ಪರ್ತ್(ಫೆ.24): ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾ ತಂಡವನ್ನು ಮಣಿಸಿ ಶುಭಾರಂಭ ಮಾಡಿರುವ ಭಾರತ, ಸೋಮವಾರ ಬಾಂಗ್ಲಾದೇಶ ತಂಡದ ಸವಾಲನ್ನು ಎದುರಿಸಲಿದೆ. 

ಬಾಂಗ್ಲಾ ವಿರುದ್ಧದ ಪಂದ್ಯವನ್ನು ಗೆದ್ದು ಸೆಮಿಫೈನಲ್‌ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳುವ ವಿಶ್ವಾಸದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಪಡೆ ಇದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಲೆಗ್‌ ಸ್ಪಿನ್ನರ್‌ ಪೂನಮ್‌ ಯಾದವ್‌ ಮಾಂತ್ರಿಕ ಸ್ಪೆಲ್‌ನಿಂದಾಗಿ ಭಾರತ, ಆಸ್ಪ್ರೇಲಿಯಾ ವಿರುದ್ಧ 17 ರನ್‌ಗಳ ಗೆಲುವು ಸಾಧಿಸಿತ್ತು. 

ಮಹಿಳಾ ಟಿ20 ವಿಶ್ವಕಪ್: ಪೂನಂ ಮಿಂಚಿನ ದಾಳಿಗೆ ಆಸೀಸ್ ಉಡೀಸ್

ಬ್ಯಾಟಿಂಗ್‌ನಲ್ಲಿ 16 ವರ್ಷ ವಯಸ್ಸಿನ ಶಫಾಲಿ ವರ್ಮಾ, ಜೆಮಿಮಾ ಹಾಗೂ ದೀಪ್ತಿ ಶರ್ಮಾ ಅದ್ಭುತ ಪ್ರದರ್ಶನ ತೋರಿದ್ದರು. ನಾಯಕಿ ಹರ್ಮನ್‌ಪ್ರೀತ್‌ ಹಾಗೂ ಸ್ಮೃತಿ ಮಂಧನಾ ಲಯ ಕಂಡುಕೊಳ್ಳಬೇಕಿದೆ. ಉಳಿದಂತೆ ಬೌಲಿಂಗ್‌ನಲ್ಲಿ ಶಿಖಾ ಪಾಂಡೆ ವಿಕೆಟ್‌ ಪಡೆಯುವ ಭರವಸೆ ಮೂಡಿಸಿದ್ದಾರೆ. ರಾಜೇಶ್ವರಿ, ಆರುಂಧತಿ ರೆಡ್ಡಿ ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದರು. ಅಲ್ಲದೇ ವಿಕೆಟ್‌ ಪಡೆಯುವಲ್ಲಿ ಹಿಂದೆ ಬಿದ್ದಿದ್ದರು. 

ಆಸೀಸ್ ಮಣಿಸಿದ ಪೂನಂ ಹಿಂದಿದೆ ಒಂದು ಸ್ಪೂರ್ತಿಯ ಸ್ಟೋರಿ..!

ಭಾರತ ತಂಡ, ಬಾಂಗ್ಲಾವನ್ನು ಲಘುವಾಗಿ ಪರಿಗಣಿಸುವ ಹಾಗಿಲ್ಲ. 2018ರ ಏಷ್ಯಾ ಕಪ್‌ನಲ್ಲಿ ಬಾಂಗ್ಲಾ ವಿರುದ್ಧ ಭಾರತ ತಂಡ 2 ಬಾರಿ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಅಚ್ಚರಿಯ ಫಲಿತಾಂಶ ನೀಡುವ ಬಾಂಗ್ಲಾ ತಂಡದ ಎದುರು ಹರ್ಮನ್‌ ಪಡೆ ಎಚ್ಚರಿಕೆಯ ಆಟ ಆಡಬೇಕಿದೆ. ‘ಎ’ ಗುಂಪಿನಲ್ಲಿರುವ ಬಾಂಗ್ಲಾದೇಶಕ್ಕೆ ಇದು ಮೊದಲ ಪಂದ್ಯವಾಗಿದೆ.

ಪಂದ್ಯ ಆರಂಭ ಸಂಜೆ: 4.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಲಂಕಾಕ್ಕೆ ಆಸೀಸ್‌ ಸವಾಲು

ಪರ್ತ್‌ನಲ್ಲಿ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಆಸ್ಪ್ರೇಲಿಯಾ, ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಉಭಯ ತಂಡಗಳು ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದವು. ಹೀಗಾಗಿ ಟೂರ್ನಿಯಲ್ಲಿ ಉಳಿಯಲು ಎರಡೂ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ.

ಪಂದ್ಯ ಆರಂಭ ಮಧ್ಯಾಹ್ನ: 12.30ಕ್ಕೆ