಿಯು ಸಾಕಷ್ಟು ವೈರಲ್ ಆಗಿತ್ತು.

ಯಶಸ್ಸು ನೆತ್ತಿಗೇರಿದೆ: ರೈನಾ ಮೇಲೆ ಕಿಡಿಕಾರಿದ ಸಿಎಸ್‌ಕೆ ಬಾಸ್ ಶ್ರೀನಿವಾಸನ್‌..!

ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ರೈನಾ, ಮಹೇಂದ್ರ ಸಿಂಗ್ ಧೋನಿ ವಿಶ್ವಕ್ರಿಕೆಟ್‌ನ ನಂ.1 ನಾಯಕ ಹಾಗೆಯೇ ಜಗತ್ತಿನ ಅತ್ಯುತ್ತಮ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಅವರೊಬ್ಬ ದೊಡ್ದ ನಾಯಕ. ಹಾಗೆಯೇ ನನಗೆ ಅವರೊಬ್ಬ ಒಳ್ಳೆಯ ಸ್ನೇಹಿತ. ಅವರು ಕ್ರಿಕೆಟ್‌ನಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ನನ್ನ ಪ್ರಕಾರ ಅವರು ವಿಶ್ವಕ್ರಿಕೆಟ್‌ನ ನಂ.1 ನಾಯಕ. ಇದಷ್ಟೇ ಅಲ್ಲ ಅವರೊಬ್ಬ ಒಳ್ಳೆಯ ಮನುಷ್ಯ ಕೂಡಾ ಹೌದು. ಅವರೊಬ್ಬ ಡೌನ್ ಟು ಅರ್ಥ್ ಎಂದು ರೈನಾ ಗುಣಗಾನ ಮಾಡಿದ್ದಾರೆ.

ಧೋನಿಯ ಉದ್ದೇಶ ಯಾವಾಗಲೂ ಒಳ್ಳೆಯದ್ದೇ ಆಗಿರುತ್ತದೆ. ನಾನು ಅವರೊಂದಿಗೆ ಪ್ರಯಾಣ ಮಾಡುವಾಗ, ಕ್ರಿಕೆಟ್‌ ಆಡುವಾಗ ಸಾವಿರಾರು ದಿನಗಳನ್ನು ಕಳೆದಿದ್ದೇನೆ. ಅವರು ಪ್ರಾಮಾಣಿಕತೆಯನ್ನು ಕ್ರಿಕೆಟ್‌ನಲ್ಲಿ ತೋರಿಸಿದ್ದಾರೆ. ಅವರು ದೇಶದ ಪರ ಆಡುವಾಗ ಉಳಿದ 10 ಆಟಗಾರರನ್ನು ಮುನ್ನುಗ್ಗಲು ಬಿಡುತ್ತಿದ್ದರು ಇವರು ಅವರ ಹಿಂದಿರುತ್ತಿದ್ದರು. ಅವರೊಬ್ಬ ನಿಸ್ವಾರ್ಥ ವ್ಯಕ್ತಿ ಎಂದು ರೈನಾ ಹೇಳಿದ್ದಾರೆ.

ಧೋನಿ ಆಟಗಾರರ ಜತೆ ಕುಳಿತು ಹಣ ಮತ್ತು ಖ್ಯಾತಿಯಿಂದ ವಿಚಲಿತರಾಗದಂತೆ ತಿಳಿ ಹೇಳುತ್ತಿದ್ದರು. ಅವರು ತಂಡದ ಜತೆ ಕುಳಿತು ತಮ್ಮ ಪ್ರದರ್ಶನ, ನಾವು ಹೇಗೆ ವಿನಮ್ರವಾಗಿರಬೇಕೆಂದು ಹೇಳುತ್ತಿದ್ದರು ಎಂದಿದ್ದಾರೆ.