ಮಹಿಳಾ ಏಕದಿನ ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ, ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಡೆಕ್ವರ್ಥ್ ಲೂಯಿಸ್ ನಿಯಮದಂತೆ 53 ರನ್‌ಗಳ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಪ್ರತೀಕಾ ರಾವಲ್ ಮತ್ತು ಸ್ಮೃತಿ ಮಂಧನಾ ಭರ್ಜರಿ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.
ನವಿ ಮುಂಬೈ: ಆತಿಥೇಯ ಭಾರತ ತಂಡ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಗುರುವಾರ ಲೀಗ್ ಹಂತದ ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಭಾರತ ಡೆಕ್ವರ್ಥ್ ಲೂಯಿಸ್ ನಿಯಮದಂತೆ 53 ರನ್ ಭರ್ಜರಿ ಗೆಲುವು ಸಾಧಿಸಿದೆ. ಆಡಿರುವ 6 ಪಂದ್ಯಗಳಲ್ಲಿ 3ನೇ ಗೆಲುವು ಕಂಡ ಭಾರತ, 6 ಅಂಕದೊಂದಿಗೆ ಪಟ್ಟಿಯಲ್ಲಿ ಅಗ್ರ-4ರಲ್ಲಿ ಸ್ಥಾನ ಖಚಿತ ಪಡಿಸಿಕೊಂಡಿತು. ನ್ಯೂಜಿಲೆಂಡ್‌ಗೂ 6 ಅಂಕ ಗಳಿಸುವ ಅವಕಾಶ ಇದೆಯಾದರೂ, ಹೆಚ್ಚು ಗೆಲುವಿನ ಆಧಾರದಲ್ಲಿ ಭಾರತ ಸೆಮೀಸ್‌ಗೇರಿದೆ. ಕಿವೀಸ್ ಈಗ 1ರಲ್ಲಿ ಮಾತ್ರ ಗೆದ್ದಿದ್ದು, ಮತ್ತೆರಡು ಪಂದ್ಯಗಳು ಮಳೆಗೆ ರದ್ದಾಗಿವೆ.
ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿ
ಮಳೆಯಿಂದಾಗಿ ಓವರ್ ಕಡಿತಗೊಂಡವು. ಮೊದಲು ಬ್ಯಾಟ್ ಮಾಡಿದ ಭಾರತ 49 ಓವರಲ್ಲಿ 340 ರನ್ ಕಲೆಹಾಕಿತು. ಪ್ರತೀಕಾ ರಾವಲ್ 134 ಎಸೆತಗಳಲ್ಲಿ 122, ಸ್ಮೃತಿ ಮಂಧನಾ 95 ಎಸೆತಗಳಲ್ಲಿ 109, ಜೆಮಿಮಾ ರೋಡ್ರಿಗ್ 76 ರನ್ ಸಿಡಿಸಿದರು.
ಭಾರತದ ಇನ್ನಿಂಗ್ಸ್ ಬಳಿಕವೂ ಮಳೆ ಸುರಿದ ಕಾರಣ, ಕಿವೀಸ್ 44 ಓವರ್‌ಗಳಲ್ಲಿ 325 ರನ್ ಗುರಿ ನೀಡಲಾಯಿತು. ಆದರೆ ತಂಡ 8 ವಿಕೆಟ್‌ಗೆ 271 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಬ್ರೂಕ್ ಹಾಲಿಡೇ 81, ಇಸಾಬೆಲ್ಲ ಗೇಜ್ ಔಟಾಗದೆ 65 ರನ್ ಸಿಡಿಸಿದರು. ಆದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಸೆಮೀಸ್‌ನ ನಾಲ್ಕು ತಂಡಗಳು ಅಂತಿಮ
ಭಾರತದ ಗೆಲುವಿನೊಂದಿಗೆ ಸೆಮೀಸ್ ರೇಸ್ ಕೊನೆಗೊಂಡಿತು. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ಭಾರತ ಸೆಮಿಫೈನಲ್ ತಲುಪಿದವು. ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಹೊರಬಿದ್ದವು. ಭಾರತ ಇನ್ನೊಂದು ಪಂದ್ಯ ಗೆದ್ದರೂ 4ನೇ ಸ್ಥಾನಿಯಾಗಿ ಲೀಗ್ ಹಂತ ಕೊನೆಗೊಳಿಸಲಿದೆ.
17 ಶತಕ: ಸ್ಮೃತಿ ನಂ. 1
ಸ್ಮೃತಿ ಮಂಧನಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17ನೇ ಶತಕ ಬಾರಿಸಿದ್ದು, ಗರಿಷ್ಠ ಶತಕ ಬಾರಿಸಿ ದವರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಅವರು ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ (17 ಶತಕ) ದಾಖಲೆ ಸರಿಗಟ್ಟಿದರು ಸಿಡಿಸಿದ್ದಾರೆ. ಇನ್ನು, ಏಕದಿನದಲ್ಲಿ ಸ್ಮೃತಿ 14ನೇ ಶತಕ ಬಾರಿ ಸಿಡಿಸಿದ್ದು ಕೂಡಾ ವಿಶ್ವದಲ್ಲೇ ಜಂಟಿ 2ನೇ ಗರಿಷ್ಠ. ಲ್ಯಾನಿಂಗ್ 15 ಶತಕ ಸಿಡಿಸಿದ್ದಾರೆ.
23 ಇನ್ನಿಂಗ್ಸ್‌ನಲ್ಲೇ ಪ್ರತೀಕಾ 1000 ರನ್
ಪ್ರತೀಕಾ ರಾವಲ್ ಏಕದಿನದ 23 ಇನ್ನಿಂಗ್ಸ್ ಗಳಲ್ಲೇ 1000 ರನ್ ಕಲೆಹಾಕಿದ್ದು, ಜಂಟಿ ದಾಖಲೆ. ಆಸ್ಟ್ರೇಲಿಯಾದ ಲಿಂಡ್ಸ್ ರೀಲರ್ ಕೂಡಾ 1000 ರನ್‌ಗೆ 23 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
