ಮಹಿಳಾ ಟಿ20 ವಿಶ್ವಕಪ್: ಪೂನಂ ಮಿಂಚಿನ ದಾಳಿಗೆ ಆಸೀಸ್ ಉಡೀಸ್
ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಿ ಭಾರತ ಶುಭಾರಂಭ ಮಾಡಿದೆ. ಪೂನಂ ಯಾದವ್ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
"
ಸಿಡ್ನಿ(ಫೆ.21): ಪೂನಂ ಯಾದವ್ ಮಾಂತ್ರಿಕ ಸ್ಪಿನ್ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ಕ್ರಿಕೆಟ್ ತಂಡ 17 ರನ್‌ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಹಾಲಿಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ.
ಭಾರತ ನೀಡಿದ್ದ 133 ರನ್‌ಗಳ ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಗೆ ಆಘಾತ ನೀಡುವಲ್ಲಿ ಲೆಗ್ ಸ್ಪಿನ್ನರ್ ಪೂನಂ ಯಾದವ್ ಯಶಸ್ವಿಯಾದರು. ಆಸೀಸ್ ಕೇವಲ 115 ರನ್‌ಗಳಿಗೆ ಸರ್ವಪತನ ಕಂಡಿತು. ಆಸೀಸ್‌ನ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ಪೂನಂ ಯಾದವ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಏಲಿಸಾ ಹೀಲಿ(51) ಹಾಗೂ ಗಾರ್ಡ್ನರ್(34) ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್‌ವುಮೆನ್‌ಗಳು ಎರಡಂಕಿ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ.
ಆಸ್ಟ್ರೇಲಿಯಾ ಒಂದು ಹಂತದಲ್ಲಿ ಉತ್ತಮ ಆರಂಭ ಪಡೆಯಿತು. 10 ಓವರ್ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 67 ರನ್ ಬಾರಿಸಿದ್ದ ಆಸ್ಟ್ರೇಲಿಯಾ, ಪೂನಂ ಲೆಗ್ ಸ್ಪಿನ್ ಬಲೆಗೆ ಬೀಳುವ ಮೂಲಕ ಕಂಗಾಲಾಗಿ ಹೋಯಿತು. ಕೊನೆಯಲ್ಲಿ ಶಿಖಾ ಪಾಂಡೆ ಕೂಡಾ 3 ವಿಕೆಟ್ ಕಬಳಿಸಿ ಆಸೀಸ್ ಬೆನ್ನೆಲುಬನ್ನು ಮುರಿದರು.
ಮಹಿಳಾ ಟಿ20 ವಿಶ್ವಕಪ್: ಆಸೀಸ್‌ಗೆ ಸ್ಫರ್ಧಾತ್ಮಕ ಗುರಿ ನೀಡಿದ ಭಾರತ
ಇದಕ್ಕೂ ಮೊದಲು ದೀಪ್ತಿ ಶರ್ಮಾ(49), ಶೆಫಾಲಿ ವರ್ಮಾ(29) ಹಾಗೂ ರೋಡ್ರಿಗಜ್(26) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡ 132 ರನ್ ಬಾರಿಸಿತ್ತು.