ಪುಣೆ ಟೆಸ್ಟ್: ಫಾಲೋ-ಆನ್ ಭೀತಿಯಲ್ಲಿ ಆಫ್ರಿಕಾ
ಪುಣೆ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಆ ತಂಡ ಮೂರನೇ ದಿನದಾಟದ ಲಂಚ್ ವೇಳೆಗೆ 6 ವಿಕೆಟ್ ಕಳೆದುಕೊಂಡು 136 ರನ್ ಬಾರಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಪುಣೆ[ಅ.12]: ಟೀಂ ಇಂಡಿಯಾ ಬೌಲರ್’ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ತತ್ತರಿಸಿದ್ದು, ಇದೀಗ ಫಾಲೋ ಆನ್ ಭೀತಿಗೆ ಸಿಲುಕಿದೆ. ಮೂರನೇ ದಿನದಾಟದ ಲಂಚ್ ವೇಳೆಗೆ ದಕ್ಷಿಣ ಆಫ್ರಿಕಾ ತಂಡ 6 ವಿಕೆಟ್ ಕಳೆದುಕೊಂಡು 136 ರನ್ ಬಾರಿಸಿದ್ದು, ಇನ್ನೂ 465 ರನ್’ಗಳ ಹಿನ್ನಡೆಯಲ್ಲಿದೆ.
ಪುಣೆ ಟೆಸ್ಟ್: ಭಾರತ ಬೃಹತ್ ಮೊತ್ತ, 3 ವಿಕೆಟ್ ಕಳೆದುಕೊಂಡ ಸೌತ್ ಆಫ್ರಿಕಾ!
ಎರಡನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 36 ರನ್ ಬಾರಿಸಿದ್ದ ಆಫ್ರಿಕಾ ತಂಡಕ್ಕೆ ಭಾರತ ಮೂರನೇ ದಿನದಾಟದ ಆರಂಭದಲ್ಲೇ ಆಘಾತ ನೀಡುವಲ್ಲಿ ಯಶಸ್ವಿಯಾಯಿತು. ನೈಟ್ ವಾಚ್’ಮನ್ ಆ್ಯನ್ರಿಚ್ ನೋರ್ಜೆ ಕೇವಲ 3 ರನ್ ಬಾರಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಇನ್ನು ಡಿ ಬ್ರುಯಾನ್’ಗೆ ಉಮೇಶ್ ಯಾದವ್ ಪೆವಿಲಿಯನ್ ಹಾದಿ ತೋರಿಸಿದರು. ಡಿ ಬ್ರುಯಾನ್ ವಿಕೆಟ್ ಒಪ್ಪಿಸುವ ಮುನ್ನ 58 ಎಸೆತಗಳಲ್ಲಿ 6 ಬೌಂಡರಿ ಸಹಿತ 30 ರನ್ ಬಾರಿಸಿ ಸಾಹಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ಪ್ರತಿರೋಧ ತೋರಿದ ಡು ಪ್ಲೆಸಿಸ್-ಡಿಕಾಕ್: ಭಾರತ ನೀಡಿರುವ ಬೃಹತ್ ಮೊತ್ತ ಬೆನ್ನತ್ತಿರುವ ಹರಿಣಗಳ ಪಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಆದರೆ 6ನೇ ವಿಕೆಟ್’ಗೆ ಕ್ವಿಂಟನ್ ಡಿಕಾಕ್ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಜೋಡಿ 75 ರನ್’ಗಳ ಜತೆಯಾಟವಾಡುವ ಮೂಲಕ ಭಾರತೀಯ ಬೌಲರ್’ಗಳ ಎದುರು ಅಲ್ಪ ಪ್ರತಿರೋಧ ತೋರಿದರು. ಅಂದಹಾಗೆ ಇದು ದಕ್ಷಿಣ ಆಫ್ರಿಕಾ ತಂಡದಿಂದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೂಡಿ ಬಂದ ಮೊದಲ ಅರ್ಧಶತಕದ ಜತೆಯಾಟವಾಗಿದೆ. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಅಶ್ವಿನ್ ಯಶಸ್ವಿಯಾಗಿದ್ದಾರೆ. ಡಿಕಾಕ್ 48 ಎಸೆತಗಳಲ್ಲಿ 7 ಬೌಂಡರಿ ಸಹಿತ 31 ರನ್ ಗಳಿಸಿದ್ದ ಡಿಕಾಕ್, ಅಶ್ವಿನ್ ಬೌಲಿಂಗ್’ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ಡು ಪ್ಲೆಸಿಸ್ 21ನೇ ಅರ್ಧಶತಕ: ವೈಜಾಗ್ ಟೆಸ್ಟ್ ಪಂದ್ಯದಲ್ಲೂ ಅರ್ಧಶತಕ ಬಾರಿಸಿದ್ದ ನಾಯಕ ಫಾಫ್ ಡುಪ್ಲೆಸಿಸ್ ಇದೀಗ ಪುಣೆ ಟೆಸ್ಟ್ ಪಂದ್ಯದಲ್ಲೂ ಅರ್ಧಶತಕ ಸಿಡಿಸುವ ಮೂಲಕ ನಾಯಕನಾಟವಾಡಿದ್ದಾರೆ. ಸಾಕಷ್ಟು ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಡು ಪ್ಲೆಸಿಸ್ 64 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಊಟದ ವಿರಾಮದ ವೇಳೆಗೆ ಡುಪ್ಲೆಸಿಸ್ 52 ಹಾಗೂ ಶೆನುರನ್ ಮುತ್ತುಸ್ವಾಮಿ 6 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಮಯಾಂಕ್ ಅಗರ್ ವಾಲ್ ಆಕರ್ಷಕ ಶತಕ, ನಾಯಕ ವಿರಾಟ್ ಕೊಹ್ಲಿ ಅಜೇಯ ದ್ವಿಶತಕದ ನೆರವಿನಿಂದ ಭಾರತ ತಂಡವು ಮೊದಲ ಇನಿಂಗ್ಸ್’ನಲ್ಲಿ 5 ವಿಕೆಟ್ ಕಳೆದುಕೊಂಡು 601 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದೆ.
ಸಂಕ್ಷಿಪ್ತ ಸ್ಕೋರ್:
ಭಾರತ: 601/5
ವಿರಾಟ್ ಕೊಹ್ಲಿ: 254
ದಕ್ಷಿಣ ಆಫ್ರಿಕಾ: 136/6
ಫಾಫ್ ಡು ಪ್ಲೆಸಿಸ್: 52*
[* ಊಟದ ವಿರಾಮದ ವೇಳೆಗೆ]