ಬರ್ಲಿನ್‌(ಫೆ.19): ಕ್ರಿಕೆಟ್‌ ದೇವರು ಎಂದೇ ಕರೆಸಿಕೊಳ್ಳುವ ಸಚಿನ್‌ ತೆಂಡುಲ್ಕರ್‌ಗೆ ಪ್ರತಿಷ್ಠಿತ ಲಾರೆಸ್‌ ಪ್ರಶಸ್ತಿ ದೊರೆತಿದೆ. 2011ರ ಐಸಿಸಿ ಏಕದಿನ ವಿಶ್ವಕಪ್‌ ಗೆಲುವಿನ ಬಳಿಕ ಸಚಿನ್‌ರನ್ನು ಭಾರತೀಯ ಆಟಗಾರರು ಹೆಗಲು ಹೊತ್ತು ವಾಂಖೇಡೆ ಮೈದಾನದ ಸುತ್ತ ಮೆರವಣಿಗೆ ಮಾಡಿದ್ದರು. ಆ ಘಟನೆಯನ್ನು ಕಳೆದ 20 ವರ್ಷಗಳಲ್ಲಿ ಮರೆಯಲಾಗದ ಕ್ಷಣ ಎಂದು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. 

ಸೋಮವಾರ ಇಲ್ಲಿ ನಡೆದ 20ನೇ ವರ್ಷದ ಲಾರಿಯಸ್‌ ಪ್ರಶಸ್ತಿ ಸಮಾರಂಭದಲ್ಲಿ ಆಸ್ಪ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಸ್ಟೀವ್‌ ವಾ ಅವರಿಂದ ಸಚಿನ್‌ ಪ್ರಶಸ್ತಿ ಸ್ವೀಕರಿಸಿದರು. ಆನ್‌ಲೈನ್‌ನಲ್ಲಿ ಅಭಿಮಾನಿಗಳಿಂದ ನಡೆದಿದ್ದ ಮತದಾನದಲ್ಲಿ ಸಚಿನ್‌ ಅತಿಹೆಚ್ಚು ಮತಗಳನ್ನು ಪಡೆದಿದ್ದರು.

ಪ್ರತಿಷ್ಠಿತ ಲಾರೆಸ್‌ ಪ್ರಶಸ್ತಿ ರೇಸ್‌ನಲ್ಲಿ ಸಚಿನ್ ತೆಂಡುಲ್ಕರ್‌

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಚಿನ್‌, ‘ಆ ಕ್ಷಣ ರೋಮಾಂಚನಕಾರಿಯಾಗಿತ್ತು. ವಿಶ್ವಕಪ್‌ ಗೆದ್ದ ಅನುಭವವನ್ನು ಪದಕಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ದೇಶದಲ್ಲಿ ನಡೆಯುವ ಘಟನೆಗಳನ್ನು ಎಷ್ಟು ಬಾರಿ ಜನ ವಿರೋಧಿಸದೆ ಒಪ್ಪಿಕೊಳ್ಳುತ್ತಾರೆ?. ಇಡೀ ದೇಶವೇ ಸಂಭ್ರಮಿಸುವ ಸನ್ನಿವೇಶಗಳು ತೀರಾ ಕಡಿಮೆ’ ಎಂದರು. ‘ಕ್ರೀಡೆ ಎಷ್ಟುಪರಿಣಾಮಕಾರಿ ಹಾಗೂ ಅದು ನಮ್ಮ ಜೀವನಗಳಲ್ಲಿ ಎಂತಹ ಜಾದೂ ನಡೆಸುತ್ತದೆ ಎನ್ನುವುದಕ್ಕೆ ವಿಶ್ವಕಪ್‌ ಗೆದ್ದ ಕ್ಷಣ ಉದಾಹರಣೆ. ನಾನೂ ಈಗಲೂ ಆ ಕ್ಷಣವನ್ನು ಮೆಲುಕು ಹಾಕುತ್ತಾ ಆನಂದಿಸುತ್ತೇನೆ’ ಎಂದು ಸಚಿನ್‌ ಹೇಳಿದರು.

