ಮಹಿಳಾ ಏಕದಿನ ವಿಶ್ವಕಪ್‌ನ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ.
ನವಿ ಮುಂಬೈ: ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತೀಯ ಮಹಿಳಾ ತಂಡ ಇಂದು ಬಾಂಗ್ಲಾದೇಶವನ್ನು ಎದುರಿಸಲಿದೆ. ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಬೇಕಾಗಿದ್ದು, ಮಳೆಯಿಂದ ಕೊಂಚ ತಡವಾಗಿ ಆರಂಭವಾಗಲಿದೆ. ಇದೀಗ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಗುಂಪು ಹಂತದ ಕೊನೆಯ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಿಂದ ಸೆಮಿಫೈನಲ್‌ಗೆ ಪ್ರವೇಶಿಸುವುದು ಭಾರತದ ಗುರಿಯಾಗಿದೆ. ನ್ಯೂಜಿಲೆಂಡ್ ವಿರುದ್ಧದ ಭರ್ಜರಿ ಗೆಲುವಿನೊಂದಿಗೆ ಭಾರತೀಯ ಮಹಿಳೆಯರು ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ. ಗುರುವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಎದುರಾಳಿಯಾಗಿದೆ.
ಭಾರತ ತಂಡದಲ್ಲಿ 3 ಬದಲಾವಣೆ:
ಈಗಾಗಲೇ ಸೆಮೀಸ್ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಭಾರತ ತಂಡವು ಈ ಪಂದ್ಯದಲ್ಲಿ ಪ್ರಮುಖ 3 ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್, ಸ್ನೆಹ್ ರಾಣಾ ಹಾಗೂ ಕ್ರಾಂತಿ ಗೌಡ್‌ಗೆ ಈ ಪಂದ್ಯದ ಮಟ್ಟಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಉಮಾ ಚೆಟ್ರಿ ಭಾರತ ತಂಡದ ಪರ ಪಾದಾರ್ಪಣೆ ಮಾಡಿದ್ದಾರೆ. ಸ್ಮೃತಿ ಮಂಧನಾ, ವಿಕೆಟ್ ಕೀಪರ್ ಬ್ಯಾಟರ್ ಉಮಾ ಚೆಟ್ರಿಗೆ ಕ್ಯಾಪ್ ನೀಡುವ ಮೂಲಕ ಭಾರತ ತಂಡಕ್ಕೆ ಸ್ವಾಗತಿಸಿದರು. ಇನ್ನುಳಿದಂತೆ ಅಮನ್‌ಜೋತ್ ಕೌರ್ ಹಾಗೂ ರಾಧಾ ಯಾದವ್ ತಂಡ ಕೂಡಿಕೊಂಡಿದ್ದಾರೆ.
ಸೆಮಿಫೈನಲ್‌ನಲ್ಲಿ ಭಾರತಕ್ಕೆ ಬಲಿಷ್ಠ ಆಸ್ಟ್ರೇಲಿಯಾ ಚಾಲೆಂಜ್
ಪ್ರಾಥಮಿಕ ಹಂತದಲ್ಲಿ ಆಸೀಸ್ ಮಹಿಳಾ ತಂಡ ಮೊದಲ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದರಿಂದ, ಅವರು ಭಾರತವನ್ನು ಎದುರಿಸಲಿದ್ದಾರೆ. ಮೊದಲ ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಗಳು ಮುಖಾಮುಖಿಯಾಗಲಿವೆ. ಈ ತಿಂಗಳ 30 ರಂದು ನವಿ ಮುಂಬೈನಲ್ಲಿ ಪಂದ್ಯ ನಡೆಯಲಿದೆ. ಆಡಿದ ಏಳು ಪಂದ್ಯಗಳಲ್ಲಿ ಒಂದನ್ನೂ ಸೋಲದೆ ಆಸೀಸ್ ಮೊದಲ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಆಸೀಸ್ 13 ಅಂಕಗಳನ್ನು ಹೊಂದಿದೆ. ಆರು ಪಂದ್ಯಗಳನ್ನು ಗೆದ್ದಿದ್ದು, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಭಾರತ ಆರು ಪಂದ್ಯಗಳಲ್ಲಿ ಮೂರು ಗೆಲುವು ಮತ್ತು ಮೂರು ಸೋಲು ಕಂಡಿದ್ದು, ಕೇವಲ ಆರು ಅಂಕಗಳನ್ನು ಹೊಂದಿದೆ. ಇಂದು ಬಾಂಗ್ಲಾದೇಶ ವಿರುದ್ಧ ಗೆದ್ದರೂ ಭಾರತಕ್ಕೆ ತನ್ನ ಸ್ಥಾನವನ್ನು ಸುಧಾರಿಸಲು ಸಾಧ್ಯವಾಗುವುದಿಲ್ಲ.
ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ಗೆ ಒಂಬತ್ತು ಅಂಕಗಳಿವೆ. ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ 10 ಅಂಕಗಳನ್ನು ಹೊಂದಿದೆ. ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ನ್ಯೂಜಿಲೆಂಡ್ ಅನ್ನು ಸೋಲಿಸಿದರೆ, ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಬಹುದು. ಆದರೂ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಮತ್ತೊಂದು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಎರಡು ಮತ್ತು ಮೂರನೇ ಸ್ಥಾನದಲ್ಲಿ ಯಾರು ಇರುತ್ತಾರೆ ಎಂಬುದು ಮಾತ್ರ ಖಚಿತವಾಗಬೇಕಿದೆ. ಏನೇ ಆದರೂ ಭಾರತಕ್ಕೆ ಕಠಿಣ ಸವಾಲು ಕಾದಿದೆ. ಪ್ರಾಥಮಿಕ ಸುತ್ತಿನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾದಾಗ, ಹರ್ಮನ್‌ಪ್ರೀತ್ ಕೌರ್ ಮತ್ತು ತಂಡ ಮೂರು ವಿಕೆಟ್‌ಗಳಿಂದ ಸೋಲನುಭವಿಸಿತ್ತು.
ಭಾರತ ನೀಡಿದ್ದ 331 ರನ್‌ಗಳ ಗುರಿಯನ್ನು ಆಸೀಸ್ 49 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ತಲುಪಿತ್ತು. ಹಾಗಾಗಿ ಭಾರತ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಆಸ್ಟ್ರೇಲಿಯಾ ಅಲ್ಲದೆ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧವೂ ಭಾರತ ಸೋತಿದೆ.


