ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ರೋಹಿತ್ ಪಾದಕ್ಕೆರಗಿದ ಅಭಿಮಾನಿ!
ಪುಣೆ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅಭಿಮಾನಿ, ಸೆಕ್ಯೂರಿಟಿ ನಿಯಮ ಉಲ್ಲಂಘಿಸಿ ಮೈದಾನದೊಳಕ್ಕೆ ಪ್ರವೇಶಿಸಿದ ಘಟನೆ ನಡೆದಿದೆ. ಈ ಘಟನೆಯಿಂದ ಟೀಂ ಇಂಡಿಯಾ ಹಾಗೂ ಸೆಕ್ಯೂರಿಟಿ ಗಾರ್ಡ್‌ಗಳು ಒಂದು ಕ್ಷಣ ಬೆಚ್ಚಿ ಬಿದ್ದರು.
ಪುಣೆ(ಅ.12): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಅಭಿಮಾನಿಯೊರ್ವ ಮೈದಾನದೊಳಕ್ಕೆ ನುಗ್ಗಿದ ಘಟನೆ ನಡೆದಿದೆ. ಸೌತ್ ಆಫ್ರಿಕಾ ಇನಿಂಗ್ಸ್ ವೇಳೆ ಈ ಕುತೂಹಲ ನಡೆದಿದೆ. 45ನೇ ಓವರ್ ವೇಳೆ ಅಭಿಮಾನಿಯೋರ್ವ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಮೈದಾನದೊಳಕ್ಕೆ ನುಗ್ಗಿ, ನೇರವಾಗಿ ರೋಹಿತ್ ಶರ್ಮಾ ಬಳಿ ಬಂದು ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾನೆ.
ಇದನ್ನೂ ಓದಿ: ಅಶ್ವಿನ್ ಬೌಲಿಂಗ್‌ಗೆ ತಬ್ಬಿಬ್ಬಾದ ಡಿಕಾಕ್: ವಿಡಿಯೋ ವೈರಲ್
ಸೆನುರಾನ್ ಮುತ್ತುಸ್ವಾಮಿ ವಿಕೆಟ್ ಪತನಗೊಂಡಾಗ, ಮುಂದಿನ ಬ್ಯಾಟ್ಸ್‌ಮನ್‌ಗಾಗಿ ಟೀಂ ಇಂಡಿಯಾ ಕ್ರಿಕೆಟಿಗರು ಕಾಯುತ್ತಿದ್ದರು. ಈ ವೇಳೆ ಸೌತ್ ಆಫ್ರಿಕಾದ ವರ್ನಾನ್ ಫಿಲಾಂಡರ್ ಕ್ರೀಸಿಗಿಳಿದರು. ಇದೇ ವೇಳೆ ಭದ್ರತಾ ಸಿಬ್ಬಂದಿ ಕೂಡ ಓಡೋಡಿ ಬಂದರು. ಭದ್ರತಾ ಸಿಬ್ಬಂದಿಗೂ ಮುನ್ನ ಅಭಿಮಾನಿಯೋರ್ವ ಮೈದಾನಕ್ಕೆ ನುಗ್ಗಿದ್ದ, ರೋಹಿತ್ ಶರ್ಮಾಗೆ ಮುತ್ತಿಕ್ಕಲು ಬಂದ ಅಭಿಮಾನಿ ಪಾದಕ್ಕೆರಗಿ ನಮಸ್ಕರಿಸಿದ್ದಾರೆ.
ಇದನ್ನೂ ಓದಿ: ಪುಣೆ ಟೆಸ್ಟ್: ಫಾಲೋ-ಆನ್ ಭೀತಿಯಲ್ಲಿ ಆಫ್ರಿಕಾ
ತಕ್ಷಣವೇ ಭದ್ರತಾ ಸಿಬ್ಬಂದಿ ಅಭಿಮಾನಿಯನ್ನು ವಶಕ್ಕೆ ಪಡೆದರು. ಆದರೆ ಈ ಘಟನೆಯಿಂದ ರೋಹಿತ್ ಕೊಂಚ ವಿಚಲಿತರಾದರೆ, ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ, ಮುಂಬೈಕರ್ ಕಾಲೆಳೆದರು.
ಭಾರತದಲ್ಲಿ ನಡೆಯುತ್ತಿರುವ ಪಂದ್ಯಗಳಲ್ಲಿ ಸೆಕ್ಯೂರಿಟಿ ನಿಯಮ ಉಲ್ಲಂಘಿಸಿ ಮೈದಾನಕ್ಕೆ ಪ್ರವೇಶಿಸುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಮಾಜಿ ನಾಯಕ ಸುನಿಲ್ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭದ್ರತಾ ಸಿಬ್ಬಂದಿಗಳು ಉಚಿತ ಪಂದ್ಯ ನೋಡಲು ಇರುವುದಲ್ಲ. ತಮ್ಮ ಕೆಲಸ ಸರಿಯಾಗಿ ಮಾಡಬೇಕು ಎಂದು ಎಚ್ಚರಿಸಿದ್ದಾರೆ.