ಟೆನಿಸ್‌ ದಿಗ್ಗಜ ಬೋರಿಸ್‌ ಬೆಕರ್‌, ಸಚಿನ್‌ರನ್ನು ವಿಶ್ವಕಪ್‌ ಗೆದ್ದಾಗ ನಿಮ್ಮ ಭಾವನೆಗಳು ಹೇಗಿದ್ದವು ಎಂದು ಪ್ರಶ್ನಿಸಿದಾಗ ಸಚಿನ್‌ ಟ್ರೋಫಿ ಎತ್ತಿಹಿಡಿಯುವುದು ತಮಗೆಷ್ಟು ಮಹತ್ವದೆನಿಸಿತ್ತು ಎನ್ನುವುದನ್ನು ವಿವರಿಸಿದರು. ‘ನನ್ನ ಪಯಣ 1983ರಲ್ಲಿ ಆರಂಭಗೊಂಡಿತು. ಭಾರತ ಮೊದಲ ಬಾರಿಗೆ ವಿಶ್ವಕಪ್‌ ಗೆದ್ದಾಗ ನನಗೆ 10 ವರ್ಷ. ಎಲ್ಲರೂ ಏಕೆ ಸಂಭ್ರಮಿಸುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗಿರಲಿಲ್ಲ. ಆದರೆ ಎಲ್ಲರೊಂದಿಗೆ ಕೂಡಿ ನಾನೂ ಸಂಭ್ರಮಿಸಿದ್ದೆ. ಆದರೆ ದೇಶದಲ್ಲಿ ಏನೋ ವಿಶೇಷವಾದದ್ದು ನಡೆದಿದೆ ಎಂದು ನನಗೆ ಅರಿವಾಗಿತ್ತು. ಒಂದು ದಿನ ಅಂತಹ ಅನುಭವವನ್ನು ನಾನೂ ಪಡೆಯಬೇಕು ಎಂದುಕೊಂಡೆ. ಹಾಗೆ ನನ್ನ ಪಯಣ ಆರಂಭವಾಯಿತು. 22 ವರ್ಷಗಳ ಕಾಲ ಟ್ರೋಫಿಯನ್ನು ಬೆನ್ನತ್ತಿದೆ. ಯಾವತ್ತೂ ಭರವಸೆ ಕಳೆದುಕೊಳ್ಳಲಿಲ್ಲ. ವಿಶ್ವಕಪ್‌ ಗೆದ್ದಿದ್ದು ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣ. ಈ ಪ್ರಶಸ್ತಿ ನನ್ನದು ಮಾತ್ರವಲ್ಲ, ಇದು ಎಲ್ಲಾ ಭಾರತೀಯರಿಗೂ ಸೇರಲಿದೆ’ ಎಂದು ಸಚಿನ್‌ ವಿವರಿಸಿದರು.

ಹ್ಯಾಮಿಲ್ಟನ್‌, ಮೆಸ್ಸಿಗೆ ಶ್ರೇಷ್ಠ ಕ್ರೀಡಾಪಟು ಗೌರವ

ವರ್ಷದ ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿಯನ್ನು ಬ್ರಿಟನ್‌ನ ಫಾರ್ಮುಲಾ 1 ಚಾಲಕ ಲೂಯಿಸ್‌ ಹ್ಯಾಮಿಲ್ಟನ್‌ ಹಾಗೂ ಅರ್ಜೆಂಟೀನಾದ ಫುಟ್ಬಾಲಿಗ ಲಿಯೋನೆಲ್‌ ಮೆಸ್ಸಿ ಹಂಚಿಕೊಂಡರು. ಅಮೆರಿಕದ ಜಿಮ್ನಾಸ್ಟಿಕ್ಸ್‌ ಪಟು ಸಿಮೋನ್‌ ಬೈಲ್ಸ್‌ ವರ್ಷದ ಮಹಿಳಾ ಕ್ರೀಡಾಪಟು ಪ್ರಶಸ್ತಿ ಸ್ವೀಕರಿಸಿದರು.

1999ರಲ್ಲಿ ಸ್ಥಾಪನೆಯಾದ ಲಾರಿಯಸ್‌ ಸ್ಪೋರ್ಟ್‌ ಫಾರ್‌ ಗುಡ್‌ ಫೌಂಡೇಷನ್‌, ಪ್ರತಿ ವರ್ಷ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಿದೆ. 70ಕ್ಕೂ ಹೆಚ್ಚು ದೇಶಗಳ 1000ಕ್ಕೂ ಹೆಚ್ಚು ಕ್ರೀಡಾ ಪತ್ರಕರ್ತರು, ಕ್ರೀಡಾ ಬರಹಗಾರರು ಆನ್‌ಲೈನ್‌ನಲ್ಲಿ ಮತದಾನ ನಡೆಸಲಿದ್ದಾರೆ. ಅತಿಹೆಚ್ಚು ಮತಗಳನ್ನು ಪಡೆಯುವ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಲಾರಿಯಸ್‌ ಪ್ರಶಸ್ತಿಯನ್ನು ಕ್ರೀಡಾ ಕ್ಷೇತ್ರದ ‘ಆಸ್ಕರ್‌’ ಎಂದೇ ಕರೆಯಲಾಗುತ್ತದೆ.